Advertisement

ಮಳೆ ಇಳಿಮುಖ, ಕೃಷಿ ಚಟುವಟಿಕೆ ಬಿರುಸು

05:28 PM Jul 17, 2022 | Team Udayavani |

ಉಡುಪಿ/ಕಾಪು: ಪುನರ್ವಸು ಮಳೆಯ ಅಬ್ಬರದಿಂದ ಕೃಷಿಕರು ಅಕ್ಷರಶಃ ಕಂಗಾಲಾಗಿದ್ದರು. ಈಗ ಜಿಲ್ಲಾದ್ಯಂತ ಮಳೆಯ ತೀವ್ರತೆ ಕಡಿಮೆಯಾಗಿದ್ದು ಕೃಷಿ ಚಟುವಟಿಕೆ ಚುರುಕುಗೊಂಡಿದೆ.

Advertisement

ಕಳೆದ ಕೆಲವು ದಿನಗಳಿಂದ ನಿರಂತರ ಸುರಿದ ಭಾರೀ ಮಳೆಯಿಂದಾಗಿ ಕೃಷಿ ಚಟುವಟಿಕೆಗೆ ಸ್ತಬ್ಧಗೊಂಡಿತ್ತು. ಗದ್ದೆಗಳಲ್ಲಿ ನೀರು ತುಂಬಿದ್ದು, ಕೃಷಿ ಪ್ರದೇಶ ಸಂಪೂರ್ಣ ಜಲಾವೃತವಾಗಿದ್ದರಿಂದ ರೈತರಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಮಳೆ ಕಡಿಮೆಯಾಗಿದ್ದರಿಂದ ರೈತರು ಗದ್ದೆಗಳಲ್ಲಿ ಕೃಷಿ ಕಾರ್ಯ ಆರಂಭಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ 38 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬಿತ್ತನೆಯ ಗುರಿ ಹೊಂದಲಾಗಿದೆ. ಈಗಾಗಲೇ 15,261 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ತೀವ್ರ ಮಳೆಯಿಂದ 129 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 3,926 ಹೆಕ್ಟೇರ್‌ ಪ್ರದೇಶ ಜಲಾವೃತಗೊಂಡಿದೆ. ಕೃಷಿ ಚಟುವಟಿಕೆ ಈಗ ಚುರುಕುಗೊಂಡಿರುವುದರಿಂದ ಬಿತ್ತನೆ ಶುರುವಾಲಿದೆ.

ಉಡುಪಿ, ಕುಂದಾಪುರ, ಕಾಪು, ಕಾರ್ಕಳ, ಬೈಂದೂರು, ಬ್ರಹ್ಮಾವರ ಹಾಗೂ ಹೆಬ್ರಿಯ ಬಹುತೇಕ ರೈತರು ಗದ್ದೆಯಲ್ಲಿ ಭತ್ತದ ಕೃಷಿ ಕೆಲಸವನ್ನು ಪ್ರಾರಂಭಿಸಿದ್ದಾರೆ. ತಂಡ ತಂಡವಾಗಿ ನೇಜಿ ಕೀಳುವುದು ಮತ್ತು ನೇಜಿ ನಾಟಿ ಕೆಲಸದಲ್ಲಿ ನಿರತರಾಗಿದ್ದಾರೆ.

ಸಾಂಪ್ರದಾಯಿಕ ಕೃಷಿಗೆ ಉತ್ತೇಜನ

Advertisement

ಇತೀ¤ಚಿನ ದಿನಗಳಲ್ಲಿ ಕೃಷಿ ಕೂಲಿಯಾಳುಗಳ ಕೊರತೆ ಬಹುವಾಗಿ ಕಾಡುತ್ತಿದ್ದು ಇದರಿಂದಾಗಿ ಕರಾವಳಿಯಲ್ಲಿ ಸಾಂಪ್ರದಾಯಿಕ ಭತ್ತದ ನಾಟಿ ಕಾರ್ಯ ಕಡಿಮೆಯಾಗುತ್ತಿದೆ. ಭತ್ತದ ನೇಜಿ ನಾಟಿ ಕೆಲಸವನ್ನು ಮುಂದಿನ ಪೀಳಿಗೆಗೂ ಪರಿಚಯಿಸಿ ಕೊಡುವ ಮತ್ತು ಉಳಿಸಿಕೊಡಬೇಕು ಎಂಬ ಇರಾದೆಯೊಂದಿಗೆ ಮನೆಯ 7 ಎಕರೆ ಕೃಷಿ ಭೂಮಿಯಲ್ಲಿ ಸಾಂಪ್ರದಾಯಿಕ ಮಾದರಿಯ ನಾಟಿ ಕೆಲಸವನ್ನು ಪ್ರಗತಿಪರ ಕೃಷಿಕರಾದ ವೇ| ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ ನಡೆಸುತ್ತಿ ದ್ದಾರೆ. ಅದಕ್ಕೆ ಬೇಕಾಗುವಷ್ಟು ಕೃಷಿ ಕೂಲಿಯಾಳುಗಳನ್ನು ಸ್ಥಳೀಯ ಕುತ್ಯಾರು – ಕೇಂಜ ಪರಿಸರ ಮಾತ್ರವಲ್ಲದೆ ಇನ್ನಾ, ಪಿಲಾರು ಪರಿಸರದಿಂದ ಪ್ರತ್ಯೇಕ ವಾಹನದ ಮೂಲಕ ಕರೆ ತರಲಾಗುತ್ತಿದೆ. ಅವರಿಗೆ ಉತ್ತಮ ಸಂಬಳದ ಜತೆಗೆ ಉಚಿತ ವಾಹನ, ಊಟೋಪಚಾರವನ್ನು ಒದಗಿಸಲಾಗುತ್ತದೆ.

ಸರಕಾರದಿಂದ ಬಿತ್ತನೆ ಬೀಜ ಖರೀದಿ ಕಡಿಮೆ

ಜಿಲ್ಲೆಯಲ್ಲಿ ಸರಕಾರದಿಂದ ನೀಡು ಬಿತ್ತನೆ ಬೀಜವನ್ನು ಪಡೆಯುವ ರೈತರ ಪ್ರಮಾಣ ತೀರ ಕಡಿಮೆಯಿದೆ. ಶೇ.5ರಿಂದ ಶೇ.10 ಪ್ರಮಾಣದಲ್ಲಿ ರೈತರು ಮಾತ್ರ ಸರಕಾರದಿಂದ ನೀಡುವ ಬಿತ್ತನೆ ಬೀಜ ಪಡೆಯುತ್ತಾರೆ. ಮಳೆಯಿಂದ ಬಿತ್ತನೆ ಬೀಜ ಹಾನಿಯಾಗಿದ್ದಲ್ಲಿ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ಬಿತ್ತನೆ ಬೀಜ ಪಡೆಯಬಹುದು. ಈಗಾಗಲೇ ಬಿತ್ತನೆ ಬೀಜ ಪಡೆದಿರುವ ರೈತರಿಗೆ ನೀಡಲು ಸ್ವಲ್ಪ ಕಷ್ಟವಾಗುತ್ತದೆ. ಇದಕ್ಕೆ ಸರಕಾರದ ಪರಿಷ್ಕೃತ ಆದೇಶವೂ ಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮಳೆ ಕಡಿಮೆಯಾಗಿದೆ: ಮಳೆ ಕಡಿಮೆಯಾಗಿರುವುದರಿಂದ ಕೃಷಿ ಚಟುವಟಿಕೆ ಜಿಲ್ಲಾದ್ಯಂತ ಬಿರುಸುಗೊಂಡಿದೆ. 38 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದ್ದೇವೆ. ಮಳೆಯಿಂದ ಆಗಿರುವ ಬೆಳೆ ಹಾನಿಯ ಸಮೀಕ್ಷೆಯೂ ನಡೆಯುತ್ತಿದೆ. –ಡಾ| ಕೆಂಪೇಗೌಡ, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಉಡುಪಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next