Advertisement

ಕೃಷಿಮೇಳವೋ? ಜನಜಂಗುಳಿ ಜಾತ್ರೆಯೋ?

04:46 PM Sep 21, 2022 | Team Udayavani |

ಧಾರವಾಡ: ಆಗ ಇಲ್ಲಿಗೆ ಬರುವವರೆಲ್ಲರೂ ರೈತರೇ ಆಗಿರುತ್ತಿದ್ದರು, ಬಂದವರಿಗೆ ಕೃಷಿ ಜ್ಞಾನದಾಸೋಹ ನಡೆಯುತ್ತಿತ್ತು. ತಾನು ಬಿತ್ತುವ ಬೀಜ, ಬೆಳೆಯುವ ಪೈರಿನ ವ್ಯತ್ಯಾಸ, ಉತ್ಪತ್ತಿ, ಅಭಿವೃದ್ಧಿಯ ಚರ್ಚೆ ನಡೆಯುತ್ತಿತ್ತು. ಹೀಗಾಗಿಯೇ ಅದು ಕೃಷಿಮೇಳವಾಗಿತ್ತು. ಆದರೆ ಈಗ ನಿಂತವರನ್ನೂ ನೂಕಿಕೊಂಡು ಸಾಗುವ ಜನಜಂಗುಳಿ, ಕೃಷಿಗಿಂತಲೂ ಅನ್ಯವಸ್ತುಗಳ ಮಾರಾಟವೇ ಹೆಚ್ಚಾದ ಮಾರುಕಟ್ಟೆ, ರೈತರಿಗಿಂತಲೂ ಹೆಚ್ಚು ಭಾಗಿಯಾಗುವ ನಗರವಾಸಿಗಳು ಒಟ್ಟಿನಲ್ಲಿ ಈಗ ಇದು ಕೃಷಿ ಜಾತ್ರೆ.

Advertisement

ಹೌದು, ಕಳೆದ ಮೂರು ದಶಕಗಳಿಂದಲೂ ಉತ್ತರ ಕರ್ನಾಟಕ ಭಾಗವಷ್ಟೇ ಅಲ್ಲ, ದೇಶದ ಟಾಪ್‌ಟೆನ್‌ ವಿಶ್ವವಿದ್ಯಾಲಯಗಳ ಪಟ್ಟಿ ಸೇರಿರುವ ಧಾರವಾಡ ಕೃಷಿ ವಿವಿ ನಡೆಸಿಕೊಂಡು ಬಂದಿರುವ ಕೃಷಿಮೇಳದ ಸ್ವರೂಪವೇ ಬದಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಬರೀ ಸಂತೆಯಾಗುತ್ತಿದೆ ಎನ್ನುವ ಆರೋಪ ರೈತರಿಂದಲೇ ಕೇಳಿಬರುತ್ತಿದೆ.

ವರ್ಷದಿಂದ ವರ್ಷಕ್ಕೆ ಮೇಳಕ್ಕೆ ಭೇಟಿಕೊಡುವವರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿದ್ದು, ಕೃಷಿ ಅನುಸಂಧಾನ, ಕೃಷಿ ಮಾದರಿಗಳು, ಕೀಟಗಳ ನಿರ್ವಹಣೆ, ಸಮಗ್ರ ಮಾಹಿತಿ ಪಡೆಯುವ ವಿಧಾನ ಮತ್ತು ವ್ಯವಧಾನಕ್ಕೆ ನೀಡುವ ಸ್ಥಳ ಕೊರತೆಯಾಗುತ್ತಲೇ ಸಾಗುತ್ತಿದೆ. ಬದಲಿಗೆ ವಾಣಿಜ್ಯ ಚಟುವಟಿಕೆಗಳೇ ಸದ್ದು ಮಾಡುತ್ತಿದ್ದು, ಪ್ಲಾಸ್ಟಿಕ್‌ ಬುಟ್ಟಿ ಮಾರಾಟದ ಮೇಳವಾಗಿ ಪರಿಣಮಿಸುತ್ತಿದೆ.

ಕಾಣದ ಪ್ರಾತ್ಯಕ್ಷಿಕೆಗಳು: ಪ್ರತಿವರ್ಷದ ಕೃಷಿ ಮೇಳದಲ್ಲಿ ರೈತರು ತಾವು ಯಾವ ಬೆಳೆಯನ್ನು ಹೇಗೆ ಬೆಳೆಯಬಹುದು ಎನ್ನುವ ಪ್ರಾತ್ಯಕ್ಷಿಕೆಗಳನ್ನು ನೋಡುತ್ತಿದ್ದರು. ಕೃಷಿ ವಿವಿ ಇದನ್ನು ಗಂಭೀರವಾಗಿ ತೆಗೆದುಕೊಂಡು ವಿವಿಧ ಬೆಳೆಗಳನ್ನು ತುಂಡು ಭೂಮಿಯಲ್ಲಿ ಬೆಳೆದು ಅಲ್ಲಿ ಸಮಗ್ರ ಮಾಹಿತಿ ಹಾಕಿ ಸಣ್ಣ ಸಣ್ಣ ಪ್ರಾತ್ಯಕ್ಷಿಕೆಗಳನ್ನು ನೋಡಿ ತಿಳಿಯಲು ಅವಕಾಶವಿತ್ತು.

ಹೊಸದಾಗಿ ಶೋಧನೆ ಮಾಡಿದ ತಳಿಗಳು, ಮಿಶ್ರ ಬೇಸಾಯ ಪದ್ಧತಿಗಳು, ಹೈಟೆಕ್‌ ಬೇಸಾಯ ಉಪಕರಣಗಳನ್ನು ಬಳಸಿಕೊಳ್ಳುವ ವಿಧಾನಗಳು ಸೇರಿದಂತೆ ವಿಭಿನ್ನವಾದ ಪ್ರಾತ್ಯಕ್ಷಿಕೆಗಳು ಇಲ್ಲಿರುತ್ತಿದ್ದವು. ಆದರೆ ಈ ವರ್ಷ ಇದರ ಗೋಜಿಗೆ ಹೋಗದ ಕೃಷಿ ವಿವಿ ಒಟ್ಟಿನಲ್ಲಿ ಕೃಷಿ ಮೇಳ ಮಾಡಿ ಮುಗಿಸಿದೆ. ಪ್ರಾತ್ಯಕ್ಷಿಕೆಗಳ ಜಾಗದಲ್ಲಿ ಹಾಕಿದ ಯಾವ ಬೆಳೆಗಳು ಈ ವರ್ಷ ಚೆನ್ನಾಗಿ ಬಂದಿಲ್ಲ. ಕೊನೆ ಪಕ್ಷ ಅಧಿಕ ಮಳೆಯಿಂದ ಬೆಳೆಹಾನಿಯಾದಾಗ ರೈತರು ಮಾಡಬೇಕಾದ
ಪರ್ಯಾಯ ಬೆಳೆ ಅಥವಾ ಭೂಮಿ ಹದ ಮಾಡುವ ವಿಧಾನಗಳನ್ನಾದರೂ ರೈತರಿಗೆ ತಿಳಿಸಲು ಇಲ್ಲಿ ಅವಕಾಶವಿತ್ತು. ಒಟ್ಟಿನಲ್ಲಿ ಕೃಷಿ ಪ್ರಾತ್ಯಕ್ಷಿಕೆಗಳನ್ನು ರಚಿಸುವಲ್ಲಿ ವಿಫಲವಾಗಿರುವ ವಿವಿ ಇದೀಗ ನೆಪ ಹೇಳಿ ಜಾರಿಕೊಂಡಿದೆ.

Advertisement

ಸ್ಥಳ ವಿಂಗಡಣೆ ಸಾಧ್ಯವೇ?: ಧಾರವಾಡ ಕೃಷಿ ವಿವಿ ಕಿತ್ತೂರು ಕರ್ನಾಟಕ ಭಾಗದ ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಉತ್ತರ ಕನ್ನಡ, ಬಾಗಲಕೋಟೆ ಮತ್ತು ವಿಜಯಪುರ ವ್ಯಾಪ್ತಿ ಹೊಂದಿದೆ. ಆ ಲೆಕ್ಕದಲ್ಲಿ ಧಾರವಾಡದಂತೆ ಬೆಳಗಾವಿಯಲ್ಲಿ ಕೂಡ ಒಂದು ಕೃಷಿ ಮೇಳ ಸಂಘಟಿಸಲು ಸಾಧ್ಯವೇ? ನೋಡಬಹುದಾಗಿದೆ. ಅಥವಾ ಮುಂಗಾರಿ ಕೃಷಿ ಮೇಳ, ಹಿಂಗಾರಿ ಕೃಷಿ ಮೇಳ ಎಂದು ವಿಭಾಗಿಸಿಕೊಂಡು ಎರಡು ಸ್ಥಳದಲ್ಲಿ ನಿಗದಿ ಮಾಡಲು ಕೂಡ ಅವಕಾಶವಿದೆ ಎನ್ನುತ್ತಿದ್ದಾರೆ ಅನ್ನದಾತರು.

ಎರಡು ಕೃಷಿಮೇಳ ಅನಿವಾರ್ಯ: ಬೀಜಮೇಳ, ಕೃಷಿಮೇಳ, ರೈತರಿಂದ ರೈತರಿಗಾಗಿ, ಉಪಕರಣಗಳ ಮಾರಾಟ ಮೇಳ ಹೀಗೆ ಎಲ್ಲವನ್ನೂ ಒಂದೇ ಸಮಯಕ್ಕೆ ಸೇರಿಸಿ ಇಡುತ್ತಿದ್ದು, ಇದರಿಂದ ಕೃಷಿ ಮೇಳದ ಸ್ವರೂಪವೇ ಬದಲಾಗಿ ಹೋಗುತ್ತಿದೆ ಎನ್ನುವುದು ಹಲವು ರೈತರ ಆರೋಪ. ಬೀಜಮೇಳವನ್ನೇ ದೊಡ್ಡ ಪ್ರಮಾಣದಲ್ಲಿ ಒಮ್ಮೆ ಸಂಘಟನೆ ಮಾಡಿ ಬೀಜಗಳ ಸಂರಕ್ಷಣೆ ಮಾಡುವ ವಿಧಾನಗಳ ಕುರಿತು ರೈತರಿಗೆ ದೊಡ್ಡ ಪ್ರಮಾಣದಲ್ಲಿ ಪ್ರಾತ್ಯಕ್ಷಿಕೆಗಳು, ವಿಜ್ಞಾನಿಗಳ ಸಲಹೆ ಮತ್ತು ಬೀಜ ಸಂರಕ್ಷಣೆಯಲ್ಲಿ ಕೆಲಸ ಮಾಡಿದ ಸ್ವತಃ ರೈತರಿಗೆ ಅವಕಾಶ ನೀಡಬಹುದು. ಅದೇ ರೀತಿ ರೈತರ ಯಂತ್ರೋಪಕರಣಗಳ ಮೇಳಗಳನ್ನು ಮಾಡಬಹುದು.

ಇನ್ನು ತರಕಾರಿ ಫಲ, ಪುಷ್ಪ, ಕೀಟಗಳು, ಮೀನು, ಜಾನುವಾರು ಹೀಗೆ ಪ್ರತಿಯೊಂದನ್ನು ಪ್ರತ್ಯೇಕಿಸಿ ದೊಡ್ಡ ಮಟ್ಟದಲ್ಲಿ ಮಾಡುವುದರಿಂದ ನಿಜವಾಗಿಯೂ ಆ ಬಗ್ಗೆ ಆಸಕ್ತಿ ಇರುವವರನ್ನು ಗುರುತಿಸಿ ಆಯಾ ರಂಗದಲ್ಲಿ ಸಾಧನೆ ಮಾಡಲು ಹೆಚ್ಚಿನ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎನ್ನುವ ಮಾತುಗಳು ಕೃಷಿ ಮೇಳದಲ್ಲಿ ರಿಂಗಣಿಸಿದವು.

ಅವಧಿ ವಿಸ್ತರಣೆ ಜರೂರತ್ತು
ಧಾರವಾಡ ಕೃಷಿ ಮೇಳಕ್ಕೆ ತನ್ನದೇ ಗತವೈಭವವಿದೆ. ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು ಜನರು ಭಾಗಿಯಾಗುವ, ಬೀಜ ಸಂರಕ್ಷಣೆ, ಹೊಸತಳಿ ವೃದ್ಧಿ, ರೈತರ ಆದಾಯ ವೃದ್ಧಿ, ಸಮಗ್ರ ಕೃಷಿ ಪದ್ಧತಿ, ಅಷ್ಟೇಯಾಕೆ ಹೈಟೆಕ್‌ ಡ್ರೋಣ್‌ ಆಧಾರಿತ ಕೃಷಿಯ ವರೆಗೂ ಕೃಷಿ ವಿವಿ ಮುಂದಿದೆ. ನಗರ ಕೃಷಿ ಮತ್ತು ಕೈತೋಟಗಳಿಗೆ ಒತ್ತು ನೀಡಿದೆ. ಆದರೆ ಕೃಷಿಮೇಳದ ಮೂಲ ಆಶಯ ರೈತರ ಕೃಷಿಜ್ಞಾನ ಪರಂಪರೆಯ ಸೂತ್ರಗಳನ್ನು ಹಂಚಿಕೊಳ್ಳುವ ವೇದಿಕೆಯಾಗಬೇಕಾಗಿದೆ. ಆದರೆ
ಇದು ಬರೀ ದೊಡ್ಡ ಸಂತೆಯಾಗುತ್ತಿದೆ. ಹೀಗಾಗಿ ಕೃಷಿಮೇಳದ ಸ್ವರೂಪದಲ್ಲಿ ಬದಲಾವಣೆ ಅಗತ್ಯವಾಗಿದೆ. ಒಂದು ಮೇಳ ವಿಭಾಗವಾಗಬೇಕು, ಅಥವಾ ಕೃಷಿ ಮೇಳದ ಅವಧಿ ಒಂದು ವಾರಕ್ಕೆ ವಿಸ್ತರಣೆಯಾಗಬೇಕಿದೆ.

ಹುಬ್ಬಳ್ಳಿ ದುರ್ಗದಬೈಲ್‌ ಸಂತಿಗೂ ಕೃಷಿಮೇಳಕ್ಕೂ ಏನ ವ್ಯತ್ಯಾಸ ಇಲ್ಲದಂಗಾಗೇತಿ. ಇದನ್ನು ಕೃಷಿಮೇಳ ಅನ್ನೊಕಿಂತಾ ಕೃಷಿ ಸಂತಿ ಅನ್ನಬಹುದು. ಯಾವ ಅಂಗಡಿ ಮುಂದ ನಿಂತೂ ಏನು ನೋಡಿ ತಿಳಿದಂಗಾಗೇತಿ. ಹಿಂಗಾಗಿ ರೈತರಿಗೆ ಕೃಷಿ ಹಿತೋಪದೇಶ, ಮನದಟ್ಟು, ಪ್ರಾತ್ಯಕ್ಷಿಕೆ ಬಂದರೆ ಒಳ್ಳೇದು.
ಹುಸೇನಸಾಬ ಸೊನ್ನ, ವಿಜಯಪುರ ರೈತ

ಇಲ್ಲಿ ಬೀಜ ಬಾಳ ಚಲೋ ಇರ್ತಾವ ಅದಕ್ಕ ತಗೊಂಡ ಹೋಗಾಕ ಬರ್ತೆವಿ. ಆದರೆ ವಿಪರೀತ ಜನಾ ಇರೋದ್ರಿಂದ ಮಳಗಿಗೋಳಿಗೆ ಭೇಟಿಕೊಟ್ಟು ತಿಳಿಕೊಳ್ಳಾಕ ಆಗಲಿಲ್ಲ. ರೈತರಕಿಂತಾ ಸಾಮಾನ ಖರೀದಿ ಮಂದಿನ ಬಾಳ ಅದಾರು. ಮೊದಲ ಹಿಂಗಿರಲಿಲ್ಲ. ಇದು ಮೊದಲಿನಂತೆ ಬದಲಾಗಬೇಕು.
ನಿಂಗಪ್ಪ ಲಮಾಣಿ, ಗದಗ ರೈತ

ಬಸವರಾಜ ಹೊಂಗಲ್

Advertisement

Udayavani is now on Telegram. Click here to join our channel and stay updated with the latest news.

Next