ಬೆಂಗಳೂರು: ಕೃಷಿ ಮೇಳದಲ್ಲಿ ಕೂಡ “ಕಾಂತಾರ’ ಕಾಂತಿ ಮೆರುಗು ತುಂಬಿತು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮಳಿಗೆಗಳಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಈಚೆಗೆ ಜನಮನ ಗೆದ್ದ ಕರಾವಳಿ ಸಂಸ್ಕೃತಿಯನ್ನು ಬಿಂಬಿಸುವ “ಕಾಂತಾರ’ ಚಿತ್ರದ ದೈವನರ್ತನದ ಪ್ರತಿಮೆಯನ್ನು ಸಿದ್ಧಪಡಿಸಿದ್ದಾರೆ.
ಮಳಿಗೆಗೆ ಭೇಟಿ ನೀಡುವವರು ಈ ಪ್ರತಿಮೆಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಅಲ್ಲದೆ, ಅದರೊಂದಿಗೆ ಸೆಲ್ಫೀ ತೆಗೆದುಕೊಂಡು ಸಂಭ್ರಮಿಸುತ್ತಿದ್ದುದು ಕಂಡುಬಂತು.
ಇದೇ ವಿಶ್ವವಿದ್ಯಾಲಯದ ಪೆವಿಲಿಯನ್‌ನಲ್ಲಿ ಧಾನ್ಯಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರ ಮೂಡಿತ್ತು. ಅದಕ್ಕೆ ಪುನೀತ್ ನಡಿಗೆ ಕೃಷಿ ಕಡೆಗೆ ಎಂಬ ಶೀರ್ಷಿಕೆ ಕೂಡ ಬರೆಯಲಾಗಿತ್ತು. ಅದೇ ರೀತಿ, ಊಟ-ತಿಂಡಿ ಮಳಿಗೆಗಳ ಪಕ್ಕದಲ್ಲಿ ಪುನೀತ್ ರಾಜ್‌ಕುಮಾರ್ ಸೆಲ್ಫೀ ವೇದಿಕೆಯೂ ಇತ್ತು. ಅಲ್ಲಿ ಅಭಿಮಾನಿಗಳು ನೆಚ್ಚಿನ ನಟನ ಭಾವಚಿತ್ರದೊಂದಿಗೆ ಸೆಲ್ಫೀ ತೆಗೆದುಕೊಂಡು ಸಂಭ್ರಮಿಸಿದರು.