Advertisement

ಅಹ್ಮದಾಬಾದ್‌ ಮಾದರಿ ನಾಲಾ ಅಭಿವೃದ್ಧಿ

11:24 AM Jan 16, 2019 | |

ಹುಬ್ಬಳ್ಳಿ: ಅವಳಿ ನಗರದಲ್ಲಿನ ನಾಲಾಗಳನ್ನುಗುಜರಾತ್‌ನ ಅಹ್ಮದಾಬಾದ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಿ, ವಾಯುವಿಹಾರಕ್ಕೆ ಅನುಕೂಲವಾಗುವಂತೆ ರೂಪಿಸುವ ನಿಟ್ಟಿನಲ್ಲಿ ಅಂದಾಜು 300 ಕೋಟಿ ರೂ. ಪ್ರಸ್ತಾವನೆಯನ್ನು ಸಿದ್ಧಪಡಿಸಿ ರಾಜ್ಯ ಸರಕಾರದ ಮೂಲಕ ಕೇಂದ್ರ ಹಾಗೂ ಎಡಿಬಿಗೆ ರವಾನಿಸಲು ಮಹಾನಗರ ಪಾಲಿಕೆ ಮುಂದಾಗಿದೆ.

Advertisement

ನಾಲಾಗಳ ಅಭಿವೃದ್ಧಿ, ಫ್ಲೈಓವರ್‌ ಇನ್ನಿತರ ಯೋಜನೆಗಳಿಗೆ ಏಷ್ಯನ್‌ ಅಭಿವೃದ್ಧಿ ಬ್ಯಾಂಕ್‌(ಎಡಿಬಿ)ಯಿಂದ ನೆರವು ಪಡೆಯುವ ನಿಟ್ಟಿನಲ್ಲಿ ಒಂದು ತಿಂಗಳೊಳಗೆ ಪ್ರಸ್ತಾವನೆ ಸಿದ್ಧಪಡಿಸಿ ರಾಜ್ಯ ಸರಕಾರಕ್ಕೆ ಸಲ್ಲಿಸಲು ಪಾಲಿಕೆ ನಿರ್ಧರಿಸಿದೆ.

ಅವಳಿ ನಗರದ ಅಭಿವೃದ್ಧಿ ನಿಟ್ಟಿನಲ್ಲಿ ಮಹಾಪೌರ ಸುಧೀರ ಸರಾಫ್ ನೇತೃತ್ವದಲ್ಲಿ ಪಾಲಿಕೆ ಸದಸ್ಯರ ನಿಯೋಗ ಇತ್ತೀಚೆಗೆ ದೆಹಲಿಗೆ ತೆರಳಿ ಸಂಸದ ಪ್ರಹ್ಲಾದ ಜೋಶಿ ಇನ್ನಿತರರ ಮುಂದಾಳತ್ವದಲ್ಲಿ ಕೇಂದ್ರದ ನಗರಾಭಿವೃದ್ಧಿ ಇನ್ನಿತರ ಸಚಿವರನ್ನು ಭೇಟಿ ಮಾಡಿ ಅಭಿವೃದ್ಧಿ ಯೋಜನೆಗೆ ಆರ್ಥಿಕ ನೆರವಿನ ಮನವಿ ಸಲ್ಲಿಸಿತ್ತು.

ದೊಡ್ಡ ಮೊತ್ತದ ಯೋಜನೆಗಳಾಗಿದ್ದು, ಕೇಂದ್ರದಿಂದ ನೇರವಾಗಿ ಆರ್ಥಿಕ ನೆರವು ಕಷ್ಟವಾಗಬಹುದು. ಇದರ ಬದಲು ಎಡಿಬಿ ನೆರವು ಪಡೆಯಲು ರಾಜ್ಯ ಸರಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಸೂಕ್ತ ಎಂಬ ಅಭಿಪ್ರಾಯ ಹಿನ್ನೆಲೆಯಲ್ಲಿ ಪಾಲಿಕೆ ಇದೀಗ ಪ್ರಸ್ತಾವನೆ ಸಿದ್ಧಪಡಿಸಿ ರಾಜ್ಯ ಸರಕಾರಕ್ಕೆ ಸಲ್ಲಿಸಲು ಯೋಜಿಸಿದೆ.

ಯುಜಿಡಿಗೆ ಅಮೃತ ಪ್ಲಸ್‌ ಯೋಜನೆ: ಅವಳಿ ನಗರದಲ್ಲಿ ಈಗಾಗಲೇ ಕೆಲವೊಂದು ಭಾಗದಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿದ್ದು, ಇನ್ನುಳಿದ ಪ್ರದೇಶದಲ್ಲಿ ಒಳಚರಂಡಿ ಕಾಮಗಾರಿಗೆ ಕೇಂದ್ರ ಸರಕಾರ ನೂತನವಾಗಿ ಜಾರಿಗೊಳಿಸಿರುವ ಅಮೃತ ಪ್ಲಸ್‌ ಯೋಜನೆಯಡಿ ನೆರವು ಕಲ್ಪಿಸುವ ಭರವಸೆ ದೊರೆತಿದೆ.

Advertisement

ಈಗಾಗಲೇ ಕೈಗೊಂಡ ಯುಜಿಡಿ ಕಾಮಗಾರಿ ಪೂರ್ಣಗೊಳಿಸಿದ ನಗರಗಳಿಗೆ ಇನ್ನಷ್ಟು ಪ್ರದೇಶಕ್ಕೆ ಯುಜಿಡಿ ಕಾಮಗಾರಿಗಾಗಿ ಅನುದಾನ ನೀಡಿಕೆಗೆ ಕೇಂದ್ರ ಸರಕಾರ ಮುಂದಾಗಿದ್ದು, ಅಮೃತ ಪ್ಲಸ್‌ ಯೋಜನೆಯಡಿ ಇದಕ್ಕೆ ನೆರವು ನೀಡಲಾಗುತ್ತಿದೆ. ಹು-ಧಾದಲ್ಲಿ ಈಗಾಗಲೇ ಕೈಗೊಂಡ ಯುಜಿಡಿ ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ಅಗತ್ಯ ದಾಖಲಾತಿಗಳನ್ನು ಹಾಗೂ ಹೊಸದಾಗಿ ಕೈಗೊಳ್ಳುವ ಕಾಮಗಾರಿ ಪ್ರಸ್ತಾವನೆ ಸಲ್ಲಿಸಿದರೆ, ಅಮೃತ ಪ್ಲಸ್‌ ಯೋಜನೆಯಡಿ ಸೇರಿಸಿ ಅನುದಾನ ನೀಡುವ ಭರವಸೆ ದೊರೆತಿದೆ.

ಒಟ್ಟಾರೆ 20 ಕಿಮೀ ದೂರದ ವರೆಗೆ ಅಭಿವೃದ್ಧಿ
ಉಣಕಲ್ಲನಿಂದ ಆರಂಭವಾಗುವ ದೊಡ್ಡ ನಾಲಾವೊಂದನ್ನು ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಉಳಿದ ಕೆಲವೊಂದು ನಾಲಾಗಳನ್ನು ಅಂದಾಜು 300 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಪ್ರಸ್ತಾವನೆ ಸಿದ್ಧತೆಗೆ ಪಾಲಿಕೆ ಯೋಜಿಸಿದೆ. ನಗರದ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನ ಬಳಿಯ ನಾಲಾ, ಆನಂದ ನಗರ ನಾಲಾ, ಮೇದಾರ ಓಣಿ ನಾಲಾ ಹೀಗೆ ಕೆಲವೊಂದು ನಾಲಾಗಳನ್ನು ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ಒಟ್ಟಾರೆ ಸುಮಾರು 20 ಕಿಮೀ ದೂರದವರೆಗೆ ನಾಲಾ ಅಭಿವೃದ್ಧಿ ಪಡಿಸಲಾಗುತ್ತದೆ.

ವಾಯುವಿಹಾರಕ್ಕೆ ಅನುಕೂಲ
ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನರ್ಮದಾ ನದಿಯನ್ನು ಅಭಿವೃದ್ದಿ ಪಡಿಸಿದ ಮಾದರಿಯಲ್ಲಿ, ಇಲ್ಲಿನ ನಾಲಾಗಳ ಎರಡು ಬದಿಯಲ್ಲಿ ವಾಯು ವಿಹಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ನಾಲಾಗಳ ಎರಡು ಕಡೆ ತಡೆಗೋಡೆಗಳನ್ನು ಎತ್ತರಿಸಿ, ಮೇಲ್ಭಾಗದಲ್ಲಿ ಸ್ಲ್ಯಾಬ್‌ ಹಾಕುವ ಮೂಲಕ ವಾಯುವಿಹಾರಕ್ಕೆ, ವಾಹನ ನಿಲುಗಡೆ ಇತ್ಯಾದಿ ಬಳಕೆಗೆ ಅಭಿವೃದ್ಧಿ ಪಡಿಸುವ ಯೋಜನೆ ಹೊಂದಲಾಗಿದೆ.

ಫ್ಲೈಓವರ್‌ಗೂ ಪ್ರಸ್ತಾವನೆ
ಅವಳಿ ನಗರದಲ್ಲಿ ಫ್ಲೈಓವರ್‌ ನಿರ್ಮಾಣಕ್ಕೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಈಗಾಗಲೇ ಅಂದಾಜು 300 ಕೋಟಿ ರೂ. ನೆರವು ಘೋಷಿಸಿದ್ದು, ಆ ಅನುದಾನದಲ್ಲಿ ಫ್ಲೈಓವರ್‌ ಕಾಮಗಾರಿ ಆರಂಭವಾಗುತ್ತದೆ. ಈ ಯೋಜನೆಗೆ ಬೇಕಾದ ಇನ್ನಷ್ಟು ಹಣವನ್ನು ಸಹ ಎಡಿಬಿಯಿಂದ ಪಡೆಯುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸಲಹೆ ಹಿನ್ನೆಲೆಯಲ್ಲಿ, ಫ್ಲೈಓವರ್‌ಗೆ ಬೇಕಾದ ಹೆಚ್ಚಿನ ಅನುದಾನದ ಪ್ರಸ್ತಾವನೆಯನ್ನು ಸಹ ಪಾಲಿಕೆ ಸಿದ್ಧಪಡಿಸಲಿದೆ.

1100 ಕೋಟಿ ರೂ. ಅಗತ್ಯ
ಅವಳಿ ನಗರದಲ್ಲಿ ಒಟ್ಟಾರೆ ನಾಲಾಗಳ ಅಭಿವೃದ್ಧಿಗೆ ಅಂದಾಜು 1,100 ಕೋಟಿ ರೂ. ಅನುದಾನದ ಅವಶ್ಯಕತೆ ಇದೆ. ಕೇಂದ್ರದ ನಗರಾಭಿವೃದ್ಧಿ ಸಚಿವರಿಗೆ ಅಂದಾಜು 300 ಕೋಟಿ ರೂ. ಬೇಡಿಕೆಯನ್ನು ಪಾಲಿಕೆ ನಿಯೋಗ ನೀಡಿತ್ತು. ಕೇಂದ್ರ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯವರ ಸಲಹೆಯಂತೆ, ಎಡಿಬಿಯಿಂದ ಸಾಲ ಸೌಲಭ್ಯ ಪಡೆಯಲು ರಾಜ್ಯ ಸರಕಾರದ ಮೂಲಕ ಪ್ರಸ್ತಾವನೆ ಸಲ್ಲಿಸಲು ಪಾಲಿಕೆ ಮುಂದಾಗಿದೆ.

ನಾಲಾಗಳ ಅಭಿವೃದ್ಧಿ ಕುರಿತಾಗಿ ಅಂದಾಜು 300 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಹಾಗೂ ಡಿಪಿಆರ್‌ ಸಿದ್ಧಪಡಿಸಿ ಒಂದು ತಿಂಗಳೊಳಗೆ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗುವುದು. ಫ್ಲೈಓವರ್‌ ನಿರ್ಮಾಣ ನಿಟ್ಟಿನಲ್ಲಿ ಕೇಂದ್ರ ಸರಕಾರ 300 ಕೋಟಿ ರೂ. ನೆರವಿನ ಭರವಸೆ ನೀಡಿದ್ದರು. ಇನ್ನುಳಿದ ಅನುದಾನಕ್ಕಾಗಿಯೂ ಪ್ರಸ್ತಾವನೆ ಸಲ್ಲಿಸಲಾಗುವುದು. ಇತ್ತೀಚೆಗೆ ಪಾಲಿಕೆ ನಿಯೋಗ ದೆಹಲಿಗ ತೆರಳಿ ಮನವಿ ಸಲ್ಲಿಸಿದ್ದು, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯವರ ಸಲಹೆಯಂತೆ ರಾಜ್ಯ ಸರಕಾರದ ಮೂಲಕ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.
• ಸುಧೀರ ಸರಾಫ್, ಮಹಾಪೌರ

•ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next