Advertisement

ರೈತರ ಜಮೀನು ಪಕ್ಕದಲ್ಲೇ ಕೃಷಿ ಉದ್ಯಮ

12:30 AM Mar 19, 2019 | |

ಕಲಬುರಗಿ: “ಕೇಂದ್ರದಲ್ಲಿ ಯುಪಿಎ ಸರ್ಕಾರ ಬಂದರೆ ರೈತರ ಜಮೀನುಗಳ ಪಕ್ಕವೇ ದವಸ ಧಾನ್ಯಗಳ ಸಂಗ್ರಹಕ್ಕೆ ಗೋದಾಮು, ಹಣ್ಣು-ಹಂಪಲುಗಳ ಶಿಥಲೀಕರಣ ಘಟಕ ಹಾಗೂ ಕೃಷಿ ಉದ್ಯಮಗಳನ್ನು ಸ್ಥಾಪಿಸಲಾಗುವುದು’ ಎಂದು ಅಖೀಲ ಭಾರತ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಕಟಿಸಿದರು.

Advertisement

ನಗರದ ನೂತನ ಮಹಾವಿದ್ಯಾಲಯ ಮೈದಾನದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಪರಿವರ್ತನಾ ರ್ಯಾಲಿ ಹಾಗೂ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ,”ಕೃಷಿ ಉದ್ಯಮಗಳನ್ನು ಸ್ಥಾಪಿಸುವ ಮುಖಾಂತರ ರೈತರ ಆದಾಯ ವೃದ್ಧಿಸಲಾಗುವುದು. ಬಹು ಮುಖ್ಯವಾಗಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸಿಗಲು ಪರಿಣಾಮಕಾರಿ ಯೋಜನೆ ಕಾರ್ಯಾನುಷ್ಠಾನ ತರಲಾಗುವುದು ಎಂದರು.

ಕಾಂಗ್ರೆಸ್‌ ಸರ್ಕಾರ ಇರುವ ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್‌, ಛತ್ತೀಸಗಡ ಹಾಗೂ ಕರ್ನಾಟಕ ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ಚುನಾವಣೆ ಮುಂಚೆ ಕಾಂಗ್ರೆಸ್‌ ಸರ್ಕಾರ ಬಂದಲ್ಲಿ ಸಾಲ ಮನ್ನಾ ಮಾಡುತ್ತೇವೆ ಎಂಬುದಾಗಿ ಹೇಳಿದ್ದೆವು. ಅದರಂತೆ ಸಾಲ ಮನ್ನಾ ಮಾಡಿ ನುಡಿದಂತೆ ನಡೆದಿದ್ದೇವೆ. ಮುಂದೆ ಕೇಂದ್ರದಲ್ಲೂ ಯುಪಿಎ ಸರ್ಕಾರ ಬಂದರೆ ಸಾಲ ಮನ್ನಾಕ್ಕೆ ಬದಟಛಿರಿದ್ದೇವೆ ಎಂದರು.

ನರೇಂದ್ರ ಮೋದಿ ಚುನಾವಣೆ ಮುಂಚೆ ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಕಲ್ಪಿಸಲಾಗುವುದು ಎಂದು ಹೇಳಿದ್ದರು. ಆದರೆ ಅದನ್ನು ಕಾರ್ಯರೂಪಕ್ಕೆ ತರಲೇ ಇಲ್ಲ. ಜತೆಗೆ ಒಮ್ಮೆಯೂ ಈ ಬಗ್ಗೆ ಚಕಾರ ಎತ್ತಲಿಲ್ಲ. ಮೋದಿ ರೈತರನ್ನು ಒಂದು ವರ್ಗ
ಮಾಡಿದ್ದರೆ, ಉದ್ಯಮಿಗಳಾದ ಅನಿಲ ಅಂಬಾನಿ, ಅದಾನಿ ಮತ್ತೂಂದು ವರ್ಗ ಮಾಡಿದ್ದಾರೆ ಎಂದರು.

ಕನಿಷ್ಠ ಆದಾಯ ಯೋಜನೆ: ಎನ್‌ಡಿಎ ಸರ್ಕಾರ ಇತ್ತೀಚೆಗೆ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ ನಿಧಿ ಯೋಜನೆ ಜಾರಿಗೆ ತಂದಿದ್ದು, ಅದರಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿ ವರ್ಷ 6 ಸಾವಿರ ರೂ. ನೀಡುತ್ತಿದೆ. ಆದರೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಬಂದರೆ ಕನಿಷ್ಠ ಆದಾಯ ಯೋಜನೆ ಜಾರಿಗೆ ತರಲಾಗುವುದು. ಇದು ಜಗತ್ತಿನಲ್ಲಿಯೇ ಪ್ರಥಮ ಯೋಜನೆಯಾಗಲಿದೆ. ಕನಿಷ್ಠ ಆದಾಯ ಬಡವರಿಗೆ ನೀಡಿ ಆರ್ಥಿಕವಾಗಿ ಮೇಲೆತ್ತಲಾಗುವುದು.ಹಣವನ್ನು ನೇರವಾಗಿ ಫಲಾನುಭವಿ ಖಾತೆಗೆ ಜಮಾ ಮಾಡಲಾಗುವುದು. ಜಗತ್ತಿನ ಯಾವ ದೇಶಗಳು ಕನಿಷ್ಠ ಆದಾಯ ನೀಡಲು ಮುಂದಾಗಿಲ್ಲ. ಆದರೆ ಕಾಂಗ್ರೆಸ್‌ ದೇಶದ ಬಡ ಜನರಿಗೆ ಕನಿಷ್ಠ ಆದಾಯ
ನೀಡಲು ಮುಂದಾಗಿದೆ ಎಂದರು.

Advertisement

ಮಾಜಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.
ವೇಣುಗೋಪಾಲ್‌, ಸಂಸದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಸೇರಿದಂತೆ ಮುಂತಾದವರಿದ್ದರು.

ಜಿಎಸ್‌ಟಿ ಬದಲಾವಣೆ
ಮಧ್ಯಮ ವರ್ಗ ಹಾಗೂ ಸಣ್ಣ ವ್ಯಾಪಾರಿಗಳ ಜೀವ ಹಿಂಡುತ್ತಿರುವ ಜಿಎಸ್‌ಟಿ ತೆರಿಗೆಯನ್ನು ಕೇಂದ್ರದಲ್ಲಿ ಯುಪಿಎ ಸರ್ಕಾರ ಬಂದರೆ ಬದಲಿಸಲಾಗುವುದು. ಈಗ ಐದು ತರಹದ ತೆರಿಗೆಗಳನ್ನು ವಿಧಿಸಲಾಗುತ್ತಿದೆ. ಆದರೆ ಒಂದೇ ರೀತಿಯ ತೆರಿಗೆ ಜಾರಿ ಜತೆಗೆ ಸರಳೀಕರಣಗೊಳಿಸಲಾಗುವುದು ಎಂದು ರಾಹುಲ್‌ ಗಾಂಧಿ ಹೇಳಿದರು.

ಸುಪ್ರೀಂ ಕೋರ್ಟ್‌ ನ್ಯಾಯಾಧೀಶರು ಮಾಧ್ಯಮದ ಮುಂದೆ ಬಂದು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಪರಿಸ್ಥಿತಿ ದೇಶದ ಇತಿಹಾಸದಲ್ಲಿ ಒಮ್ಮೆಯೂ ಬಂದಿರಲಿಲ್ಲ. ದೇಶದ ಹಣ ಕೊಳ್ಳೆ ಹೊಡೆದು ಅದಾನಿ, ಅಂಬಾನಿಯಂತಹ ಶ್ರೀಮಂತರಿಗೆ ಕೊಡುತ್ತಾರೆ. ಈ ಕುರಿತು ಪ್ರಧಾನಿಗೆ ಈಗ ಇಡೀ ದೇಶದ ಜನ ಕೇಳುತ್ತಿದ್ದಾರೆ. ಆದರೆ ನರೇಂದ್ರ ಮೋದಿ ಉತ್ತರ ಕೊಡುತ್ತಿಲ್ಲ.
– ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next