Advertisement

ಚಳಿಗಾಲದ ಆಗುಂಬೆಯ ಸೊಬಗೇ ಬೇರೆ !

12:38 AM Jan 30, 2020 | Sriram |

ಆಗುಂಬೆಯಾ ಪ್ರೇಮ ಸಂಜೆಯಾ ಎಂದು ಮೇರು ನಟ ಡಾ| ರಾಜಕುಮಾರ್‌ ಮತ್ತು ನಟಿ ಮಾಧವಿಯ ಹಾಡಿನ ದೃಶ್ಯ ನೋಡಿರಬಹುದು. ಸೂರ್ಯಾಸ್ತಮಾನಕ್ಕೆ ಹೇಳಿ ಮಾಡಿಸಿದ ಆಗುಂಬೆಗೆ ಎರಡು ರೂಪಗಳಿವೆ. ಸಾಮಾನ್ಯವಾಗಿ ನಾವು ಮಳೆ ಸುರಿಯುವಾಗ ಆಗುಂಬೆಯನ್ನು ನೆನಪು ಮಾಡಿಕೊಳ್ಳುತ್ತೇವೆ.

Advertisement

ಆದರೆ ಅದರ ಚಳಿಗಾಲದ ವಿಶ್ವರೂಪವನ್ನು ನೋಡಿದವರೇ ಕಡಿಮೆ. ಚಳಿಗಾಲದಲ್ಲಿ ಮಂಜು ಆವರಿಸಿಕೊಂಡ ಆಗುಂಬೆಯನ್ನು ನೋಡಲಿಕ್ಕೆ ಇನ್ನೂ ಚೆಂದ. ಅಲ್ಲಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಕುಂದಾದ್ರಿ ಸೂರ್ಯೋದಯಕ್ಕೆ ಪ್ರಸಿದ್ಧ. ಈ ಚುಮು ಚುಮು ಚಳಿಯಲಿ ಸಾಗಿದರೆ, ನಿಮ್ಮನ್ನೇ ಆವರಿಸಿಕೊಳ್ಳುತ್ತದೆ ಬೆಳಗಿನ ಮೋಡ ಮತ್ತು ಮಂಜು.

ಆಂಗುಬೆ ಘಾಟಿ ಹತ್ತುವುದೇ ಒಂದು ರೋಚಕ ಅನುಭವ ನೀಡುವಂಥದ್ದು. ಮೇಲೆ, ಕೆಳಗೆ ಎನ್ನುತ್ತಾ ಹಾವು ಏಣಿ ಆಟವಾಡುವಂತೆ ವಾಹನಗಳು ಚಲಿಸುವ ಕ್ರಮವೇ ಸಾಹಸ ವೆನಿಸುತ್ತದೆ. ಸೋಮೇಶ್ವರದಿಂದ ಮೇಲಕ್ಕೇರಿ ಬಂದರೆ ಸೂರ್ಯಾಸ್ತ, ದೋಣಿ ವಿಹಾರ ಕೇಂದ್ರವೂ ಎಲ್ಲವೂ ಲಭ್ಯ.

ಹಲವು ತಾಣಗಳು
ಇದರ ಸುತ್ತಮುತ್ತಲೂ ಹಲವಾರು ಚೆಂದದ ತಾಣಗಳಿವೆ. ಆಗುಂಬೆ ಸರ್ಕಲ್‌ನಿಂದ ಕೊಪ್ಪ- ಶೃಂಗೇರಿಗೆ ಹೋಗುವ ಮಾರ್ಗದಲ್ಲಿ ತುಸು ತಿರುಗಿ ಹೋದರೆ ಜೋಗಿಗುಂಡಿ ಸೊಬಗು ಕಾಣಬಹುದು. ಇಲ್ಲಿ ಸರ್ಕಸ್‌ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ! ಹರಿಯುವ ನೀರಿನ ಝರಿಯ ಧಾರೆಯ ಖುಷಿಯೇ ಬೇರೆ.

ಇನ್ನೊಂದು ಸೊಬಗಿನ ತಾಣ ಒನಕೆ ಅಬ್ಬಿ!
ಇದೊಂದು ಆಕರ್ಷಕ ಜಲಪಾತ! ಈ ಅಬ್ಬಿ ನೋಡಲು ಸೂರ್ಯಾಸ್ತದ ಗೇಟ್‌ ಸಮೀಪದಿಂದ ಕಾಡುದಾರಿಯಲ್ಲಿ ಸಾಗಬೇಕು. ಮಳೆಗಾಲದಲ್ಲಿ ಈ ಜಲಪಾತ ಧುಮ್ಮಿಕ್ಕುತ್ತದೆ. ಜಿಗಣೆ ಕಾಟವೂ ಇರುತ್ತದೆ. ಸೂಕ್ತ ಮಾರ್ಗದರ್ಶಕರನ್ನು ಹೊಂದು ವುದು ಅವಶ್ಯ. ಇದರೊಂದಿಗೆ ದೊಡ್ಡಗುಡ್ಡವನ್ನೂ ನೋಡಬಹುದು. ಈಗ ದಟ್ಟ ಮಂಜು ಇರುವ ಕಾರಣ ಬೆಳಗ್ಗೆ ಮತ್ತು ಸಂಜೆ ವಾಹನ ಚಲಾಯಿಸುವಾಗ ಎಚ್ಚರ ಅಗತ್ಯ.

Advertisement

ದೋಣಿ ವಿಹಾರ ಕೇಂದ್ರ
ಆಗುಂಬೆ ಸೂರ್ಯಾಸ್ತ ವೀಕ್ಷಣೆ ಪ್ರದೇಶದ ಪಕ್ಕದಲ್ಲೇ ಇರುವ ಕೆರೆಯಲ್ಲಿನ ದೋಣಿ ವಿಹಾರ ಮತ್ತಷ್ಟು ಆಕರ್ಷಕ. ಈ ಸ್ಥಳಕ್ಕೆ ಮಳೆಕಾಡು ವಿಶ್ರಾಂತಿಧಾಮ ಎಂದು ಕರೆಯುತ್ತಾರೆ. ಮಳೆಕಾಡು ವಿಶ್ರಾಂತಿಧಾಮದ ಪ್ರವೇಶ ಶುಲ್ಕ 2 ರೂ. ಕೆರೆಯಲ್ಲಿ ಪೆಡಲ್‌ ಬೋಟ್‌ಗಳನ್ನು ಇಡಲಾಗಿದ್ದು ಇದರಲ್ಲಿ ವಿಹರಿಸಲು ಒಬ್ಬರಿಗೆ 40 ರೂ. ಪಾವತಿಸ ಬೇಕು. ಆಗುಂಬೆಯ ಗ್ರಾಮ ಅರಣ್ಯ ಸಮಿತಿ ವಿಶ್ರಾಂತಿಧಾಮದ ಹೊಣೆ ಹೊತ್ತಿದೆ.

-ದಯಾನಂದ ಬಳ್ಕೂರು

Advertisement

Udayavani is now on Telegram. Click here to join our channel and stay updated with the latest news.

Next