Advertisement
ದಕ್ಷಿಣ ಕನ್ನಡ ಜಿಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘದ ಕಾರ್ಯದರ್ಶಿ ಚಿತ್ರಲೇಖಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ 2012ರಿಂದ ಅತಿಥಿ ಶಿಕ್ಷಕರನ್ನು ನೇಮಕ ಮಾಡುತ್ತಿದ್ದು, ರಾಜ್ಯಾದ್ಯಂತ 30,000 ಮಂದಿ, ದ.ಕ.ದಲ್ಲಿ 750 ಮಂದಿ ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ 7,500 ರೂ. ಗೌರವಧನ ನೀಡುತ್ತಿದ್ದರು. ಹಲವು ಮನವಿಗಳ ಬಳಿಕ ಸರಕಾರ ಈ ಶೈಕ್ಷಣಿಕ ವರ್ಷದಿಂದ 10,000 ರೂ.ಗಳಿಗೆ ಏರಿಕೆಯಾಗಿದೆ. ಈ ಬಾರಿ ಮೇ 15ರಿಂದ ಅತಿಥಿ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಇದುವರೆಗೆ ಬಿಡಿಗಾಸೂ ನೀಡಿಲ್ಲ ಎಂದರು.
ಅಧ್ಯಕ್ಷೆ ಚಂದ್ರಿಕಾ ಮಾತನಾಡಿ, ಸೆ. 25ರೊಳಗೆ ಗೌರವಧನ ಬಿಡುಗಡೆ ಮಾಡ ದಿದ್ದರೆ ಸೆ. 26ರಂದು ಜಿಲ್ಲಾ ಮಟ್ಟದಲ್ಲಿ ಮಂಗಳೂರಿನ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು. ಗೌರವಧನಕ್ಕಾಗಿ ಪದೇ ಪದೆ ಪ್ರತಿಭಟನೆ ಮಾಡುವ ಸ್ಥಿತಿ ಉಂಟಾಗಿದೆ. ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿರುವ ಅತಿಥಿ ಶಿಕ್ಷಕರು ಕಂಗಾಲಾಗಿದ್ದಾರೆ. ಶಿಕ್ಷಕರ ನೇಮಕಾತಿಯೂ ನಡೆಯುತ್ತಿಲ್ಲ. ಪರೀಕ್ಷೆಗಳನ್ನು ಬರೆಯಲು ಶುಲ್ಕ ಪಾವತಿಸುವುದಕ್ಕೂ ಹಣವಿಲ್ಲದಂತಾಗಿದೆ. ಶಿಕ್ಷಣ ಪಡೆದರೂ ಮನೆಯವರನ್ನೇ ಆರ್ಥಿಕವಾಗಿಯೂ ಆಶ್ರಯಿಸ ಬೇಕಾದ ಸ್ಥಿತಿ ಉಂಟಾಗಿದೆ. ಸ್ವಾಭಿಮಾನಕ್ಕೂ ಧಕ್ಕೆಯಾಗುತ್ತಿದೆ. ಉದ್ಯೋಗದ ಭದ್ರತೆಯೂ ಇಲ್ಲ. ಕನಿಷ್ಠ ವೇತನವೂ ಸಿಗುತ್ತಿಲ್ಲ. ಸರಕಾರ ಗೌರವಧನವನ್ನು ಪ್ರತೀ ತಿಂಗಳು ನೀಡಬೇಕು, ಅನುಭವದ ಆಧಾರದ ಮೇಲೆ ಪ್ರತೀ ವರ್ಷ ಈಗ ಕರ್ತವ್ಯ ಸಲ್ಲಿಸುತ್ತಿರುವವವರನ್ನೇ ಮುಂದು ವರಿಸಬೇಕು, ಗೌರವಧನವನ್ನು ಕನಿಷ್ಠ ವೇತನಕ್ಕೆ ನಿಗದಿಗೊಳಿಸಬೇಕು ಎಂದು ಹೇಳಿದರು.
ಸಂಘದ ತಾಲೂಕು ಕಾರ್ಯದರ್ಶಿ ಭವ್ಯಾ, ತಾಲೂಕು ಉಪಾಧ್ಯಕ್ಷರಾದ ಸೌಮ್ಯಾ, ಕವಿತಾ ಪತ್ರಿಕಾಗೋಷ್ಠಿಯಲ್ಲಿದ್ದರು.