Advertisement

Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್‌ ಇಳುವರಿ!

12:29 AM Nov 29, 2024 | Team Udayavani |

ದಾವಣಗೆರೆ: ಪ್ರಸಕ್ತ ವರ್ಷ ರಾಜ್ಯಾದ್ಯಂತ ಮುಂಗಾರು ಮಳೆ ಉತ್ತಮವಾಗಿ ಸುರಿ ದಿದ್ದರಿಂದ ಬಿತ್ತನೆ ಪ್ರದೇಶ ಹಾಗೂ ಇಳುವರಿ ಯಲ್ಲಿ ಗಣನೀಯ ಹೆಚ್ಚಳವಾಗಿದ್ದು, ರಾಜ್ಯ ದಲ್ಲಿ ಆಹಾರ ಸಮೃದ್ಧಿಯ ಹರ್ಷ ಮೂಡಿದೆ.

Advertisement

2023ರ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳನ್ನು ಒಟ್ಟು 74.32 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತಿ, ಶೇ. 90ರಷ್ಟು ಪ್ರಗತಿ ಸಾಧಿಸಲಾಗಿತ್ತು. ಈ ಬಾರಿಯ ಮುಂಗಾರು ವೇಳೆ 81.53 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ. 99ರಷ್ಟು ಪ್ರಗತಿ ಆಗಿದೆ. ಅಂದರೆ ಈ ಬಾರಿ ಅಂದಾಜು ಸರಾಸರಿ ಶೇ. 9ರಷ್ಟು ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಮಳೆಯಿಂದ ಸ್ವಲ್ಪ ಹಾನಿ ಬಿಟ್ಟರೆ ಈ ಬಾರಿ ಭರಪೂರ ಇಳುವರಿ ಬಂದಿದೆ.

ಪ್ರತೀ ಬೆಳೆಯಲ್ಲಿ ಸರಾಸರಿ 50 ಸಾವಿರದಿಂದ ಒಂದು ಲಕ್ಷ ಟನ್‌ವರೆಗೆ ಹೆಚ್ಚಿನ ಇಳುವರಿ ಬಂದಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ.

ಕಳೆದ ವರ್ಷ ಆಹಾರ ಧಾನ್ಯಗಳನ್ನು 51.09 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿ 111.93 ಲಕ್ಷ ಟನ್‌ ಉತ್ಪಾದನೆ ಗುರಿ ಸಾಧಿಸಲಾಗಿತ್ತು. ಈ ಬಾರಿ ಆಹಾರ ಧಾನ್ಯಗಳನ್ನು 57.51 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿದ್ದು, 112.03 ಲಕ್ಷ ಟನ್‌ ಇಳುವರಿ ನಿರೀಕ್ಷಿಸಲಾಗಿದೆ. ವಾಣಿಜ್ಯ ಬೆಳೆಗಳನ್ನು ಕಳೆದ ವರ್ಷ 74.32 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಈ ಬಾರಿ 82.48 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿದ್ದು, 627.20 ಲಕ್ಷ ಟನ್‌ ಕಬ್ಬು ಇಳುವರಿ ನಿರೀಕ್ಷಿಸಲಾಗಿದೆ. ಕಳೆದ ವರ್ಷ ಕಬ್ಬು 7.35 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಿ 607 ಲಕ್ಷ ಟನ್‌ ಉತ್ಪಾದನೆಯಾಗಿತ್ತು. ಈ ಬಾರಿ ಸರಾಸರಿ 20 ಲಕ್ಷ ಟನ್‌ ಹೆಚ್ಚು ಇಳುವರಿ ಬಂದಿದ್ದು, ಕಬ್ಬಿನ ಸಿಹಿ ಹೆಚ್ಚಾಗಿದೆ. ಎಣ್ಣೆಕಾಳುಗಳು ಕಳೆದ ವರ್ಷ 7.97 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದಿದ್ದರೆ ಈ ವರ್ಷ 8.34 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯಲಾಗಿದೆ.

ಮಳೆಯೂ ಹೆಚ್ಚಳ
ಕಳೆದ ವರ್ಷ ಪೂರ್ವ ಮುಂಗಾರು ಮಳೆ (ಮಾ. 1ರಿಂದ ಮೇ 31) ಅವಧಿಯಲ್ಲಿ 115 ಮಿ.ಮೀ.ಗೆ ವಾಡಿಕೆಯ ಮಳೆಗೆ ಪ್ರತಿಯಾಗಿ 116 ಮಿ.ಮೀ. ಮಳೆ ಸುರಿದು ಶೇ. 1ರಷ್ಟು ಮಳೆ ಹೆಚ್ಚಾಗಿತ್ತು. ಮುಂಗಾರು ಮಳೆ (ಜೂ. 1ರಿಂದ ಸೆ.30) ಅವಧಿಯಲ್ಲಿ 852 ಮಿ.ಮೀ. ವಾಡಿಕೆ ಮಳೆಗೆ ಪ್ರತಿಯಾಗಿ 642 ಮಿ.ಮೀ. ಮಳೆ ಸುರಿದು ಶೇ. 25ರಷ್ಟು ಮಳೆ ಕೊರತೆಯಾಗಿತ್ತು. ಒಟ್ಟು ಮಳೆ (ಜ. 1ರಿಂದ ಸೆ. 30ರ ವರೆಗೆ) ವಾಡಿಕೆಯ 971 ಮಿ.ಮೀ. ಮಳೆಗೆ ಪ್ರತಿಯಾಗಿ ಸರಾಸರಿ 758 ಮಿ.ಮೀ. ಮಳೆ ಸುರಿದು ಶೇ. 22ರಷ್ಟು ಮಳೆ ಕೊರತೆಯಾಗಿತ್ತು.

Advertisement

ಈ ಬಾರಿ ಪೂರ್ವ ಮುಂಗಾರು ಮಳೆ (ಮಾ. 1ರಿಂದ ಮೇ 31ರ ವರೆಗೆ) 115 ಮಿ.ಮೀ.ಗೆ ವಾಡಿಕೆ ಮಳೆಗೆ ಪ್ರತಿಯಾಗಿ 151 ಮಿ.ಮೀ. ಮಳೆ ಸುರಿದು ಶೇ. 31ರಷ್ಟು ಹೆಚ್ಚು ಮಳೆಯಾಗಿದೆ. ಮುಂಗಾರು ಅವಧಿಯಲ್ಲಿ (ಜೂ. 1ರಿಂದ ಸೆ. 30ರ ವರೆಗೆ) 852 ಮಿ.ಮೀ.ಗೆ ವಾಡಿಕೆ ಮಳೆಗೆ ಪ್ರತಿಯಾಗಿ ಸರಾಸರಿ 977 ಮಿ.ಮೀ. ಮಳೆ ಸುರಿದಿದ್ದು, ಶೇ. 15ರಷ್ಟು ಹೆಚ್ಚು ಮಳೆಯಾಗಿದೆ. ಮಳೆ ಹೆಚ್ಚಳದಿಂದಾಗಿ ಬಿತ್ತನೆ ಪ್ರದೇಶದ ಜತೆಗೆ ಇಳುವರಿಯೂ ಹೆಚ್ಚಾಗಿರುವುದರಿಂದ ಅನ್ನದಾ
ತರ ಅನ್ನದ ಬಟ್ಟಲು ಸಮೃದ್ಧವಾದಂತಾಗಿದೆ.

ಗುರಿ ಮೀರಿದ ಬಿತ್ತನೆ
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಗುರಿ ಮೀರಿ ಬಿತ್ತನೆಯಾಗಿದ್ದು, ಗುರಿ ಮೀರಿ ಸಾಧನೆ ಮಾಡಲಾಗಿದೆ. ಬಾಗಲಕೋಟೆ (ಶೇ.108), ಬೆಂಗಳೂರು ಗ್ರಾಮಾಂತರ (ಶೇ.107), ಬೆಂಗಳೂರು ನಗರ (ಶೇ.114), ಬೀದರ್‌ (ಶೇ.109), ಚಿತ್ರದುರ್ಗ (ಶೇ.104), ದಾವಣಗೆರೆ (ಶೇ.104), ಧಾರವಾಡ (ಶೇ.112), ಗದಗ (ಶೇ.119), ಹಾಸನ (ಶೇ.107), ಕಲಬುರಗಿ (ಶೇ.112), ಕೊಪ್ಪಳ (ಶೇ.107), ಮಂಡ್ಯ (ಶೇ.106), ಮೈಸೂರು (ಶೇ.102), ರಾಯಚೂರು (ಶೇ.117), ತುಮಕೂರು (ಶೇ.107), ವಿಜಯನಗರ (ಶೇ.101), ವಿಜಯಪುರ (ಶೇ.118), ಯಾದಗಿರಿ (ಶೇ.106) ಬಿತ್ತನೆಯಾಗಿದೆ.

ಈ ಬಾರಿ ಉತ್ತಮ ಮಳೆಯಾಗಿ ಎಲ್ಲೆಡೆ ಉತ್ತಮ ಇಳುವರಿ ಬಂದಿದೆ. ದಾವಣಗೆರೆ ಜಿÇÉೆಯಲ್ಲೂ ಭತ್ತ, ರಾಗಿ, ಮೆಕ್ಕೆಜೋಳದ ಇಳುವರಿ ಹೆಚ್ಚಾಗಿದೆ. ಭತ್ತ ಎಕ್ರೆಗೆ 25-30 ಕ್ವಿಂಟಾಲ್‌ ವರೆಗೂ ಇಳುವರಿ ಬಂದಿದೆ.
-ಶ್ರೀನಿವಾಸ್‌ ಚಿಂತಾಲ…, ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ.

ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಬಹುತೇಕ ಎಲ್ಲ ಬೆಳೆಗಳ ಇಳುವರಿ ಚೆನ್ನಾಗಿ ಬಂದಿದೆ. ಸರಕಾರ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕೃಷಿ ಉತ್ಪನ್ನದ ಲಾಭ ಮಧ್ಯವರ್ತಿಗಳ ಪಾಲಾಗದೆ ರೈತರಿಗೆ ಲಭಿಸುವಂತಾಗಬೇಕು.
– ಹನುಮಂತಗೌಡ ಗಾಜೀಗೌಡ್ರ, ಕನಕಾಪುರದ ರೈತ

ಮುಂಗಾರಿನಲ್ಲಿ 50ರಿಂದ 1 ಲಕ್ಷ ಟನ್‌ ಉತ್ಪಾದನೆ ಹೆಚ್ಚಳ

81.53 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ. 99ರಷ್ಟು ಪ್ರಗತಿ

ವರುಣನ ಕೃಪೆಯಿಂದ ಶೇ. 9ರಷ್ಟು ಬಿತ್ತನೆ ಪ್ರದೇಶವೂ ವಿಸ್ತಾರ

ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು

 *ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next