Advertisement

ಕೃಷಿ ತಜ್ಞ ಡಾ. ದ್ವಾರಕಿನಾಥ್‌ ನಿಧನ

12:27 PM Sep 30, 2018 | |

ಬೆಂಗಳೂರು: ರಾಜ್ಯದಲ್ಲಿ ಕೃಷಿ ವಿಸ್ತರಣಾ ವ್ಯವಸ್ಥೆಗೆ ನಾಂದಿ ಹಾಡಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಆರ್‌. ದ್ವಾರಕಿನಾಥ್‌ (92) ಶನಿವಾರ ನಿಧನರಾದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಡಾ.ದ್ವಾರಕಿನಾಥ್‌, ಜಯನಗರದ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಅವರ ಪತ್ನಿ ಸರೋಜಮ್ಮ 2 ವರ್ಷ ಹಿಂದೆಯೇ ಮೃತಪಟ್ಟಿದ್ದರು. ಮೃತರಿಗೆ ಮಕ್ಕಳಿಲ್ಲ, ಆದರೆ ಅಪಾರ ಶಿಷ್ಯವೃಂದ, ಬಂಧು-ಬಳಗ ಹೊಂದಿದ್ದಾರೆ. 

Advertisement

1926ರ ಸೆ.9ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಜನಿಸಿದ ಡಾ.ದ್ವಾರಕಿನಾಥ್‌, ಸ್ವಾತಂತ್ರ್ಯ ನಂತರ ರಾಜ್ಯದ ಅದರಲ್ಲೂ ಮಳೆಯಾಶ್ರಿತ ಭೂಮಿಯಲ್ಲಿ ಕೃಷಿ ಬೆಳವಣಿಗೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಹೊಸ ಸಂಶೋಧನೆ, ತಂತ್ರಜ್ಞಾನ ಪರಿಚಯಿಸಿ, ಉತ್ಪಾದನಾ ಪ್ರಮಾಣ ಹೆಚ್ಚಿಸಿದರು. ಆ ಮೂಲಕ ರೈತರ ಆದಾಯ ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದರು.

ಕೃಷಿ ಸಂಶೋಧನೆಗಳು ಪ್ರಯೋಗಾಲಯಕ್ಕೆ ಸೀಮಿತವಾಗಿದ್ದ ಕಾಲದಲ್ಲಿ ಆ ಸಂಶೋಧನೆಗಳನ್ನು “ಲ್ಯಾಬ್‌ ಟು ಲ್ಯಾಂಡ್‌’ಗೆ ಕೊಂಡೊಯ್ಯಲು ವಿಸ್ತರಣಾ ವ್ಯವಸ್ಥೆ ಪರಿಚಯಿಸಿದರು. ಈಗಲೂ ಪ್ರತಿ ವರ್ಷ ಕೃಷಿ ಮೇಳದಲ್ಲಿ ಅತ್ಯುತ್ತಮ ವಿಸ್ತರಣಾಧಿಕಾರಿಗೆ ಡಾ.ದ್ವಾರಕಿನಾಥ್‌ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅಲ್ಲದೆ, ಜಲಾನಯನ ಯೋಜನೆ ಪರಿಕಲ್ಪನೆ ಪರಿಚಯಿಸಿದ್ದು ಕೂಡ ಡಾ.ದ್ವಾರಕಿನಾಥ್‌.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಅವರು ರಾಜ್ಯ ಕೃಷಿ ಆಯೋಗದ ಅಧ್ಯಕ್ಷರಾಗಿ ಕೃಷಿ ಸುಧಾರಣೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸಿದ್ದರು. ಅವರ ಸೇವೆಗೆ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಡಾ.ದ್ವಾರಕಿನಾಥ್‌ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 1ಗಂಟೆಗೆ ಬನಶಂಕರಿಯ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next