ಶಿರಸಿ: ಕೃಷಿಯೇ ನಮಗೆ ದೇವರು. ದೇವರ ದರ್ಶನಕ್ಕೂ ಭಕ್ತಿಯ ಕೃಷಿ ಅಗತ್ಯ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಆಶಿಸಿದರು.
ಶುಕ್ರವಾರ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಕೃಷಿ ಪ್ರತಿಷ್ಠಾನ ಹಮ್ಮಿಕೊಂಡ ಕೃಷಿ ಜಯಂತಿ ಸಮಾರೋಪದ ಸಾನ್ನಿಧ್ಯ ವಹಿಸಿ ಆಶೀರ್ವಚನ ನುಡಿದರು. ಭಗವಂತನ ದರ್ಶನಕ್ಕೆ ಕೃಷಿ ಮಾಡಬೇಕು. ಆಗ ದೇವರ ದರ್ಶನ ಸಾಧ್ಯ. ಲಕ್ಷ್ಮೀ ನೃಸಿಂಹ ಕೂಡ ಬರುತ್ತಾನೆ. ಕೃಷಿಗೂ ಅದೇ ತಪಸ್ಸು ಬೇಕು ಎಂದು ವಿಶ್ಲೇಷಿಸಿದರು.
ಕೃಷಿ ಹಾಗೂ ತೋಟಗಾರಿಕೆ ವಿಷಯವನ್ನು ಪ್ರೌಢಶಾಲೆಯಲ್ಲಿ ಪಾಠ ಮಾಡಿ ಮಕ್ಕಳಿಗೆ ಅಭಿರುಚಿಗೊಳಿಸಬೇಕು. ಅಧಿಕೃತ ರೂಪ ಬರಲು ಪಠ್ಯವಾಗಬೇಕು. ಆಗ ಯುವಕರು ಒಪ್ಪಿಕೊಳ್ಳಲು ಸಾಧ್ಯ. ಕಾನೂನು, ಪಠ್ಯ ಆದರೆ ಅದು ಅಧಿಕೃತವಾಗುತ್ತದೆ. ಪ್ರಾಯೋಗಿಕ ಭಾಗವಾಗಿ ಇಡಬೇಕು ಎಂದರು.
ನೃಸಿಂಹ ಜಯಂತಿ ಎಂದರೆ ಭಗವಂತ ಅವತಾರ ಎತ್ತಿದ ದಿನ. ಪ್ರಹ್ಲಾದ ಎಂಬ ಹುಡುಗನಿಗೋಸ್ಕರ ಕಂಬದಿಂದ ಎದ್ದು ಬಂದ. ವೈರಿಯ ಮಗನಿಗೆ ಎದ್ದು ಬಂದ. ಒಂದೇ ಕಾರಣಕ್ಕೆ ಭಗವಂತ ಅವತಾರ ಎತ್ತಿದ. ಪ್ರಹ್ಲಾದ ಅವನು ಭಕ್ತ ಶ್ರೇಷ್ಠನಾಗಿದ್ದನು ಎಂದ ಶ್ರೀಗಳು, ಪ್ರಹ್ಲಾದನಿಗೆ ಭಕ್ತಿ ಎಂದರೆ ಪ್ರೀತಿ. ಭಕ್ತ ಶ್ರೇಷ್ಠ ಆಗಿದ್ದರಿಂದಲೇ ಅವತಾರ ಎತ್ತಿ ಬಂದ. ಭಗವಂತ ಅವತಾರ ಎತ್ತಲು ಇಂಥದ್ದೊಂದು ಆಕಾರ ಇಲ್ಲ. ಮನುಷ್ಯನೂ ಪ್ರಾಣಿಯೂ ಅಲ್ಲದಂತೆಯೂ ಅವತಾರ ಎತ್ತಿದ್ದ ಎಂದರು.
ಕ್ಯಾಂಮ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಕೃಷಿ ತಜ್ಞ ಶಂಕರ ಬದನಾಜೆ, ಮಠದ ಅಧ್ಯಕ್ಷ ವಿಘ್ನೕಶ್ವರ ಹೆಗಡೆ ಬೊಮ್ಮನಳ್ಳಿ, ಗ್ರಾಮಾಭ್ಯುದಯದ ಅಧ್ಯಕ್ಷ ಶಿವಾನಂದ ದೀಕ್ಷಿತ ಇತರರು ಇದ್ದರು.
ವಿ.ಜಿ. ಹೆಗಡೆ ಗೊಡವೆಮನೆ ಫಲ ಸಮರ್ಪಿಸಿದರು. ಆರ್.ಎನ್. ಹೆಗಡೆ ಉಳ್ಳಿಕೊಪ್ಪ ಸ್ವಾಗತಿಸಿದರು. ಜಿ.ವಿ. ಹೆಗಡೆ ಹುಳಗೋಳ ನಿರ್ಣಯ ಮಂಡಿಸಿದರು. ಸುರೇಶ್ ಹಕ್ಕಿಮನೆ ನಿರ್ವಹಿಸಿದರು.