ಚೆನ್ನೈ : ಮುಂದಿನ ತಿಂಗಳ ಎಪ್ರಿಲ್ 12ರಂದು ನಡೆಯಲಿರುವ ಆರ್ ಕೆ ನಗರ ಉಪಚುನಾವಣೆಯಲ್ಲಿ ಎಐಎಡಿಎಂಕೆ ಅಭ್ಯರ್ಥಿಯಾಗಿ, ವಿ ಕೆ ಶಶಿಕಲಾ ಅವರ ಸೋದರ ಸಂಬಂಧಿಯಾಗಿರುವ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಟಿ ಟಿ ಕೆ ದಿನಕರನ್ ಅವರ ಹೆಸರನ್ನು ಪ್ರಕಟಿಸಲಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕಿ ಜೆ ಜಯಲಲಿತಾ ಅವರ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕಾಗಿ ಆರ್ ಕೆ ನಗರ ಕ್ಷೇತ್ರಕ್ಕೆ ಇದೀಗ ಉಪ ಚುನಾವಣೆ ನಡೆಯಲಿದೆ.
ಪಕ್ಷದ ಹೇಳಿಕೆ ಪ್ರಕಾರ ದಿನಕರನ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ನಿರ್ಧಾರವನ್ನು ಪ್ರಧಾನ ಕಾರ್ಯದರ್ಶಿ ವಿ ಕೆ ಶಶಿಕಲಾ ನೇತೃತ್ವದ ಎಐಎಡಿಎಂಕೆ ಸಂಸದೀಯ ಮಂಡಳಿಯ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಭ್ರಷ್ಟಾಚಾರ ಕೇಸಿನಲ್ಲಿ ಸುಪ್ರೀಂ ಕೋರ್ಟಿನಿಂದ ಜೈಲು ಪಾಲಾಗಿರುವ ಶಶಿಕಲಾ ಪ್ರಕೃತ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಬಂಧೀಖಾನೆಯಲ್ಲಿ ಕಾರಾಗೃಹ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಶಶಿಕಲಾ ಅವರ ಸೋದರ ಸಂಬಂಧಿಯಾಗಿರುವ ದಿನಕರನ್ ಅವರು ಮಾಜಿ ಸಂಸದರು. ಜಯಲಲಿತಾ ನಿಧನದ ಬಳಿಕದಲ್ಲಿ ಎಐಎಡಿಎಂಕೆ ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದೆ.