ಬೆಂಗಳೂರು: ಸರ್ಕಾರಿ ಶಾಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಹಾಗೂ ಶಿಕ್ಷಕರ ಬೋಧನಾ ಸಾಮಾರ್ಥ್ಯ ಹೆಚ್ಚಿಸಲು ನಾಲ್ಕು ಸರ್ಕಾರೇತರ ಸಂಸ್ಥೆ (ಎನ್‌ಜಿಒ)ಗಳ ಜತೆ ಸಾರ್ವಜನಿಕ ಶಿಕ್ಷಣ ಇಲಾಖೆ ಬುಧವಾರ ಒಪ್ಪಂದ ಮಾಡಿಕೊಂಡಿದೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಅಜೀಂ ಪ್ರೇಮ್‌ಜೀ ಫೌಂಡೇಷನ್ (ಶಿಕ್ಷಕರಿಗೆ ತರಬೇತಿ), ಶಿಕ್ಷಣ ಫೌಂಡೇಷನ್ (ಮಕ್ಕಳಿಗೆ ಪ್ರೇರಣೆ), ಪ್ರಥಮ್ ಫೌಂಡೇಷನ್ (ಶಿಕ್ಷಣ ಸುಧಾರಣೆ) ಹಾಗೂ ಖಾನ್ ಅಕಾಡೆಮಿಯ (ಕಲಿಕಾ ಸಾಮರ್ಥ್ಯ) ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಜತೆ ಒಪ್ಪಂದಕ್ಕೆ ಸಹಿ ಹಾಕಿದರು.
ಖಾನ್ ಅಕಾಡೆಮಿ ಹೊರತುಪಡಿಸಿ ಉಳಿದ ಮೂರು ಎನ್‌ಜಿಒಗಳ ಜತೆ ಇಲಾಖೆ 2012ರಿಂದಲೇ ಒಪ್ಪಂದ ಮಾಡಿಕೊಂಡಿದ್ದು, ಐದು ವರ್ಷದ ಕರಾರು ಮುಗಿದ ಹಿನ್ನೆಲೆಯಲ್ಲಿ ಹೊಸದಾಗಿ ಸಹಿ ಹಾಕಿದೆ. ರಾಜ್ಯದ ಕೆಲವು ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಪ್ರಾಯೋಗಿಕವಾಗಿ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಈ ಎನ್‌ಜಿಒಗಳು ತಮ್ಮ ಕಾರ್ಯಕ್ರಮದ ಅನುಷ್ಠಾನ ಮಾಡಿವೆ. ಎನ್‌ಜಿಒಗಳ ಪ್ರಯೋಗಿಕ ಕಾರ್ಯಕ್ರಮ ಯಶಸ್ಸು ಕಂಡ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೂ ಈ ಸೌಲಭ್ಯ ವಿಸ್ತರಿಸಲು ಒಪ್ಪಂದ ಮಾಡಿಕೊಂಡಿದೆ. ಖಾನ್ ಅಕಾಡೆಮಿಯಿಂದ ಮಕ್ಕಳಿಗೆ ವಿಡಿಯೋ ಮೂಲಕ ಗಣಿತ ಮತ್ತ ವಿಜ್ಞಾನದ ಇ-ಕಂಟೆಂಟ್ ಒದಗಿಸಲಾಗುತ್ತದೆ.
ಕನ್ನಡದಲ್ಲೂ ಈ ವಿಡಿಯೋ ಒಸಗಿಲು ಒಪ್ಪಿಗೆ ಸೂಚಿಸಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ಸೇಠ್, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹಾಗೂ ಗುಣಮಟ್ಟ ಹೆಚ್ಚಿಸಲು ಒಪ್ಪಂದ ಮಾಡಿಕೊಂಡಿದ್ದೇವೆ. ಕೆಲವೊಂದು ಸರ್ಕಾರಿ ಶಾಲೆಗಳಲ್ಲಿ ಇನ್ನೂ ಶೋಚನೀಯ ಸ್ಥಿತಿ ಇದೆ. ಅಂತಹ ಶಾಲೆಗೆ ಕಲಿಕಾ ಸುಧಾರಣೆಗೆ ಬೇಕಾದ ಸೌಲಭ್ಯ ಕಲ್ಪಿಸುತ್ತಿದ್ದೇವೆ ಎಂದರು.
ಸರ್ಕಾರಿ ಶಾಲಾ ಗುಣಮಟ್ಟ ಸುಧಾರಣೆ ಮಾಡದೇ ಏಕಾಏಕಿ ಫಲಿತಾಂಶ ಹೆಚ್ಚಳದ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಇನ್ನು ಕೂಡ ಸರಿಯಾಗಿ ಪಠ್ಯಪುಸ್ತಕ ಓದಲು ಬಾರದ ವಿದ್ಯಾರ್ಥಿಗಳ ಸಂಖ್ಯೆಯೂ ಇದೆ. ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಿ, ಪರಿಣಾಮಕಾರಿ ಶಿಕ್ಷಣದ ಮೂಲಕ ಕಲಿಕಾ ಗುಣಮಟ್ಟ ಹೆಚ್ಚಿಸಲಿದ್ದೇವೆ ಎಂದು ಹೇಳಿದರು. ಅಜೀಂ ಪ್ರೇಮ್‌ಜೀ ಫೌಂಡೇಷನ್ ಸಿಇಒ ಉಮಾಶಂಕರ್, ಶಿಕ್ಷಣ ಫೌಂಡೇಷನ್ ಸಿಇಒ ಪ್ರಸನ್ನ ಒಡೆಯರ್, ಪ್ರಥಮ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವಯಾನಿ ಹಾಗೂ ಖಾನ್ ಅಕಾಡೆಮಿಯ ಸಿಇಒ ಸಂದೀಪ್ ಬಾಪ್ನಾ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜಯ್ ಸೇಠ್, ಸಾರ್ವ ಜನಿಕ ಶಿಕ್ಷಣ ಇಲಾಖೆ ಆಯುಕ್ತೆ ಸೌಜನ್ಯ, ಸರ್ವಶಿಕ್ಷಾ ಅಭಿಯಾನದ ಯೋಜನಾ ನಿರ್ದೇಶಕ ಜಾಫರ್ ಇತರರಿದ್ದರು.
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹಾಗೂ ಗುಣಮಟ್ಟ ಹೆಚ್ಚಿಸಲು ಒಪ್ಪಂದ ಮಾಡಿಕೊಂಡಿದ್ದೇವೆ. ಕೆಲವೊಂದು ಸರ್ಕಾರಿ ಶಾಲೆಗಳಲ್ಲಿ ಇನ್ನೂ ಶೋಚನೀಯ ಸ್ಥಿತಿ ಇದೆ. ಅಂತಹ ಶಾಲೆಗೆ ಕಲಿಕಾ ಸುಧಾರಣೆಗೆ ಬೇಕಾದ ಸೌಲಭ್ಯ ಕಲ್ಪಿಸುತ್ತಿದ್ದೇವೆ .
ತನ್ವೀರ್ ಸೇಠ್, ಸಚಿವ
ಗ್ರಾಮೀಣ ಪ್ರದೇಶದ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದೇವೆ. ಎಲ್ಲಾ ಬ್ಲಾಕ್‌ಗಳಲ್ಲೂ ಶಿಕ್ಷಕರ ತರಬೇತಿ ಕೇಂದ್ರ ಹೊಂದಿದ್ದೇವೆ.10 ಜಿಲ್ಲೆಗಳಲ್ಲಿ 210 ಪರಿಣಿತರಿಂದ ತರಬೇತಿ ನೀಡುತ್ತೇವೆ. 2012ರಿಂದ ಶಿಕ್ಷಣ ಇಲಾಖೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ.
ಉಮಾಶಂಕರ್, ಅಜೀಂ ಪ್ರೇಮ್ ಜೀ ಫೌಂಡೇಷನ್ ಸಿಇಒ