ಚಿಕ್ಕಬಳ್ಳಾಪುರ: ದೇಶದ ಯುವಜನರನ್ನು ನಿರುದ್ಯೋಗದ ಸಮಸ್ಯೆಯಲ್ಲಿ ಸಿಲುಕಿಸುವ ಮತ್ತು ದೇಶದ ಭದ್ರತೆಗೆ ಅಪಾಯಕಾರಿಯಾಗಿರುವ ‘ಅಗ್ನಿಪಥ್’ ಯೋಜನೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೊಳಿಸಿ ವಾಮಾ ಮಾರ್ಗದಲ್ಲಿ ಆರ್‌ಎಸ್‌ಎಸ್ ನವರನ್ನು ಸೇನೆಯಲ್ಲಿ ಸೇರಿಸುವ ಹುನ್ನಾರವನ್ನು ನಡೆಸಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯಲಿ ಗಂಭೀರವಾಗಿ ಆರೋಪಿಸಿದರು.
ತಾಲೂಕಿನ ನಂದಿಕ್ರಾಸ್ ಬಳಿ ಇರುವ ಶ್ರೀ ಕೃಷ್ಣ ಕನ್ವೆನ್ಶನ್ ಹಾಲ್‌ನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ನವಸಂಕಲ್ಪ ಚಿಂತನಾ ಶಿಬಿರದ ಬಳಿಕ ಮಾತನಾಡಿದ ಅವರು, ನೌಕಾಪಡೆ, ವಾಯುಸೇನೆ, ಸೇನೆಯಲ್ಲಿ ಸೇರಿ ಸೇವೆ ಮಾಡುವುದು ಒಂದು ರಾಷ್ಟ್ರಭಕ್ತಿಯ ಸಂಕೇತ ಆದರೇ ಪ್ರಧಾನಿ ನೇತೃತ್ವದ ಕೇಂದ್ರ ಸರ್ಕಾರ ಅಗ್ನಿಪಥ್ ಎಂಬ ಯೋಜನೆಯನ್ನು ಜಾರಿಗೊಳಿಸಿ ಅಗ್ನಿಯಲ್ಲಿ ಕೈಹಾಕುವ ಕೆಲಸವನ್ನು ಮಾಡಿದೆ. ತಕ್ಷಣವೇ ಯೋಜನೆಯನ್ನು ರದ್ದು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಬೇಕು ಎಂದರು.
ದೇಶದಲ್ಲಿ ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವ ಆಸೆಯನ್ನು ತೋರಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಎಲ್ಲಾ ವಾಗ್ಧಾನವನ್ನು ಮರೆತಿದೆ. ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಬದಲು ಕಿತ್ತುಕೊಳ್ಳುವ ಯತ್ನಿಸುತ್ತಿದೆ ಎಂದರು.
ಸೋಲಿನ ಭೀತಿಯಿಂದ ಇಡಿ ದುರ್ಬಳಕೆ: ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇನ್ನೂ ಪೆಟ್ರೋಲ್ -ಡೀಸೆಲ್ ದರಗಳ ಏರಿಕೆಯನ್ನು ಪ್ರಶ್ನಿಸುವ ಹಾಗಿಲ್ಲ. ಎಂಟು ವರ್ಷಗಳ ವೈಫಲ್ಯವನ್ನು ಮುಚ್ಚಿಹಾಕಲು, ಮುಂಬರುವ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳ ಸೋಲಿನ ಭೀತಿಯಿಂದ ಹತಾಶರಾಗಿ ಸಿಬಿಐ-ಇಡಿ ಇಲಾಖೆಗಳನ್ನು ದುರ್ಬಳಕೆ ಮಾಡಿ ಕೊಂಡು ರಾಹುಲ್‌ಗಾಂಧಿ ಸಹಿತ ಕಾಂಗ್ರೆಸ್
ನಾಯಕರಿಗೆ ಕಿರುಕುಳ ನೀಡಿ ಸೇಡಿನ ರಾಜಕಾರಣ ಮಾಡಲು ಹೊರಟಿದೆ ಎಂದು ಆರೋಪಿಸಿದರು.
Related Articles
ದೇಶಭಕ್ತಿಯ ಸಂಕೇತವಾಗಿರುವ ಸೇನೆಯಲ್ಲಿ ಸೇವೆ ಮಾಡಲು ಲಕ್ಷಾಂತರ ಯುವಕರು ಸನ್ನದ್ಧರಾಗಿ ದ್ದಾರೆ. ಕಳೆದ 2-3 ವರ್ಷಗಳಿಂದ ಆರ್ಮಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಇಂತಹ ವೇಳೆ ಪ್ರಧಾನಿ ಅಗ್ನಿಪಥ ಎಂಬ ಯೋಜನೆಯನ್ನು ಜಾರಿಗೆ ತರಲು ಹೊರಟಿರುವುದು ಸೂಕ್ತವಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್‌ನ ಉಸ್ತುವಾರಿ ವಿ.ಎಸ್.ಉಗ್ರಪ್ಪ ಮಾತನಾಡಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮುಂಬರುವ ಜಿಪಂ, ತಾಪಂ ಹಾಗೂ ವಿಧಾನಸಭಾ ಚುನಾವಣೆ ಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲು ನವಸಂಕಲ್ಪ ಚಿಂತನಾ ಶಿಬಿರದಲ್ಲಿ ತೆಗೆದುಕೊಳ್ಳಲಾಗಿದೆ ಎಂದರು. ಗೌರಿಬಿದನೂರು ಶಾಸಕ ಎನ್.ಎನ್.ಶಿವ ಶಂಕರ್‌ರೆಡ್ಡಿ, ವಿಧಾನಪರಿಷತ್ತಿನ ಸದಸ್ಯ ಎಂಎಲ್ ಅನಿಲ್ ಕುಮಾರ್, ಮಾಜಿ ಶಾಸಕ ಎಸ್.ಎಂ.ಮುನಿ ಯಪ್ಪ, ಎನ್.ಸಂಪಂಗಿ, ಮಾಜಿ ಶಾಸಕಿ ಅನು ಸೂಯಮ್ಮ, ಕೆಪಿ ಸಿಸಿ ಪ್ರಧಾನ ಕಾರ್ಯದರ್ಶಿ ಉದಯಶಂಕರ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೇಶವರೆಡ್ಡಿ, ಉಪಾಧ್ಯಕ್ಷ ಬಿ.ಎಸ್.ರಫಿಉಲ್ಲಾ, ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಮಾಜಿ ಅಧ್ಯಕ್ಷ ಯಲುವಹಳ್ಳಿ ರಮೇಶ್, ವಕೀಲ ನಾರಾಯಣಸ್ವಾಮಿ , ಜಿಪಂ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಮಂಚೇನಹಳ್ಳಿ ಪ್ರಕಾಶ್, ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ಶಾಹೀದ್ ಅಬ್ಟಾಸ್, ಮುಖಂಡರಾದ ಅಡಗಲ್ ಶ್ರೀಧರ್,ಕೆಪಿಸಿಸಿ ಸದಸ್ಯ ಮುನೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನ್‌ರೆಡ್ಡಿ, ಸಂತೋಷ ಬೆಳ್ಳೂಟಿ, ಹರ್ಷ ಮೊಯಿಲಿ ಇತರರಿದ್ದರು.
ಪೊಲೀಸ್ ಇಲಾಖೆಯಲ್ಲಿ ಆರೆಸ್ಸೆಸ್ ಸೇರಿಸಲು ಯತ್ನ
ಬಿಜೆಪಿಯ ರೈತ ಮತ್ತು ಜನ ವಿರೋಧಿ ನೀತಿಗಳಿಂದ ಎಲ್ಲರು ರೋಸಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ಪಾಠ ಕಲಿಸಲು ಸರ್ವಸನ್ನದ್ದರಾಗಿದ್ದಾರೆ. ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ ಆರ್‌ಎಸ್ ಎಸ್‌ನವರನ್ನು ಸೇರಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ನಾನು ಧ್ವನಿ ಎತ್ತಿದೆ ಇದೀಗ ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆಯ ಹೆಸರಿನಲ್ಲಿ ಆರ್‌ಎಸ್ ಎಸ್‌ನವರನ್ನು ಸೇನೆಯಲ್ಲಿ ಸೇರಿಸಲು ಹರಸಾಹಸ ಮಾಡುತ್ತಿದೆ ಎಂದು ಮಾಜಿ ಗೃಹ ಸಚಿವ
ರಾಮಲಿಂಗಾರೆಡ್ಡಿ ಟೀಕಿಸಿದರು.
ಜನರಲ್ಲಿ ಜಾಗೃತಿ ಮೂಡಿಸಲು ಅಭಿಯಾನ
ಈಗಾಗಲೇ ಪ್ರಧಾನಮಂತ್ರಿ ಇಡಿಯನ್ನು ದುರ್ಬಳಕೆ ಮಾಡಿಕೊಂಡು ರಾಹುಲ್‌ಗಾಂಧಿ ಅವರಿಗೆ ಕಿರುಕುಳ ನೀಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಇಂತಹ ಗೊಡ್ಡು ಬೆದರಿಕೆಗಳಿಗೆ ಬಗ್ಗುವುದಿಲ್ಲ ನ್ಯಾಯಕ್ಕಾಗಿ ಜನರ ಬಳಿ ತೆರಳುತ್ತೇವೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತ ಮತ್ತು ಆಡಳಿತ ವೈಫಲ್ಯಗಳ ಕುರಿತು ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಅಭಿಯಾನವನ್ನು ನಡೆಸುತ್ತೇವೆ ಎಂದರು.