Advertisement

14ರಂದು ಸ್ವರ್ಣವಲ್ಲೀಯಲ್ಲಿ ಕೃಷಿ ಜಯಂತಿ: ಶ್ರೀ

03:48 PM May 12, 2022 | Team Udayavani |

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನ ನರಸಿಂಹ ಜಯಂತಿ ಹಿನ್ನೆಲೆಯಲ್ಲಿ ನಡೆಸುವ ಕೃಷಿ ಜಯಂತಿ ಮೇ 14 ರಂದು ಕೃಷಿ ವಿಚಾರ ಗೋಷ್ಠಿ, ಸಾಧಕರಿಗೆ ಪ್ರಶಸ್ತಿ ಪ್ರದಾನ, ಪ್ರದರ್ಶನಗಳ ಮೂಲಕ ನಡೆಯಲಿದೆ ಎಂದು ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದರು.

Advertisement

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಶ್ರೀಗಳು, ಬೆಳೆಗಳಿಗೆ ರೋಗ ಬಾಧೆ, ಅಸ್ಥಿರ ಬೆಲೆ, ಸಾಲಬಾಧೆ, ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿರುವ ಈ ಕಾಲಘಟ್ಟದಲ್ಲಿ ಕೃಷಿ ಕ್ಷೇತ್ರಕ್ಕೆ ಪುನಶ್ಚೇತನ ಕೊಡುವ ನಿಟ್ಟಿನಲ್ಲಿ ಅನ್ನದಾತ ಸುಖೀಭವ ಎನ್ನುವ ಗುರಿಯೊಂದಿಗೆ ಈ ಜಯಂತಿ ಆಚರಿಸಲಾಗುತ್ತದೆ ಎಂದರು.

ಮೇ 14 ರಂದು ಬೆಳಿಗ್ಗೆ 8-30ಕ್ಕೆ ಕೃಷಿ ಜಯಂತಿಗೆ ತಾವು ಚಾಲನೆ ನೀಡಲಿದ್ದೇವೆ. ಬೆಳಿಗ್ಗೆ 10:30 ರಿಂದ 12:30 ರ ವರೆಗೆ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ ದೇವಿಹೊಸೂರು, ಹಾವೇರಿಯ ವಿಜ್ಞಾನಿಗಳಿಂದ ಗೋಷ್ಠಿಗಳು ನಡೆಯಲಿವೆ.

ಡೀನ್‌ ಡಾ| ಲಕ್ಷ್ಮೀ ನಾರಾಯಣ ಹೆಗಡೆ ಅಧ್ಯಕ್ಷತೆ ವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ಸಹಾಯಕ ಪ್ರಾಧ್ಯಾಪಕ ಡಾ| ತಿಪ್ಪಣ್ಣ ಕೆ.ಎಸ್‌., ಡಾ| ಶಿದ್ಧನಗೌಡ ಯಡಚಿ, ಕು. ಪ್ರಜಾ ಮಲಗಾಂವೆ ಗೋಷ್ಠಿ ನಡೆಸಿಕೊಡಲಿದ್ದಾರೆ.

ಮಧ್ಯಾಹ್ನ 3:30 ರಿಂದ ಸಂಜೆ 5 ಘಂಟೆಯವರೆಗೆ ನಡೆಯಲಿರುವ 2ನೇಯ ಗೋಷ್ಠಿಯಲ್ಲಿ ಶಿರಸಿಯ ತೋಟಗಾರಿಕಾ ಮಹಾವಿದ್ಯಾಲಯದ ಡೀನ್‌ ಡಾ| ಎನ್‌.ಕೆ.ಹೆಗಡೆ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಶ್ರಾಂತ ಪ್ರಧಾನ ವಿಜ್ಞಾನಿಗಳಾದ ಡಾ| ಶಿವಾನಂದ ಟಿ.ಎನ್‌. ಗೋಷ್ಠಿ ನಡೆಸಿಕೊಡಲಿದ್ದಾರೆ ಎಂದರು.

Advertisement

ಕೃಷಿ ಜಯಂತಿ ಅಂಗವಾಗಿ ಈಗಾಗಲೇ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆನ್‌ಲೈನ್‌ನಲ್ಲಿ ಕೃಷಿ ರಸಪ್ರಶ್ನೆ ಸ್ಪರ್ಧೆ ನಡೆಸಿದ್ದು, ಮೇ 14 ರಂದು ಮಧ್ಯಾಹ್ನ 12:30 ರಿಂದ 2 ಘಂಟೆಯವರೆಗೆ ಕಾಲೇಜು ವಿದ್ಯಾರ್ಥಿಗಳಿಗಾಗಿ ವೇದಿಕೆಯಲ್ಲಿ ನೇರವಾಗಿ ಕೃಷಿ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ಕೇಂದ್ರ ಮಾತೃಮಂಡಲದವರ ನಿರ್ವಹಣೆಯಲ್ಲಿ ಮಾತೆಯರಿಗಾಗಿ ಹೂಮಾಲೆ ಕಟ್ಟುವ ಹಾಗೂ ಹೂಬತ್ತಿ ಹೊಸೆಯುವ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.

ರಾಜ್ಯ ಮಟ್ಟದ ಕೃಷಿ ಆಧಾರಿತ ಉತ್ಪನ್ನಗಳ ಪ್ರದರ್ಶನ, ಕೃಷಿ ಸಂಬಂಧಿತ ಎಲ್ಲಾ ಇಲಾಖೆ ಸಂಸ್ಥೆಗಳ ವಿವಿಧ ಪ್ರದರ್ಶನಗಳು, ಸ್ಥಳೀಯ ರೈತರು ಅಭಿವೃದ್ಧಿಪಡಿಸಿದ ಸರಳ ಯಂತ್ರಗಳ ಪ್ರದರ್ಶನ, ವಿವಿಧ ಗೊಬ್ಬರ, ಸಸ್ಯಜನ್ಯ ಕೀಟನಾಶಕಗಳ ಪ್ರದರ್ಶನ, ಕೃಷಿ ಸಂಬಂಧಿತ ಪತ್ರಿಕೆಗಳ ಪ್ರದರ್ಶನ, ಮಾರಾಟ, ಸ್ವ ಸಹಾಯ ಸಂಘಗಳ ಮೌಲ್ಯವರ್ಧಿತ ವಸ್ತುಗಳ ಪ್ರದರ್ಶನ, ಮಾರಾಟ ನಡೆಯಲಿದೆ ಎಂದು ತಿಳಿಸಿದರು.

ಸಂಜೆ 5 ಗಂಟೆಯಿಂದ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀ ನಿವಾಸ ಪೂಜಾರಿ ಸ್ವರ್ಣವಲ್ಲೀ ಪ್ರಭಾ ಕೃಷಿ ವಿಶೇಷಾಂಕವನ್ನು ಬಿಡುಗಡೆ ಮಾಡಲಿದ್ದಾರೆ. ರಾಜ್ಯ ಅಡಿಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳದ ನಿರ್ದೇಶಕ ಶಶಾಂಕ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಉತ್ತಮ ಕೃಷಿಕ ಕೃಷಿ ಕಂಠೀರವ, ಸಾಧಕ ಕೃಷಿ ಮಹಿಳೆ, ಉತ್ತಮ ಅವಿಭಕ್ತ ಕೃಷಿ ಕುಟುಂಬ, ಸಾಧಕ ಕೃಷಿ ಕುಶಲಕರ್ಮಿಗಳಿಗೆ ಸನ್ಮಾನ ಹಾಗೂ ಉತ್ತಮ ಬೆಟ್ಟ ನಿರ್ವಹಣಾ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು.

ಸಂಜೆ 6:30 ರಿಂದ ರಾತ್ರಿ 8:30ರ ವರೆಗೆ ಸತೀಶ ಭಟ್ಟ ಮಾಳಕೊಪ್ಪ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಲಿದ್ದು, ಹಾರ್ಮೋನಿಯಂನಲ್ಲಿ ವಿ. ಪ್ರಕಾಶ ಹೆಗಡೆ, ಯಡಳ್ಳಿ, ತಬಲಾದಲ್ಲಿ ವಿ. ಲಕ್ಷ್ಮೀಶರಾವ್‌ ಕಲ್ಗುಂಡಿಕೊಪ್ಪ ಸಹಕರಿಸಲಿದ್ದಾರೆ. ಕೃಷಿ ಜಯಂತಿ ಯಶಸ್ವಿಯಾಗಿಸಲು 18 ಸಮಿತಿಗಳನ್ನು ರಚಿಸಲಾಗಿದ್ದು ಈಗಾಗಲೇ ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿದೆ. ಕೃಷಿ ಜಯಂತಿ, ನರಸಿಂಹ ಜಯಂತಿ ಎರಡೂ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಈ ವೇಳೆ ಆರ್‌.ಎನ್‌.ಹೆಗಡೆ ಉಳ್ಳಿಕೊಪ್ಪ, ಸುರೇಶ ಹಕ್ಕಿಮನೆ, ಎಂ.ಕೆ. ಗೋಳಿಕೊಪ್ಪ, ಎಂ.ಸಿ. ಹೆಗಡೆ, ಸುಬ್ರಾಯ ಹೆಗಡೆ ತ್ಯಾಗಲಿ ಇತರರು ಇದ್ದರು.

ರಥೋತ್ಸವ:

ನರಸಿಂಹ ಜಯಂತಿ ಹಿನ್ನೆಲೆಯಲ್ಲಿ ಹೊರೆಗಾಣಿಕೆ ಸಮರ್ಪಣೆ, ಫಲ ಪಂಚಾಮೃತ, ಶತರುದ್ರಾಭಿಷೇಕ, ಮಹಾಪೂಜೆ, ಮಂಗಳಾರತಿ, ತೀರ್ಥಪ್ರಸಾದ ವಿತರಣೆ, ಮಹಾರಥೋತ್ಸವ, ಅಷ್ಠಾವಧಾನ ಸೇವೆ ನಡೆಯಲಿದೆ. ರಥೋತ್ಸವದ ನಂತರ ಯಕ್ಷಶಾಲ್ಮಲಾ ಸ್ವರ್ಣವಲ್ಲೀ ಇವರಿಂದ ರಾಜಾ ರುದ್ರಕೋಪ ಯಕ್ಷಗಾನ ಬಯಲಾಟ ನಡೆಯಲಿದೆ. ರಥೋತ್ಸವ ಹಿಂದೂ, ಮುಸ್ಲಿಂ ಕ್ರೈಸ್ತ ಸಮುದಾಯದ ಸಾಮರಸ್ಯದ ರಥೋತ್ಸವ ಆಗಿದ್ದು, ಶತಮಾನಗಳಿಂದ ಇಲ್ಲಿಯ ರಥವನ್ನು ಮುಸ್ಲಿಂ ಸಮುದಾಯದವರೇ ಕಟ್ಟುತ್ತಿದ್ದಾರೆ. ಕುಮಟಾದ ಕ್ರೈಸ್ತ ಸಮುದಾಯದವರು ಸಿಡಿಮದ್ದು ಪ್ರದರ್ಶನ ನಡೆಸಲಿದ್ದಾರೆ. ‌

ಪ್ರಶಸ್ತಿ ಪುರಸ್ಕೃತ ಸಾಧಕರು ಉತ್ತಮ ಕೃಷಿಕ ಕೃಷಿ ಕಂಠೀರವ ಪ್ರಶಸ್ತಿಗೆ ಸಿದ್ದಾಪುರ ಬಾಳೇಕೊಪ್ಪದ ಸುಬ್ರಾಯ ಗಣಪತಿ ಹೆಗಡೆ, ಸಾಧಕ ಕೃಷಿ ಮಹಿಳೆ ಪ್ರಶಸ್ತಿಗೆ ಕೆಂಚಗದ್ದೆಯ ನೇತ್ರಾವತಿ ವೆಂಕಟ್ರಮಣ ಹೆಗಡೆ ಕ್ಯಾದಗಿಮನೆ, ಉತ್ತಮ ಅವಿಭಕ್ತ ಕೃಷಿ ಕುಟುಂಬ ಪ್ರಶಸ್ತಿಗೆ ಚೌವತ್ತಿ ಬಾಳೇಹದ್ದದ ಶಾಂತಾರಾಮ ಸುಬ್ರಾಯ ಹೆಗಡೆ, ಸಾಧಕ ಕೃಷಿ ಕುಶಲಕರ್ಮಿ ಪ್ರಶಸ್ತಿಗೆ ಅಡಕಳ್ಳಿಯ ಮಾಬ್ಲು  ಬಂಗಾರ್ಯ ಗೌಡ, ಉತ್ತಮ ಬೆಟ್ಟ ನಿರ್ವಹಣಾ ಪ್ರಶಸ್ತಿಗೆ ಗುರುನಾಥ ಗಣಪತಿ ಹೆಗಡೆ ಗಲಗದಮನೆ ಆಯ್ಕೆ ಆಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next