Advertisement

ಬೆಳೆ ಸರ್ವೇ ಆ್ಯಪ್‌ ಎಡವಟ್ಟು : ದಾಖಲೀಕರಣದಲ್ಲಿ ನಂಬರ್‌ ತಪ್ಪಿದರೆ ಜೋಕೆ!

02:16 PM Sep 03, 2020 | sudhir |

ಶಿರಸಿ: ದೇಶದಲ್ಲೇ ಪ್ರಥಮ ಬಾರಿಗೆ ಅನುಷ್ಠಾನಕ್ಕೆ ತಂದ ಬೆಳೆ ಸರ್ವೇ ಆ್ಯಪ್‌ ಬಳಕೆಗೆ ರೈತರು ಮುಂದಾಗಿದ್ದಾರೆ. ಆದರೆ ಅಪ್ಪಿತಪ್ಪಿ ಸ್ವತಃ ಅಥವಾ ರೈತರ ಪರವಾಗಿ ಮೊಬೈಲ್‌ ನಂಬರ್‌ ದಾಖಲಿಸುವಾಗ ಕೊಂಚ ವ್ಯತ್ಯಾಸ ಆದರೂ ಜೋಕೆ. ಎಷ್ಟೇ ಸಲ ಮೊಬೈಲ್‌ ಸಿಮ್‌ ಬಳಸಿ ಅಪ್‌ ಲೋಡ್‌ ಮಾಡಿದರೂ ಹಳೆಯ ನಂಬರ್‌ ನಂಟು ತಪ್ಪೋದಿಲ್ಲ!

Advertisement

ರೈತರು ಒಮ್ಮೆ ಒಂದು ಮೊಬೈಲ್‌ ನಂಬರ್‌ ಬಳಸಿದರೆ ಅದು ಕೊನೇ ತನಕ ಅಧಿಕೃತವಾಗಿ ಉಳಿಯುವ ಅಪಾಯವಿದೆ. ಈ ಕಾರಣದಿಂದ ಸರ್ವೆ ವೇಳೆ ಹತ್ತು ಸಂಖ್ಯೆಯಲ್ಲಿ ಒಂದೇ ಒಂದು ಸಂಖ್ಯೆ ಮೊಬೈಲ್‌ ನಂಬರ್‌ನಲ್ಲಿ ಬದಲಾದರೂ ಕಾಯಂ
ಉಳಿಯುವ ಅಪಾಯವಿದೆ. ಅನೇಕ ರೈತರು ಈ ಸಮಸ್ಯೆಯಿಂದ ಬಳಲುತ್ತಿರುವುದು ಗಮನಕ್ಕೆ ಬಂದಿದೆ.

ಏನಿದು ಹೊಸ ಸಮಸ್ಯೆ?: ಎಂಡ್ರಾಯಿಡ್‌ ಮೊಬೈಲ್‌ ಮೂಲಕ ರೈತರ ಪಹಣಿಯನ್ನು ಅವರೇ ದಾಖಲಿಸಲು ಅವಕಾಶವನ್ನು ರಾಜ್ಯ ಸರಕಾರ ಮಾಡಿದೆ. ಪಹಣಿಯಲ್ಲಿನ ಬೆಳೆ ವಿವರವನ್ನು ಸ್ವತಃ ರೈತರು ದಾಖಲಿಸಲು ಸಾಧ್ಯವಿದೆ. ಈ ಬೆಳೆ ವಿವರ ದಾಖಲಿಸಲು ಬೆಳೆ ಸರ್ವೇ ಆ್ಯಪ್‌ ಡೌನ್‌ ಲೋಡ್‌ ಮಾಡಿಕೊಳ್ಳಬೇಕು. ಹಾಗೆ ಡೌನ್‌ಲೋಡ್‌ ಮಾಡಿಕೊಂಡ ಮೊಬೈಲ್‌ನಲ್ಲಿ ಇರುವ ಸಿಮ್‌ ಬಳಸಿ ಒಟಿಪಿ ಪಡೆದು ಆ್ಯಪ್‌ ಒಳಗೆ ಪ್ರವೇಶಿಸಬೇಕು. ಅಲ್ಲಿ ಪಹಣಿ, ಭೂಮಿ ನಕ್ಷೆ ಡೌನ್‌ ಲೋಡ್‌ ಮಾಡಿಕೊಂಡರೆ
ಸರ್ವೇ ಮಾಡಬಹುದು.

ಈ ಮಧ್ಯೆ ಸರ್ವೇ ನಂಬರ್‌ ದಾಖಲಿಸಿ ಡೌನ್‌ ಲೋಡ್‌ ಮಾಡಿ ಉಳಿಸಿಕೊಳ್ಳುವಾಗ ಪ್ರತೀ ಸರ್ವೆ ನಂಬರ್‌ಗೂ ಸ್ವತಃ ರೈತರಾ? ಪರವಾಗಿಯಾ ಎಂದು ಕೇಳುತ್ತದೆ. ಆಗ ದಾಖಲಿಸುವ ಮೊಬೈಲ್‌ ನಂಬರ್‌ ವ್ಯತ್ಯಾಸ ಆದರೆ ಅದು ಕೊನೇ ತನಕ ಉಳಿಯುತ್ತದೆ.
ರೈತರ ಸರ್ವೆ ನಂಬರ್‌ನಂತೆ ಮೊಬೈಲ್‌ ನಂಬರ್‌ ಕೂಡ ದಾಖಲಾಗುವ ಸಾಧ್ಯತೆ ಇದೆ. ಇಲ್ಲಿ ತಪ್ಪಾದರೆ ಇದನ್ನು ಸರಿ ಪಡಿಸಲು ಮೇಲ್ವಿಚಾರಕರು ಅಥವಾ ಹಿರಿಯ ಅಧಿಕಾರಿಗಳು ಬೆಂಗಳೂರಿನಲ್ಲಿರುವ ಹೆಲ್ಪ್ ಡೆಸ್ಕ್ ನೆರವು ಪಡೆದುಕೊಳ್ಳಬೇಕಾಗುತ್ತದೆ. ಓಟಿಪಿಗೆ ಮೊದಲು ದಾಖಲಿಸುವ ಮೊಬೈಲ್‌ ನಂಬರ್‌ ಯುಸರ್‌ ಐಡಿ ಆಗಿರುತ್ತದೆ.

ಯುವಕರೇ ಹೆಚ್ಚು: ಬೆಳೆ ಸರ್ವೆಯಲ್ಲಿ ಗ್ರಾಮೀಣ ಭಾಗದಲ್ಲಿ ಅಡಿಕೆ ತೋಟ, ಅನಾನಸ್‌, ಭತ್ತದ ಗದ್ದೆ ಓಡಾಟ ಮಾಡುವಂತೆ ಮಾಡಿದೆ. ಜಿಪಿಎಸ್‌ ಆಧಾರದಲ್ಲಿ ಸರ್ವೇ ಆಗುವುದರಿಂದ ಅಡಿಕೆ ತೋಟದಲ್ಲಿ ಜಿಪಿಎಸ್‌ ಸಮಸ್ಯೆ ಆಗುತ್ತಿದೆ. ಬೆಳೆ ದಾಖಲೆಗೆ ಒಂದೇ ಸ್ಥಳದಲ್ಲಿ ನಿಂತು ದಾಖಲೀಕರಣಕ್ಕೆ ಮಂದಾದರೂ ಗಡಿ ರೇಖೆಯ ಒಳಗೆ ಹೋಗಿ ಎಂದು ಹೇಳುತ್ತದೆ!

Advertisement

ಆದರೆ, ಈ ಸಮಸ್ಯೆಗಳ ಮಧ್ಯೆಯೂ ಗ್ರಾಮೀಣ ಭಾಗದಲ್ಲಿ ಯುವಕರೇ ಹೆಚ್ಚು ಬೆಳೆ ಸರ್ವೆಯಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದ ಅನೇಕ ಹಿರಿಯ ರೈತರಿಗೆ ನೆರವಾಗುತ್ತಿದ್ದಾರೆ. ಕೆಲ ಯುವಕರು ಕೆಲ ಗ್ರಾಮಗಳಿಗೆ ಸಹಾಯಕರಾಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರಕಾರ ಹಣ ಪಾವತಿಸುತ್ತದೆ. ಆದರೆ, ಅವರಿಗೂ ಜಿಪಿಎಸ್‌ ಹಿಡಿಯುವದೂ ಸಮಸ್ಯೆ ಆಗಿದೆ!

ವಿಮೆಗೂ ಬಳಕೆ ಸಾಧ್ಯತೆ: ಈ ಮಧ್ಯೆ ಬೆಳೆ ಸರ್ವೇ ಮಾಡಲಾದ ಕ್ಷೇತ್ರ ಹಾಗೂ ಬೆಳೆಯನ್ನು ರಾಜ್ಯ ಹಾಗೂ ಕೇಂದ್ರ ಸರಕಾರದ ಬೆಳೆ ವಿಮೆಯ ಆಧಾರಕ್ಕೂ ಬಳಸುವ ಸಾಧ್ಯತೆ ಇದೆ. ಆ್ಯಪ್‌ನಲ್ಲಿ ಮಳೆ ಆಶ್ರಿತವೋ, ನೀರಾವರಿಯೋ ಎಂಬ ಕಾಲಂ ದಾಲಿಸಬೇಕು. ರೈತರು ಮಳೆ ಆಶ್ರಿತರಾಗಿದ್ದರೆ ತಪ್ಪಿ ನೀರಾವರಿ ಎಂದು ದಾಖಲಿಸಿದರೆ ಮುಂದೊಂದು ದಿನ ವಿಮೆಯಿಂದ
ರೈತರು ವಂಚಿತರಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಮಳೆ ಆಶ್ರಿತ ಹಾಗೂ ನೀರಾವರಿಯನ್ನು ನೋಡಿಕೊಂಡು ದಾಖಲಿಸಬೇಕಿದೆ.

– ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next