Advertisement

Soans farm Moodabidri; ಮೂಡುಬಿದಿರೆ- ಕೃಷಿ ಋಷಿ ಡಾ. ಎಲ್.ಸಿ . ಸೋನ್ಸ್ ಇನ್ನಿಲ್ಲ

12:16 PM Apr 05, 2023 | Team Udayavani |

ಮೂಡುಬಿದಿರೆ: ಕೃಷಿ ಋಷಿ ಮೂಡುಬಿದಿರೆಯ ಸೋನ್ಸ್ ಫಾರ್ಮ್ ನ ಡಾ. ಎಲ್. ಸಿ. ಸೋನ್ಸ್ ಅವರು ಎ.5 ಬುಧವಾರ ಮುಂಜಾನೆ ಸ್ವಗೃಹದಲ್ಲಿ ನಿಧನ ಹೊಂದಿದರು. ಕೃಷಿರಂಗದಲ್ಲಿ ಅವರೊಬ್ಬ ಲೆಜೆಂಡರಿ ವ್ಯಕ್ತಿಯಾಗಿದ್ದರು.

Advertisement

ಡಾ. ಎಲ್.ಸಿ . ಸೋನ್ಸ್ ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಹಾಗೂ ತನ್ನೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡ  ಸಹೋದರ ಐ.ವಿ. ಸೋನ್ಸ್ ಇವರನ್ನು ಅಗಲಿದ್ದಾರೆ.

1934ರ ಎಪ್ರಿಲ್ 4ರಂದು ಜನಿಸಿದ ಲಿವಿಂಗ್ ಸ್ಟನ್ ಚಂದ್ರಮೋಹನ ಸೋನ್ಸ್ ಮಂಗಳವಾರ 89 ವರ್ಷ ತುಂಬಿ 90ಕ್ಕೆ ಕಾಲಿರಿಸಿದ್ದರು. ಮೂಡುಬಿದಿರೆ ಪಡುಮಾರ್ನಾಡು ಗ್ರಾಮದ ಬನ್ನಡ್ಕದಲ್ಲಿ ಕೃಷಿ ಕುಟುಂಬದ ಕುಡಿ ಇವರು.

ತನ್ನ ಜೀವನವನ್ನು ಕೃಷಿಗಾಗಿ ಮುಡಿಪಾಗಿಟ್ಟವರು ಸೋನ್ಸ್. ಸಸ್ಯ ಶಾಸ್ತ್ರದಲ್ಲಿ ಪದವಿ, ಮೊಂಟಾನ ವಿ.ವಿ.ಯಿಂದ ಪಿಎಚ್ ಡಿ. ಪದವಿ ಪಡೆದುಕೊಂಡಿದ್ದರು.

ಕೃಷಿ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ಮಾಡಿರುವ ಸೋನ್ಸ್ ಅನಾನಸು ಕೃಷಿ, ಬಿದಿರಿನ ವಿವಿಧ ಪ್ರಬೇಧ, ದೇಶ-ವಿದೇಶಗಳ ಹಣ್ಣು-ತರಕಾರಿ ಪ್ರಬೇಧಗಳನ್ನು ಮೂಡುಬಿದಿರೆ ಬನ್ನಡ್ಕದ ಮಣ್ಣಿನಲ್ಲಿ ಬೆಳೆಸಿ, ಅದರಿಂದ ಫಸಲು ಹಾಗೂ ಲಾಭಗಳಿಸಿದವರಾಗಿದ್ದಾರೆ. ಜಲ ತಜ್ಞರಾಗಿಯೂ ವಿಶೇಷ ಪರಿಣಿತಿಯನ್ನು ಹೊಂದಿದ್ದರು.

Advertisement

ಸಮಾಜಮುಖಿ ವ್ಯಕ್ತಿತ್ವ:

ಕೃಷಿಯ ಜೊತೆಗೆ ಸಾಮಾಜಿಕವಾಗಿಯೂ ಗುರುತಿಸಿಕೊಂಡಿರುವ ಸೋನ್ಸ್ ಹಲವಾರು ಸಂಘ-ಸಂಸ್ಥೆಗಳ ಸಕ್ರಿಯ ಪದಾಧಿಕಾರಿಯಾಗಿದ್ದರು. ಅಮೇರಿಕನ್ ಸೊಸೈಟಿ ಆಫ್ ಡೌಸರ್ ಸದಸ್ಯ, ಬ್ರಿಟಿಸ್ ಸೊಸೈಟಿ ಆಫ್ ಡೌಸರ್ ಅಜೀವ ಸದಸ್ಯ.

ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮದ ಸಲಹೆಗಾರಾಗಿ ಹಲವಾರು ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶ್ರೀಮಹಾವೀರ ವಿಧ್ಯಾವರ್ಧಕ ಸಂಘ, ಶ್ರೀಮಹಾವೀರ ಕಾಲೇಜು ಆಡಳಿತ ಮಂಡಳಿ ಸದಸ್ಯ, ರೋಟರಿ ಕ್ಲಬ್ ಸ್ಥಾಪಕ ಸದಸ್ಯ, ಮರಣ ಕಾಲದವರೆಗೂ ಸಕ್ರಿಯ. ರೋಟರಿ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾಗಿ, ಸಮಾಜ ಮಂದಿರ ಸಭಾದ ಮಾಜಿ ಅಧ್ಯಕ್ಷರಾಗಿ ಪ್ರಸ್ತುತ ಸದಸ್ಯ.  ಕೃಷಿ ವಿಚಾರ ವಿನಿಮಯ ಕೇಂದ್ರದಲ್ಲೂ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಕೃಷಿ ಮತ್ತು ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಅಲ್ಫ್ರೇಡ್ ಸೋನ್ಸ್ ಫೌಂಡೇಶನ್ ಸ್ಥಾಪಿಸಿದ್ದಾರೆ.

ಗೌರವ: 

ಬೆಂಗಳೂರು ಕೃಷಿ ವಿ.ವಿಯಿಂದ ಉತ್ತಮ ತೋಟಗಾರಿಕಾ ಸಾಧಕ ಪ್ರಶಸ್ತಿ, ಅಮೇರಿಕ ಮೊಟಾನಾ ವಿ.ವಿಯಿಂದ ವಿಶೇಷ ಹಳೆ ವಿದ್ಯಾರ್ಥಿ ಪ್ರಶಸ್ತಿ ಪಡೆದಿದ್ದು, ಅಮೇರಿಕದ ಹಳೆ ವಿದ್ಯಾರ್ಥಿಗಳನ್ನು ಹೊರತು ಪಡಿಸಿ, ಅನ್ಯ ದೇಶದಿಂದ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಸೋನ್ಸ್.

2006 ಸಾಧಕ ಪ್ರಶಸ್ತಿ, 2004 ದ.ಕ ಜಿಲ್ಲಾ ರಾಜೋತ್ಸವ, ಹಿರಿಯಡ್ಕದ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದಿಂದ ಬೆಸ್ಟ್ ಫಾರ್ಮರ್ ಪ್ರಶಸ್ತಿ, 2010-ಬಾಗಲಕೋಟೆ ತೋಟಗಾರಿಕಾ ವಿ.ವಿಯಿಂದ ರಾಷ್ಟ್ರಮಟ್ಟದ ಪ್ರಶಸ್ತಿ, ವಿಶ್ವ ತುಳು ಸಮ್ಮೇಳನ ಸನ್ಮಾನ ಸಹಿತ ದೇಶ ವಿದೇಶಗಳ ಹಲವಾರಯ ಸಂಘ ಸಂಸ್ಥೆಗಳು ಸೋನ್ಸ್ ಅವರ ಸಾಧನೆಯನ್ನು ಗೌರವಿಸಿದೆ. ನಡೆದ ವಿಶ್ವ ನೀರಾವರಿ ಸಮ್ಮೇಳನಕ್ಕೆ ಭಾಗವಹಿಸಿ, ಅವುಗಳ ಮಾದರಿಯನ್ನು ತನ್ನೂರಿನಲ್ಲಿ ಪ್ರಯೋಗಿಸಿದ್ದಾರೆ.

ತರಂಗದಲ್ಲಿ ಅವರ ಕುರಿತಾದ ಮುಖಪುಟ ಲೇಖನ 1984 ಡಿ. 16-22 ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು.

ಪುತ್ರಿ ಇಂಗ್ಲೆಂಡ್ ನಿಂದ ಬರಬೇಕಾದ ಕಾರಣ ಅಂತ್ಯಕ್ರಿಯೆ ನಾಳೆ ನಡೆಯುವ ಸಾಧ್ಯತೆ ಇದೆ ಎಂಬುವುದು ಸದ್ಯದ ಮಾಹಿತಿ.

Advertisement

Udayavani is now on Telegram. Click here to join our channel and stay updated with the latest news.

Next