Advertisement

ಶೂನ್ಯ ಬಂಡವಾಳದ ಸಾವಯವ ಭತ್ತದ ಕೃಷಿ ಸಾಧಕ

10:08 AM Dec 25, 2019 | mahesh |

ಹೆಸರು: ಕಮಲಾಕ್ಷ ಶಂಭೂರು
ಏನು ಕೃಷಿ: ಮಿಶ್ರಬೆಳೆ
ವಯಸ್ಸು: 50
ಕೃಷಿ ಪ್ರದೇಶ: 4 ಎಕ್ರೆ

Advertisement

ನಾವು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಕಲ್ಲಡ್ಕ: ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಶಾಂತಿಲ ನಿವಾಸಿ ಕಮಲಾಕ್ಷ ಶಂಭೂರು ಪರಿಪೂರ್ಣ ಸಾವಯವ ಭತ್ತದ ಕೃಷಿಕರಾಗಿ ಗುರುತಿಸಿಕೊಂಡವರು. ತಾನು ಮಾಡುತ್ತಿದ್ದ ಎಲೆಕ್ಟ್ರೀಷಿಯನ್‌ ವೃತ್ತಿಯನ್ನು ತೃಜಿಸಿ ಕಳೆದ ಆರು ವರ್ಷಗಳಿಂದ ಶೂನ್ಯ ಬಂಡವಾಳದ ಸಾವಯವ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಸಾಧಕ. ಶಂಭೂರು ಭೂತೊಲೆಮಾರು ಪ್ರದೇಶದಲ್ಲಿ ಒಟ್ಟು ನಾಲ್ಕು ಎಕ್ರೆ ಜಮೀನಿನಲ್ಲಿ ಎರಡು ಎಕ್ರೆಯಲ್ಲಿ ಭತ್ತದ ಕೃಷಿ, ಎರಡು ಎಕ್ರೆಯಲ್ಲಿ ಅಡಿಕೆ, 1 ಎಕ್ರೆಯಲ್ಲಿ ತರಕಾರಿ ಕೃಷಿ ಮಾಡುತ್ತಿದ್ದಾರೆ. ತನ್ನ ಜಮೀನಿನಲ್ಲಿ ಮಾತ್ರವಲ್ಲ ಹತ್ತಿರದ (ಹಡಿಲು ಗದ್ದೆ) ಬಂಜರು ಭೂಮಿಯನ್ನೂ ಪಡೆದು ಭತ್ತದ ಕೃಷಿ ಮಾಡುತ್ತಿದ್ದಾರೆ. ಅವರು ಕಜೆ ಜಯ ಬೀಜವನ್ನು ಬಳಸಿ ಭತ್ತದ ಕೃಷಿ ಮಾಡುವುದರಿಂದ ನಿರ್ದಿಷ್ಟ ಸಮಯದಲ್ಲಿ ಇಳುವರಿ ಪಡೆಯಲು ಸಾಧ್ಯವಾಗಿದೆ. ಕನಿಷ್ಠ 30 ಕ್ವಿಂಟಾಲ್‌ ಭತ್ತದ ಫಸಲನ್ನು ಪಡೆಯುತ್ತಾರೆ. ವಾರ್ಷಿಕ ಕನಿಷ್ಠ ಎರಡು ಬೆಳೆಗಳನ್ನು ತೆಗೆಯುತ್ತಾರೆ.ಆಧುನಿಕ ಯಂತ್ರೋಪಕರಣ ಬಳಸಿ, ಸಮಯ ಮತ್ತು ವೆಚ್ಚ ಉಳಿಸಬಹುದು ಎನ್ನುತ್ತಾರೆ. ಅವರು ಸಾಕುತ್ತಿರುವ ಎರಡು ದನಗಳಿಂದ ಸಿಗುವ ಸೆಗಣಿ ಸಾವಯವ ಗೊಬ್ಬರದ ಆವಶ್ಯಕತೆಯನ್ನು ಪೂರೈಸುತ್ತಿದೆ. ಸಾವಯವ ತರಕಾರಿಯಾಗಿ ಬಸಳೆ, ತೊಂಡೆ, ಬದನೆ, ಹೀರೆ, ಸೌತೆ ಸಹಿತ ಇತರ ಬೆಳೆಗಳನ್ನು ಬೆಳೆಯುತ್ತಾರೆ. ಮಾರಾಟಕ್ಕೂ ನೀಡುತ್ತಾರೆ.

ಜೀವಾಮೃತ ಗೊಬ್ಬರ ಬಳಕೆ
ಸಾವಯವ ಭತ್ತದ ಕೃಷಿಗೆ ಜೀವಾಮೃತ ಗೊಬ್ಬರ ಬಳಸುತ್ತಾರೆ. ಸೆಗಣಿ, ಗಂಜಳ, ಯಾವುದೇ ದ್ವಿದಳ ಧಾನ್ಯದ ಹುಡಿ, 2 ಕೆ.ಜಿ. ಕಪ್ಪು ಬೆಲ್ಲ, ಒಂದು ಹಿಡಿ ಮಣ್ಣು ಬಳಸಿ ನಿರ್ದಿಷ್ಟ ಪ್ರಮಾಣದಲ್ಲಿ ಮಾಡುವ ಗೊಬ್ಬರವೇ ಸಾವಯವ ಜೀವಾಮೃತ. ಇದರಿಂದ ಮಣ್ಣಿನಲ್ಲಿ ಪೋಷಕಾಂಶ ದ್ವಿಗುಣ ಆಗುತ್ತದೆ. ರೋಗ ಬಾಧೆಯೂ ಕಡಿಮೆ.

ಶೂನ್ಯ ಬಂಡವಾಳದ ಕೃಷಿ
ಅವರ ಭೂಮಿಯಲ್ಲಿ ಬ್ರಹ್ಮಾವರ ಕೃಷಿ ವಿಜ್ಞಾನ ಸಂಶೋಧನ ಕೇಂದ್ರವು ಕೃಷಿ ರೋಗಾಣು ನಿವಾರಣೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಂಡಿದೆ. ಕ್ಷೇತ್ರೊತ್ಸವ ನಡೆಸಿದೆ. ರಾಜ್ಯ ಸಹಾಯಕ ಜಂಟಿ ಕೃಷಿ ನಿರ್ದೇಶಕ, ವಿಜ್ಞಾನಿ, ಡಾ| ರಾಜು ಸ್ವತಃ ಬಂದು ವೀಕ್ಷಣೆ ಮಾಡಿ ಶೂನ್ಯ ಬಂಡವಾಳದ ಕೃಷಿ ಮಾಹಿತಿ ಪಡೆದಿದ್ದಾರೆ.

Advertisement

ಮಿನಿ ಗೋಬರ್‌ ಅನಿಲ ಸ್ಥಾವರ
ಅವರ ಸಾಧನೆಯನ್ನು ಗುರುತಿಸಿ ಮಂಗಳೂರು ಎಂಆರ್‌ಪಿಎಲ್‌ ಆಧುನಿಕ ಮಾದರಿ ಮಿನಿ ಗೋಬರ್‌ ಅನಿಲ ಸ್ಥಾವರ ಒದಗಿಸಿದೆ. ಇದರಲ್ಲಿ ಹಾಕಿದ ಸೆಗಣಿಯಿಂದ ದಿನಕ್ಕೆ ಕನಿಷ್ಟ ಮೂರು ಗಂಟೆಗಳಷ್ಟು ಅಡುಗೆ ಅನಿಲವು ಪೂರೈಕೆ ಆಗುತ್ತಿದೆ.

ಪ್ರಶಸ್ತಿ -ಸಮ್ಮಾನ
2019ರ ಅಕ್ಟೋಬರ್‌ನಲ್ಲಿ ಕೃಷಿ ಮತ್ತು ತೋಟಗಾರಿಕ ವಿಶ್ವವಿದ್ಯಾಲಯ ಶಿವಮೊಗ್ಗ, ಕೃಷಿ ಇಲಾಖೆ ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ ಜಿಲ್ಲೆ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನ ಕೇಂದ್ರ ಬ್ರಹ್ಮಾವರ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯ (ಕರಾವಳಿ ವಲಯ) ಪ್ರಶಸ್ತಿ-ಪುರಸ್ಕಾರವನ್ನು ಪಡೆದಿದ್ದಾರೆ.

– ವಿದ್ಯಾಭ್ಯಾಸ-ಪಿಯುಸಿ
 ಸತತ 6 ವರ್ಷಗಳಿಂದ ಸಾಧನೆ
 ವಾರ್ಷಿಕ ಕನಿಷ್ಠ ಎರಡು ಬೆಳೆ
 ಮೊಬೈಲ್‌ ಸಂಖ್ಯೆ- 9481939431

ಆದಾಯ ನಿರಂತರ
ವಾಣಿಜ್ಯ ಕೃಷಿ ತೆಂಗು, ಅಡಿಕೆ, ತರಕಾರಿ, ಬಾಳೆ ಕೃಷಿಯ ಜತೆಗೆ ಹೈನುಗಾರಿಕೆ ಮಾಡಿದಲ್ಲಿ ಆದಾಯ ನಿರಂತರವಾಗಿ ಬರುತ್ತದೆ. ಸಾವಯವ ಕೃಷಿಯಿಂದ ಭೂಮಿಯ ಸಾರ ಹೆಚ್ಚುವುದು. ಖರ್ಚು ಕಡಿಮೆ. ಮಾಸಿಕ ನಿರ್ದಿಷ್ಟ ಸಂಬಳದಷ್ಟು ಆದಾಯ ಕೃಷಿಯಲ್ಲಿ ಕೂಡಾ ಸಾಧ್ಯ. ಆಧುನಿಕ ವ್ಯವಸ್ಥೆಯಲ್ಲಿ ಎಲ್ಲದಕ್ಕೂ ಬೇಡಿಕೆ ಇದೆ. ಹಾಗಾಗಿ ವೃತ್ತಿ ಬದುಕನ್ನು ತ್ಯಜಿಸಿ ಕೃಷಿ ಬದುಕನ್ನು ಅವಲಂಬಿಸಿದೆ. ಇದರಿಂದ ಒತ್ತಡ ರಹಿತವಾಗಿ ಕುಟುಂಬ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ.
-ಕಮಲಾಕ್ಷ ಶಂಭೂರು, ಕೃಷಿಕ

ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next