Advertisement

ಆಸ್ಪತ್ರೆಗೆ ದೇವರ ವಿಗ್ರಹ ತಂದು, ಗೋಳಾಡಿ ಬ್ಯಾಂಡೇಜ್ ಮಾಡಿಸಿದ ಅರ್ಚಕ!

06:28 PM Nov 19, 2021 | Team Udayavani |

ಆಗ್ರಾ: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ಅರ್ಚಕರೊಬ್ಬರು ಶ್ರೀಕೃಷ್ಣನ ವಿಗ್ರಹದ ಮುರಿದ ಕೈಗೆ ಬ್ಯಾಂಡೇಜ್ ಹಾಕುವಂತೆ ಅಳಲು ತೋಡಿಕೊಂಡಾಗ ಅಲ್ಲಿನ ಸಿಬ್ಬಂದಿ ದಿಗ್ಭ್ರಮೆಗೊಂಡಿದ್ದಾರೆ.

Advertisement

ದೇವರ ವಿಗ್ರಹಕ್ಕೆ ಚಿಕಿತ್ಸೆ ನೀಡುವಂತೆ ಒತ್ತಾಯಿಸಿ ಆಸ್ಪತ್ರೆಗೆ ಬಂದ ಅರ್ಚಕನನ್ನು ನೋಡಿದ ಸಿಬ್ಬಂದಿ ಒಮ್ಮೆಲೇ ಏನು ಮಾಡುವುದೆಂದು ತಿಳಿಯದಾಗಿದ್ದಾರೆ.ಬೆಳಿಗ್ಗೆ ಸ್ನಾನ ಮಾಡುವಾಗ ದೇವರ ಕೈ ಆಕಸ್ಮಿಕವಾಗಿ ಮುರಿದಿದೆ ಎಂದು ಅರ್ಚಕ ಹೇಳಿಕೊಂಡಿದ್ದಾರೆ.

ಸ್ವಲ್ಪ ಹಿಂಜರಿಕೆಯ ನಂತರ, ಆಸ್ಪತ್ರೆಯ ಸಿಬ್ಬಂದಿಗಳು ‘ಶ್ರೀ ಕೃಷ್ಣ’ ಎಂಬ ಹೆಸರಿನಲ್ಲಿ ನೋಂದಣಿಯನ್ನು ನಡೆಸಿ ವಿಗ್ರಹದ ತೋಳಿಗೆ ಬ್ಯಾಂಡೇಜ್ ಮಾಡಿದರು.

ಕೃಷ್ಣನ ಬಾಲ್ಯದ ರೂಪವಾದ ‘ಲಡ್ಡು ಗೋಪಾಲ’ ನ ಕೈ ಮುರಿದುಕೊಂಡು ಅಳುತ್ತಿರುವ ಅರ್ಚಕನ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅರ್ಚಕರು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಆಸ್ಪತ್ರೆಗೆ ತಲುಪಿ ಸಿಬ್ಬಂದಿಗಳ ಬಳಿ ವಿಗ್ರಹಕ್ಕೆ ಚಿಕಿತ್ಸೆ ನೀಡುವಂತೆ ಒತ್ತಾಯಿಸಿದರು ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಹೇಳಿಕೊಂಡಿದ್ದಾರೆ.

Advertisement

“ನಾನು ಬೆಳಿಗ್ಗೆ ಪ್ರಾರ್ಥನೆ ಮಾಡಿ ದೇವರ ವಿಗ್ರಹಕ್ಕೆ ಸ್ನಾನ ಮಾಡುವಾಗ, ವಿಗ್ರಹವು ಜಾರಿಬಿದ್ದು ಅದರ ಕೈ ಮುರಿದಿದೆ” ಎಂದು ಅರ್ಚಕ ಲೇಖ್ ಸಿಂಗ್ ಹೇಳಿದ್ದಾರೆ.

ನಾನು ದೇವರೊಂದಿಗೆ ತುಂಬಾ ಭಾವನಾತ್ಮಕವಾಗಿ ಬೆಸೆದಿದ್ದು, ನಾನು ಆಳವಾಗಿ ಯೋಚಿಸಿ, ಹತಾಶೆಯಲ್ಲಿ, ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಹೋದೆ, ”ಎಂದು ಹೇಳಿದ್ದಾರೆ.

ಸಿಂಗ್ ಅವರು ಕಳೆದ 30 ವರ್ಷಗಳಿಂದ ಅರ್ಜುನ್ ನಗರದ ಖೇರಿಯಾ ಮೋಡ್‌ನಲ್ಲಿರುವ ಪತ್ವಾರಿ ದೇವಸ್ಥಾನದಲ್ಲಿ ಅರ್ಚಕರಾಗಿದ್ದಾರೆ.

“ಆಸ್ಪತ್ರೆಯಲ್ಲಿ ನನ್ನ ಮನವಿಯನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ನಾನು ನನ್ನ ದೇವರಿಗಾಗಿ ಅಳಲು ಪ್ರಾರಂಭಿಸಿದೆ, ”ಎಂದು ಅವರು ಹೇಳಿದರು.

ಅರ್ಚಕರ ಜೊತೆಗೆ ಸ್ಥಳೀಯರು ಕೂಡ ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ ಅಶೋಕ್ ಕುಮಾರ್ ಅಗರವಾಲ್ ಅವರು ಪಿಟಿಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿ, ಅರ್ಚಕರೊಬ್ಬರು ಕೈ ಮುರಿದುಕೊಂಡಿರುವ ವಿಗ್ರಹದೊಂದಿಗೆ ಬಂದಿದ್ದಾರೆ ಮತ್ತು ಚಿಕಿತ್ಸೆಗಾಗಿ ಅಳುತ್ತಿದ್ದಾರೆ ಎಂದು ಆಸ್ಪತ್ರೆಯಿಂದ ತಿಳಿಸಲಾಯಿತು.ಅರ್ಚಕರ ಭಾವನೆಗಳನ್ನು ಪರಿಗಣಿಸಿ ವಿಗ್ರಹಕ್ಕೆ ‘ಶ್ರೀ ಕೃಷ್ಣ’ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಂಡಿದ್ದೇವೆ. ಅರ್ಚಕರ ತೃಪ್ತಿಗಾಗಿ ನಾವು ವಿಗ್ರಹಕ್ಕೆ ಬ್ಯಾಂಡೇಜ್ ಮಾಡಿದ್ದೇವೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next