Advertisement

ಕೃಷಿ ಕಾಯಕ, ಮಳೆಗಾಲದ ಸಿದ್ಧತೆಯಲ್ಲಿ ಹಳ್ಳಿಗರು

10:32 PM Apr 22, 2020 | Sriram |

ಕುಂದಾಪುರ: ಕೋವಿಡ್-19 ಹಿನ್ನೆಲೆಯಲ್ಲಿ ದೇಶವೇ ಲಾಕ್‌ಡೌನ್‌ನಲ್ಲಿದೆ. ನಗರ ಭಾಗದವರು ಸಮಯ ಕಳೆಯುವುದು ಹೇಗೆಂದು ಚಿಂತಿಸಿದರೆ, ಹಳ್ಳಿಗರು ಮಾತ್ರ ಕೃಷಿ ಚಟುವಟಿಕೆಗಳಲ್ಲಿ, ಮಳೆಗಾಲಕ್ಕೆ ಮನೆಗಳಲ್ಲಿ ಆಗಬೇಕಾದ ಸಿದ್ಧತೆಗಳು, ಹಪ್ಪಳ, ಸಂಡಿಗೆಯಂತಹ ತಿಂಡಿ ತಯಾರಿಕೆಯಲ್ಲಿ ನಿರತರಾಗಿದ್ದಾರೆ.

Advertisement

ಲಾಕ್‌ಡೌನ್‌ ಆದೇಶವನ್ನು ನಗರ ಭಾಗದ ಕೆಲ ಮಂದಿ ಗಾಳಿಗೆ ತೂರಿದರೆ, ಗ್ರಾಮೀಣ ಭಾಗಗಳಲ್ಲಿ ಮಾತ್ರ ಜನ ಹೀಗೆ ತಮಗೆ ಸಿಕ್ಕ ಸಮಯಾವಕಾಶವನ್ನು ಹಾಳು ಮಾಡದೇ ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಅಡಕೆ ಹೆಕ್ಕುವುದು, ಅಡಕೆ ಒಣಗಿಸುವುದು, ಒಣಗಿದ ಅಡಕೆ ಸುಲಿಯೋದು, ತೋಟಕ್ಕೆ ನೀರು ಹಾಯಿಸುವುದು, ಕಾಳು ಮೆಣಸು ಕೊಯ್ಯುವುದು, ಮಳೆಗಾಲಕ್ಕೆ ಬೇಕಾದ ಕಟ್ಟಿಗೆ ರಾಶಿ ಹಾಕುವುದು, ಹಟ್ಟಿಗೆ ಬೇಕಾದ ತರಗೆಲೆ ರಾಶಿ.. ಇದು ಕುಂದಾಪುರದ ಗ್ರಾಮೀಣ ಭಾಗಗಳಾದ ಹಳ್ಳಿಹೊಳೆ, ಕಮಲಶಿಲೆ, ಯಡಮೊಗೆ, ಅಮಾಸೆಬೈಲು, ದೇವರಬಾಳು, ಕಬ್ಬಿನಾಲೆ ಮತ್ತಿತರ ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬಂದ ಚಿತ್ರಣ.


ಮಳೆಗಾಲದಲ್ಲಿ ಅಡಿಕೆ ಕೆಲಸ ಮಾಡುತ್ತಿದ್ದೇವು. ಲಾಕ್‌ಡೌನ್‌ನಿಂದ ಸ್ವಲ್ಪ ಬೇಗ ಈ ಕೆಲಸ ಆರಂಭಿಸಿದ್ದೇವೆ. ಈ ಭಾಗದಲ್ಲಿ ಹೆಚ್ಚು ಅಡಿಕೆ ಕೃಷಿಕರಿದ್ದು, ಲಾಕ್‌ಡೌನ್‌ನಿಂದ ಅಷ್ಟೇನು ತೊಂದರೆಯಾಗಿಲ್ಲ. ಮಳೆಗಾದ ಸಿದ್ಧತೆಯಂತಹ ಕೆಲಸಗಳು ಈ ವರ್ಷ ಬೇಗನೇ ಮುಗಿದಿವೆ ಎನ್ನುತ್ತಾರೆ ಬರೇಗುಂಡಿಯ ರಾಮಕೃಷ್ಣ ರಾವ್‌.

ಹೊರೆಯಾಗದ ಲಾಕ್‌ಡೌನ್‌
ಗ್ರಾಮೀಣ ಭಾಗದ ಜನರಿಗೆ ಕಳೆದ ಅನೇಕ ದಿನಗಳಿಂದ ಲಾಕ್‌ಡೌನ್‌ ಇದ್ದರೂ, ಅಷ್ಟೇನು ಹೊರೆಯಾದಂತೆ ಕಂಡು ಬಂದಿಲ್ಲ. ಬೇರೆ ಕಡೆಗೆ ಕೆಲಸಕ್ಕೆ ಹೋಗುತ್ತಿದ್ದರಿಂದ ಮನೆ ಕೆಲಸಕ್ಕೆ ಸಮಯ ಸಿಗುತ್ತಿರಲಿಲ್ಲ. ಈಗ ಸಿಕ್ಕಿದೆ. ಮನೆ ಕೆಲಸ, ಕಟ್ಟಿಗೆ ರಾಶಿ, ಹೀಗೆ ಸಮಯ ಕಳೆಯುವುದು ಕೂಡ ಅಷ್ಟೇನು ಕಷ್ಟವಾಗುತ್ತಿಲ್ಲ. ಮನೆಯಲ್ಲಿ ದಾಸ್ತಾನಿರುವ ಅಕ್ಕಿಯಿದೆ. ಅಲ್ಪ – ಸ್ವಲ್ಪ ತರಕಾರಿಗಳು ಕೂಡ ಇವೆ. ಬೇರೆ ಏನಾದರೂ ಬೇಕಾದರೆ ವಾರಕ್ಕೊಮ್ಮೆ ಅಥವಾ 2 ವಾರಕ್ಕೊಮ್ಮೆ ಇಲ್ಲೇ ಸಮೀಪದ ಪೇಟೆಗೆ ಹೋಗುತ್ತೇವೆ ಎನ್ನುವುದು ದೇವರಬಾಳು ನಿವಾಸಿ ರಾಜೇಶ್‌ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next