Advertisement

ಕೃಷಿ, ಪರಿಸರಕ್ಕೆ ಧಕ್ಕೆಯಾದ ತೆಂಗಿನ ಚಿಪ್ಪು ಸುಡುವ ಉದ್ಯಮ

09:38 PM Apr 03, 2019 | Lakshmi GovindaRaju |

ತಿಪಟೂರು: ತಾಲೂಕಿನಾದ್ಯಂತ ವ್ಯಾಪಕವಾಗಿ ತೆಂಗಿನ ಚಿಪ್ಪುಗಳನ್ನು ಹಾಡಹಗಲೇ ಕೃಷಿ ಭೂಮಿ, ಬಯಲು ಪ್ರದೇಶಗಳಲ್ಲೇ ಅಕ್ರಮ ಮತ್ತು ಅನಧಿಕೃತವಾಗಿ ಸುಡುತ್ತಿದ್ದು, ಇದು ಕೃಷಿ ಉತ್ಪನ್ನ ಹಾಗೂ ಇಳುವರಿ ಮೇಲೆಯೂ ಪ್ರಭಾವ ಬೀರಿ ಪರಿಸರಕ್ಕೆ ತೀವ್ರ ಧಕ್ಕೆಯಾಗಿದೆ. ಪರಿಸರ ಇಲಾಖೆ ಸೇರಿದಂತೆ ಯಾವುದೇ ಇಲಾಖೆಗಳಿಂದ ಪರವಾನಗಿ ಪಡೆಯದೆ ಸುಡುವುದರಿಂದ ದಟ್ಟ ಹೊಗೆಯಿಂದ ವಿಪರೀತ ತಾಪಮಾನ ಏರಿಕೆಯಾಗುತ್ತಿದೆ.

Advertisement

ಅನ್ನದಾತರಿಗೆ ಕೊಡಲಿ ಪೆಟ್ಟು: ತಾಲೂಕಿನ ನೂರಾರು ಕಡೆಗಳಲ್ಲಿ ಈ ದಂಧೆ ನಿರಂತರವಾಗಿ ನಡೆಯುತ್ತಿದ್ದರೂ ಈ ಅಕ್ರಮ ದಂಧೆಗಳನ್ನು ತಡೆಗಟ್ಟಬೇಕಾದ ಕಂದಾಯ ಅಧಿಕಾರಿಗಳು ನೆಪಮಾತ್ರಕ್ಕೆ ಮಾತ್ರ ಕೆಲವರಿಗೆ ನೋಟಿಸ್‌ ನೀಡಿ ಕೈತೊಳೆದುಕೊಳ್ಳುತ್ತಿರುವುದಲ್ಲದೇ ಚಿಪ್ಪು ಸುಡುವ ಉದ್ಯಮಿಗಳ ಹಿತ ಕಾಯುವ ಮೂಲಕ ಅನ್ನದಾತನ ಬದುಕಿಗೆ ಕೊಡಲಿ ಪೆಟ್ಟು ನೀಡುತ್ತಿದ್ದಾರೆ. ಈ ದಂಧೆ ನಡೆಸುತ್ತಿರುವರು ಕೃಷಿಗೆ ಯೋಗ್ಯವಾಗಿರುವ ಮತ್ತು ಬೆಳೆ ಬೆಳೆಯುವ ಬಯಲು ಪ್ರದೇಶದ ಜಮೀನುಗಳನ್ನೇ ಆಯ್ಕೆ ಮಾಡಿಕೊಂಡು (ಚಿಪ್ಪು ಸುಡಲು) ಬಾಡಿಗೆಗೆ ಪಡೆದು ತಾಲೂಕಿನಾದ್ಯಂತ ನೂರಾರು ಕಡೆಗಳಲ್ಲಿ ಈ ದಂಧೆ ನಡೆಸುತ್ತಿದ್ದಾರೆ.

ರೈತ ಉಪಕಾರಿಗಳು ನಾಶ: ಕೃಷಿ ಭೂಮಿಯಲ್ಲೇ ದೊಡ್ಡ ಗುಂಡಿಗಳನ್ನು ತೆಗೆದು ಲೋಡುಗಟ್ಟಲೆ ಕೊಬ್ಬರಿ ಚಿಪ್ಪುಗಳನ್ನು ಸುರಿದು ಬೆಂಕಿ ಹಚ್ಚುತ್ತಿದ್ದು, ಈ ಗುಂಡಿಯಿಂದ ಭುಗಿಲೇಳುವ ನೂರಾರು ಮೀಟರ್‌ ಎತ್ತರ ಹಾಗೂ ವಿಸ್ತಾರದಲ್ಲಿ ದಟ್ಟ ಹೊಗೆ ನಿರಂತರವಾಗಿ ಮೇಲೆ ಬಂದು ಕೃಷಿ ಭೂಮಿ ಸುತ್ತಮುತ್ತ ಹರಡಿಕೊಳ್ಳುತ್ತಿದೆ. ಹೀಗೆ ಹಬ್ಬಿದ ದಟ್ಟ ಹೊಗೆ ಗಾಳಿ ಬೀಸಿದಂತೆಲ್ಲಾ ರಸ್ತೆ, ಹೊಲ-ತೋಟಗಳಿಗೆಲ್ಲಾ ಸುತ್ತಿಕೊಳ್ಳುತ್ತಿದೆ.

ಈ ಗುಂಡಿಗಳಿಂದ ಅತಿಯಾದ ಬಿಸಿಯಿರುವ ದಟ್ಟ ಹೊಗೆ ಹೊಲ-ತೋಟಗಳಲ್ಲೇ ಯಥೇತ್ಛವಾಗಿ ಹರಡಿಕೊಳ್ಳುತ್ತಿರುವುದರಿಂದ ಗಿಡಮರಗಳು ಸುಟ್ಟ ರೋಗಬಂದಂತಾಗಿ ಕೃಷಿ ಮತ್ತು ಪರಸರಕ್ಕೆ ತೀವ್ರ ಹಾನಿಯಾಗುತ್ತಿದೆ. ರೈತ ಉಪಕಾರಿಗಳಾದ ಜೇನು ಮತ್ತಿತರೆ ಕೀಟಗಳು, ಪಕ್ಷಿ ಸಂಕುಲಗಳು ನಾಶವಾಗಿ ಹೊಲ-ತೋಟಗಳ ಬೆಳೆಗಳ ಇಳುವರಿ ವಿಪರೀತವಾಗಿ ಕಡಿಮೆಯಾಗಿರುವುದಲ್ಲದೇ ಅತಿಯಾದ ತಾಪಮಾನಕ್ಕೆ ಖುಷ್ಕಿ ಬೆಳೆಗಳಾದ ರಾಗಿ, ತೊಗರಿ, ಜೋಳ ಸೇರಿದಂತೆ ತೆಂಗು, ಅಡಕೆ ಮತ್ತು ಬಾಳೆ ಇನ್ನಿತರೆ ತೋಟಗಾರಿಕೆ ಬೆಳೆಗಳು ವಿವಿಧ ರೋಗರುಜನಿಗಳಿಗೆ ಈಡಾಗಿ ರೈತನಿಗೆ ತೀವ್ರ ಹೊಡೆತ ಬೀಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

ಅಕ್ರಮಕ್ಕೆ ಅಧಿಕಾರಿಗಳೇ ಸಾಥ್‌: ಕೃಷಿ ಉಪಯೋಗಕ್ಕೆಂದು ಉಚಿತ ವಿದ್ಯುತ್‌ ಬಳಕೆಯಲ್ಲಿರುವ ಪಂಪ್‌ಸೆಟ್‌ಗಳಿಂದ ಅಕ್ರಮವಾಗಿ ಈ ಉದ್ಯಮಗಳಿಗೆ ಅಗತ್ಯವಿರುವ ನೀರನ್ನು ಉಪಯೋಗಿಸುತ್ತಿದ್ದು, ಈ ಬಗ್ಗೆ ಬೆಸ್ಕಾಂನವರು ಯಾವುದೇ ಕ್ರಮ ಜರುಗಿಸದಿರುವುದು ಅನುಮಾನಕ್ಕೆಡೆ ಮಾಡಿದೆ. ಈ ಎಲ್ಲಾ ಅಕ್ರಮಗಳು ತಾಲೂಕಿನ ಅಧಿಕಾರಿಗಳಿಗೆ ತಿಳಿದಿದ್ದರೂ ಚಿಪ್ಪು ಸುಡುವವರು ಬಿಸಾಕುವ ಎಂಜಲು ಕಾಸಿಗೆ ಬಲಿಯಾಗಿ ತಾಲೂಕಿನಲ್ಲಿ ಈಗಾಗಲೇ ವಿನಾಶದಂಚಿಗೆ ತಲುಪಿರುವ ಕೃಷಿಗೆ ಮತ್ತಷ್ಟು ಹೊಡೆತ ನೀಡುವ ಕೆಲಸಕ್ಕೆ ಪರೋಕ್ಷವಾಗಿ ಕಂದಾಯ ಅಧಿಕಾರಿಗಳೇ ಬೆಂಬಲಿಸುತ್ತಿರುವುದು ಜಿಲ್ಲಾಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ನಾಚಿಕೆ ತರುವಂತಿದೆ.

Advertisement

ತಾಲೂಕು ಆಡಳಿತದ ವೈಫ‌ಲ್ಯ: ಚಿಪ್ಪು ಸುಡುವ ವ್ಯವಹಾರ ದೊಡ್ಡಮಟ್ಟದ ಟರ್ನ್ ಓವರ್‌ ತಲುಪಿ ಇದೊಂದು ಅಕ್ರಮ ಬೃಹತ್‌ ಉದ್ಯಮವಾಗಿದ್ದು, ಹೆಚ್ಚಿನ ಲಾಭ ತರುತ್ತಿರುವ ಅಂತರ್‌ರಾಜ್ಯ ಬ್ಯುಸಿನೆಸ್‌ ಆಗಿ ನಡೆಯುತ್ತಿದೆ. ವಿಪರ್ಯಾಸವೆಂದರೆ ಪ್ರತಿಯೊಂದು ಉದ್ಯಮ, ಕೈಗಾರಿಕೆಗಳಿಗೂ ಹತ್ತು ಹಲವು ನೀತಿನಿಯಮಗಳು, ಕಾಯ್ದೆ-ಕಾನೂನುಗಳು ಜಾರಿಯಲ್ಲಿದ್ದರೂ ಕಂದಾಯ, ಪರಿಸರ, ಕೈಗಾರಿಕೆ ಇಲಾಖೆ, ಮತ್ತು ತಾಲೂಕು, ಗ್ರಾಮ ಪಂಚಾಯಿತಿಗಳು ಇಂಥ ಅಕ್ರಮ ವ್ಯವಹಾರಗಳಿಗೆ ಕುಮ್ಮಕ್ಕು ನೀಡುವ ಕೆಲಸ ಮಾಡುತ್ತಿರುವುದು ತಾಲೂಕು ಆಡಳಿತದ ವೈಫ‌ಲ್ಯ ಎತ್ತಿ ತೋರಿಸುತ್ತಿದೆ.

ಈ ಎಲ್ಲಾ ಕಾರಣಗಳಿಂದ ಜಿಲ್ಲಾಧಿಕಾರಿಗಳು, ಪರಿಸರ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆಗಳು ಕೂಡಲೇ ಚಿಪ್ಪು ಸುಡುವ ಉದ್ಯಮಗಳಿಗೆ ವೈಜ್ಞಾನಿಕ ರೀತಿಯ ತಂತ್ರಜಾnನ ಮತ್ತು ಕಠಿಣ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಇದೀಗ ಚಾಲ್ತಿಯಲ್ಲಿರುವ ಅವೈಜಾnನಿಕ ಮತ್ತು ಅಕ್ರಮ ದಂಧೆಯ ಚಿಪ್ಪು ಸುಡುವ ಉದ್ಯಮಗಳನ್ನು ಕೂಡಲೇ ಬಂದ್‌ ಮಾಡಿಸುವ ಮೂಲಕ ಈ ಉದ್ಯಮಗಳಿಗೆ ವೈಜ್ಞಾನಿಕ ನೆಲೆ, ಕಠಿಣ ರೀತಿನೀತಿಗಳನ್ನು ರೂಪಿಸಿ ಪರಿಸರ ಹಾಗೂ ರೈತರ ಹಿತಕಾಯಬೇಕಾಗಿದೆ.

ಕೊಬ್ಬರಿ ಚಿಪ್ಪಿನ ಬಗ್ಗೆ…: ಕೊಬ್ಬರಿ ಚಿಪ್ಪಿನ ಇದ್ದಿಲಿನಿಂದ ಸಾಕಷ್ಟು ಉಪ್ಪು ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಅಲ್ಲದೇ ಮದ್ದುಗುಂಡು ತಯಾರಿಕೆ, ಶೆಲ್‌ಗ‌ಳ ತಯಾರಿಕೆ, ಫಿಲ್ಟರ್‌ ಕ್ರಮಗಳಲ್ಲಿ ಸೇರಿದಂತೆ ಮಿಲಿಟರಿ ಉತ್ಪನ್ನಗಳು ಸೇರಿದಂತೆ ಬಣ್ಣ ತಯಾರಿಕೆಯಲ್ಲೂ ಉಪಯೋಗಿಸಲಾಗುತ್ತದೆ ಎಂದು ಹೇಳುತ್ತಿದ್ದು, ಚಿಪ್ಪಿನ ಇದ್ದಿಲಿನಿಂದ ಹೆಚ್ಚಿನ ಉಪಯೋಗವಿದೆ. ಈ ಸಂಬಂಧ ಸಾಕಷ್ಟು ಜನರು ರೈತರಿಂದ ಮತ್ತು ತೆಂಗಿನಕಾಯಿ ಪುಡಿ ಉದ್ದಿಮೆಗಳಿಂದ ಚಿಪ್ಪುಗಳನ್ನು ಖರೀದಿಸಿ ಬೇಕಾಬಿಟ್ಟಿ ಜಮೀನುಗಳಲ್ಲಿ ಗುಂಡಿ ತೆಗೆದು ಸುಟ್ಟು ಇದ್ದಿಲನ್ನು ಹೋಲ್‌ಸೇಲ್‌ ಖರೀದಿದಾರರಿಗೆ ಮಾರುತ್ತಾರೆ. ಅವರು ಉತ್ತರ ಭಾರತ ಭಾಗಗಳಿಗೆ ಹೆಚ್ಚು ರವಾನೆ ಮಾಡುತ್ತಾರೆ. ಒಟ್ಟಾರೆ ಈ ಉದ್ದಿಮೆ ಒಂದು ರೀತಿಯಲ್ಲಿ ದೊಡ್ಡಮಾರುಕಟ್ಟೆಯನ್ನೇ ಸೃಷ್ಟಿಸಿದೆ.

ಕೊಬ್ಬರಿ ಚಿಪ್ಪು ಸುಡುವ ಉದ್ದಿಮೆಗೆ ಮುಖ್ಯವಾಗಿ ಪರಿಸರ ಇಲಾಖೆ ಕ್ರಮತೆಗೆದುಕೊಳ್ಳಬೇಕು. ಕಂದಾಯ ಜಮೀನಿನಲ್ಲಿ ಉದ್ದಿಮೆಗಳಿದ್ದಲ್ಲಿ ಅವುಗಳ ಬಗ್ಗೆ ನಾವು ಕೆಲ ಕ್ರಮತೆಗೆದುಕೊಂಡು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇವೆ. ಈ ಬಗ್ಗೆ ಆರೋಗ್ಯಾಧಿಕಾರಿಗಳಿಗೂ ನಾವು ಪರಿಶೀಲಿಸಲು ಹೇಳಿದ್ದೇವೆ. ಒಂದು ರೀತಿಯಲ್ಲಿ ಕೃಷಿ ಹಾಗೂ ಪರಿಸರಕ್ಕೆ ಧಕ್ಕೆ ತರುತ್ತಿರುವ ಈ ಉದ್ದಿಮೆಗೆ ಸರ್ಕಾರ ಹಾಗೂ ಪರಿಸರ ಇಲಾಖೆ ರೂಪುರೇಷೆ ನೀಡಬೇಕು.
-ಹೆಸರು ಹೇಳಲು ಇಚ್ಛಿಸದ ಕಂದಾಯಾಧಿಕಾರಿ ತನಿಖಾಧಿಕಾರಿ, ತಿಪಟೂರು

ತೆಂಗಿನ ಚಿಪ್ಪು ಸುಡುವ ಹೊಗೆಯಿಂದ ಪ್ರಾಣಿ ಪಕ್ಷಿಗಳಿಗೆ ಅಲ್ಲದೇ ಮನುಷ್ಯರಿಗೂ ಆರೋಗ್ಯ ಹದಗೆಡುತ್ತಿದೆ. ರಸ್ತೆ ಬದಿ ಇರುವ ಘಟಕಗಳಿಂದ ವಾಹನ ಸವಾರರಿಗೆ ದಾರಿ ಕಾಣುವುದಿಲ್ಲ. ಅಲ್ಲದೇ ಹೊಗೆಯಿಂದ ಕಣ್ಣುರಿ, ಗಂಟುಲು ಹಾನಿಯುಂಟು ಮಾಡುತ್ತಿದೆ. ಶಾಖ ಹೆಚ್ಚಳದಿಂದ ತೆಂಗಿನ ಮರಕ್ಕೆ ಹಾನಿಯಾಗುತ್ತಿದೆ. ಕಾಯಿ ಕಟ್ಟಲು ತೊಂದರೆಯಾಗುತ್ತಿದೆ. ಜೇನು ಹುಳು ನಾಶದಿಂದ ಪಾರಾಗ ಸ್ಪರ್ಶಕ್ರಿಯೆ ಆಗುತ್ತಿಲ್ಲ.
-ಬಿ.ಟಿ.ಕುಮಾರ, ಜೈ ಕರ್ನಾಟಕ ತಾಲೂಕು ಅಧ್ಯಕ್ಷ

* ಬಿ.ರಂಗಸ್ವಾಮಿ, ತಿಪಟೂರು

Advertisement

Udayavani is now on Telegram. Click here to join our channel and stay updated with the latest news.

Next