Advertisement

ಅಹಿಂಸಾ ಪಾಲನ ಧರ್ಮ ಇಂದಿನ ಅಗತ್ಯ

12:24 PM May 24, 2017 | Team Udayavani |

ಬೆಂಗಳೂರು: ಕರುಣೆ, ಅಹಿಂಸೆಯನ್ನು ಎಲ್ಲ ಧರ್ಮಗಳೂ ಸಾರುತ್ತಲೇ ಬಂದಿವೆ. ಆದರೆ, ಪಾಲನೆಯಾಗುತ್ತಿಲ್ಲ. ಮೇಲ್ವರ್ಗ ಮತ್ತು ಕೆಳವರ್ಗ ಎಂದು ವಿಭಜಿಸುವ ಧರ್ಮ ಸಮಾಜಕ್ಕೆ ಅತ್ಯಂತ ಅಪಾಯಕಾರಿ ಹಾಗೂ ಅದು ಧರ್ಮವೇ ಅಲ್ಲ ಎಂದು ನೊಬೆಲ… ಶಾಂತಿ ಪ್ರಶಸ್ತಿ ಪುರಸ್ಕೃತ ಧರ್ಮಗುರು ದಲೈಲಾಮ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ 125ನೇ ವರ್ಷಾಚರಣೆ ಪ್ರಯುಕ್ತ ಏರ್ಪಡಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಮನುಷ್ಯ ಕುಲ ಒಂದೇ ಎಂದು ಪರಿಗಣಿಸದೇ ಇರುವುದು ಇಂದಿನ ಅನೇಕ ಸಮಸ್ಯೆಗೆ ಮೂಲವಾಗಿದೆ.

ಬೌದ್ಧ ಧರ್ಮ ಎಲ್ಲೆಡೆ ಪಸರಿಸುತ್ತಿದೆ. ಅಹಿಂಸೆ ಈ ಧರ್ಮದ ಮೂಲ ಮಂತ್ರವಾಗಿದ್ದು, ಕರುಣೆಯನ್ನು ಪ್ರತಿಪಾದಿಸುತ್ತದೆ. ವಿವಿಧ ಧರ್ಮಗಳ ತತ್ವಾದರ್ಶಗಳಲ್ಲಿ ವ್ಯತ್ಯಾಸ ಇರಬಹುದು. ಆದರೆ ಎಲ್ಲಾ ಧರ್ಮಗಳು ಮಾನವೀಯತೆ, ಕರುಣೆ, ಅಹಿಂಸಾ ತತ್ವ ಪಾಲಿಸುತ್ತವೆ. ಅಹಿಂಸಾ ಪಾಲನ ಧರ್ಮ ಇಂದಿನ ಅವಶ್ಯಕ ಎಂದು ಹೇಳಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಈ ಶತಮಾನದ ಮಹನ್‌ ಮಾನವತಾವಾದಿ. ಅವರು ರಚಿಸಿದ ಭಾರತೀಯ ಸಂವಿಧಾನ ಅದ್ಭುತವಾಗಿದ್ದು, ವಿಶ್ವಕ್ಕೆ ಮಾದರಿಯಾಗಿದೆ. ಹಿಂದುಳಿದ ವರ್ಗದವರು ಶ್ರಮ ಜೀವಿಗಳು, ಶ್ರಮದ ಮೂಲಕ ಸಾಧನೆಯ ಶಿಖರ ಏರುತ್ತಿದ್ದಾರೆ. ಪ್ರತಿ ಹಂತದಲ್ಲೂ ಆತ್ಮಸ್ಥೈರ್ಯ ಬೆಳೆಸಿಕೊಂಡಾಗ  ಜೀವನಕ್ಕೆ ಒಂದು ಅರ್ಥ ಬರುತ್ತದೆ ಎಂದು ಸಂದೇಶ ನೀಡಿದರು.

ಭಾರತದ ಪುರಾತನ ಧರ್ಮಗಳಲ್ಲಿ ಭೌದ್ಧಧರ್ಮವೂ ಒಂದಾಗಿದೆ. ಐತಿಹಾಸಿಕವಾಗಿ ಭಾರತವೂ ಬೌದ್ಧ ರಾಷ್ಟ್ರ. ಭಾರತೀಯ ಧರ್ಮ ನಿಜವಾದ ಧರ್ಮ. ಸಾಮಾಜಿಕ ನ್ಯಾಯ ಪಾಲನೆಯಾಗಬೇಕು. ಇಲ್ಲದಿದ್ದಲ್ಲಿ ಒಂದೊಂದೆ ಸಮಸ್ಯೆ ಉದ್ಭವಿಸುತ್ತದೆ. ಹಿಂದುಳಿದ ವರ್ಗಗಳ ಶೋಷಣೆ ಮತ್ತು ಅವರ ಮೇಲಿನ ದಬ್ಟಾಳಿಕೆ ಉಳಿಗಮಾನ್ಯ ಪದ್ಧತಿಯನ್ನು ಎತ್ತಿ ಹಿಡಿದಂತಾಗುತ್ತದೆ  ಎಂದು ಕಳವಳ ವ್ಯಕ್ತಪಡಿಸಿದರು.

Advertisement

ಸಮಾಜಿಕ ಕಂದಕಕ್ಕೆ ಜಾತಿ ಕಾರಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ದೇಶದ ಸಾಮಾಜಿಕ ಅಸಮಾನತೆಯ ಕಂದಕಕ್ಕೆ ಜಾತಿ ವ್ಯವಸ್ಥೆಯೇ ಮೂಲ ಕಾರಣ. ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ಸಿಗಬೇಕಾದರೆ ಜಾತಿಯ ಬೇರುಗಳು ತುಂಡಾಗಬೇಕು. ಅಸ್ಪೃಶ್ಯತೆ, ಅಸಮಾನತೆಯನ್ನು ಕಾನೂನಿನ ಮೂಲಕ ವಿನಾಶ ಮಾಡಲು ಸಾಧ್ಯವಿಲ್ಲ. ಅಸಮಾನತೆಯ ಆಚರಣೆ ಮಾಡುವವರ ಮನಃ ಪರಿವರ್ತನೆ ಮಾಡಬೇಕು ಎಂದು ಹೇಳಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಈ ದೇಶದಲ್ಲಿ ಹುಟ್ಟದೇ ಇದ್ದಿದ್ದರೇ ಅಥವಾ ಸಂವಿಧಾನ ರಚನೆಯಲ್ಲಿ ಪಾಲ್ಗೊಳ್ಳದೇ ಇದ್ದಿದ್ದರೇ ದೇಶದ ಗತಿ ಏನಾಗುತಿತ್ತೋ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅಸ್ಪೃಶ್ಯರು, ಹಿಂದುಳಿದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸಾಮಾಜಿಕ ನ್ಯಾಯ ಒದಗಿಸುವ ಸಂವಿಧಾನವೇ ಇರುತ್ತಿರಲ್ಲವೋ ಏನೋ ಎಂದು ಆತಂಕ ವ್ಯಕ್ತಪಡಿಸಿದರು.

12ನೇ ಶತಮಾನದಲ್ಲಿ ಬಸವಣ್ಣ, ನಂತರ ಬಂದ ಧರ್ಮ ಪ್ರಚಾರಕರು ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ್ದರು. ಜಾತಿ ವ್ಯವಸ್ಥೆಯಿಂದ ಸಾಮಾಜಿಕ ನ್ಯಾಯ ಅಸಾಧ್ಯ ಎಂಬುದನ್ನು ಬಲವಾಗಿ ಪ್ರತಿಪಾದಿಸಿದ್ದರು. ಜಾತಿ ವ್ಯವಸ್ಥೆ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಸಮಾಜ ಜಡತ್ವದಲ್ಲೇ ಇರುತ್ತದೆ ಎಂಬುದನ್ನು ಅಂಬೇಡ್ಕರ್‌ ಹೇಳಿದ್ದರು. ರಾಜಕೀಯ ಸ್ವತಂತ್ರ್ಯದ ಜತೆಗೆ ಸಾಮಾಜಿಕ ಸ್ವಾತಂತ್ರ್ಯವೂ ಅಗತ್ಯ ಎಂದರು.

ಲೋಕಸಭಾ ವಿರೋಧ ಪಕ್ಷದ ನಾಯಕ ಮಲ್ಲಿಖಾರ್ಜುನ ಖರ್ಗೆ, ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ, ಲೋಕೋಪಯೋಗಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಅಂಬೇಡ್ಕರ ನಿವಾಸ್‌ ಯೋಜನೆಯಡಿ ಅರ್ಜಿ ಸಲ್ಲಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಎಲ್ಲರಿಗೂ ಮನೆ ನೀಡಲಾಗುತ್ತದೆ. ಜುಲೈ 21ರಿಂದ 25ರ ವರೆಗೆ ನಡೆಯುವ ಅಂತಾರಾಷ್ಟ್ರೀಯ ಸಮಾವೇಶ ತಯಾರಿ ಆರಂಭವಾಗಿದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ದೇಶದಲ್ಲಿ ಪ್ರತಿನಿತ್ಯ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ದೇಶಕಟ್ಟುವ ಕೆಲಸ ಪ್ರಧಾನಿ ಮೋದಿಯವರೊಬ್ಬರಿಂದಲೇ ಆಗದು. ಎಲ್ಲರೂ ಒಟ್ಟುಗೂಡಿ ದೇಶವನ್ನು ಬಲಪಡಿಸಬೇಕು. ಈ ಕಾರ್ಯವನ್ನು ಯಾರೊಬ್ಬರೂ ಗುತ್ತಿಗೆ ಪಡೆದಿಲ್ಲ.
-ಮಲ್ಲಿಖಾರ್ಜುನ ಖರ್ಗೆ, ಸಂಸದ

ಇದೊಂದು ಸ್ಫೂರ್ತಿದಾಯಕವಾದ ಬೃಹತ್‌ ಸಮಾವೇಶ. ಅರಮನೆ ಮೈದಾನದಲ್ಲಿ  ನಡೆಸಲು ಉದ್ದೇಶಿಸಿದ್ದೇ. ಆದರೆ, ಸಂಘಟಕರು ಸಹಕರಿಸಲಿಲ್ಲ. ಅಪಾರ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದರು. ಎಲ್ಲರಿಗೂ ಅನುಕೂಲವಾಗುವಂತೆ ಮಾಡಿದರೇ ಚೆನ್ನಾಗಿತ್ತು. ಕಾರ್ಯಕ್ರಮ ಆಯೋಜನೆಯಲ್ಲಿ ನಾನೇ ಎಲ್ಲೋ ಎಡವಿದ್ದೇನೆ ಅನಿಸುತ್ತಿದೆ.
-ಎಚ್‌.ಆಂಜನೇಯ, ಸಮಾಜ ಕಲ್ಯಾಣ ಇಲಾಖೆ ಸಚಿವೆ 

Advertisement

Udayavani is now on Telegram. Click here to join our channel and stay updated with the latest news.

Next