Advertisement

ಅಗ್ನಿಪಥ ಗಲಾಟೆ ;ಕಾಂಗ್ರೆಸ್‌ ಬೆಂಕಿಗೆ ತುಪ್ಪ ಸುರಿಯುತ್ತಿದೆ; ಬಸವರಾಜ ಬೊಮ್ಮಾಯಿ

11:33 AM Jun 20, 2022 | Team Udayavani |

ಬೆಂಗಳೂರು: ಕಾಂಗ್ರೆಸ್‌ ಬೆಂಕಿಗೆ ತುಪ್ಪ ಹಾಕುವ ಕೆಲಸವನ್ನು ಇಡೀ ದೇಶದಲ್ಲಿ ಮಾಡುತ್ತಿದೆ ಎನ್ನುವುದಕ್ಕೆ ಖಾನಾಪುರ ಶಾಸಕರು ಧರಣಿ ಮಾಡುತ್ತಿರುವುದು ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಭಾನುವಾರ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಗ್ನಿಪಥ್‌ ವಿನೂತನ ಕಾರ್ಯಕ್ರಮ. ಇಡೀ ಜಗತ್ತಿನಲ್ಲಿ ಯುವಕರಿಗೆ ಮಿಲಿಟರಿ ತರಬೇತಿ ನೀಡುವ ವ್ಯವಸ್ಥೆ ಇದೆ. 17-21 ವರ್ಷ ಉತ್ತಮ ತರಬೇತಿ ಪಡೆದರೆ, ಬೇರೆ ಅವಕಾಶಗಳು ಸಿಗುತ್ತವೆ. ಮಿಲಿಟರಿ ಹಾಗೂ ಅರೆಮಿಲಿಟರಿ ಪಡೆಗಳಲ್ಲಿ ಅವಕಾಶ ಸಿಗಲಿದೆ.

ಸಶಸ್ತ್ರ ಪಡೆಗಳಲ್ಲಿ ಯುವಶಕ್ತಿಯನ್ನು ತುಂಬುವ ಮಹತ್ವಾಕಾಂಕ್ಷೆ ಇದೆ. ಪರೀಕ್ಷೆ ಬರೆದವರಿಗೆ ಆತಂಕ ಇದೆ. ಅದನ್ನು ಕೇಂದ್ರ ಸರ್ಕಾರ ಗಮನಿಸಿ ಪರಿಹಾರ ನೀಡುವ ವಿಶ್ವಾಸವಿದೆ. ಆದರೆ, ಈ ನೆಪದಲ್ಲಿ ರೈಲುಗಳಿಗೆ ಬೆಂಕಿ ಹಚ್ಚುವುದು ಕ್ಷಮಿಸಲಾಗದ ಅಪರಾಧ. ಪ್ರಯಾಣಿಕರಿಗೆ ತೊಂದರೆ, ಆಸ್ತಿಪಾಸ್ತಿ ನಷ್ಟವಾಗಿದೆ. ಜವಾಬ್ದಾರಿ ಇರುವವರು ಯಾರೂ ಈ ರೀತಿ ಮಾಡುವುದಿಲ್ಲ. ಇದೊಂದು ರಾಜಕೀಯ ಪ್ರೇರಿತ ಕೃತ್ಯ ಎಂದರು.

ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸ್ವಾಮೀಜಿಗಳು ನೀಡಿರುವ ಮನವಿಯನ್ನು ತರಿಸಿಕೊಂಡು ಏನೆಲ್ಲಾ ಬದಲಾವಣೆ ಮಾಡಬೇಕೋ ಅದನ್ನು ಮುಕ್ತ ಮನಸ್ಸಿನಿಂದ ಕೈಗೊಳ್ಳಲಾಗುವುದು. ಇದನ್ನು ಪ್ರತಿಷ್ಠೆ ಎಂದು ಪರಿಗಣಿಸಿಲ್ಲ. ಪಠ್ಯದ ಕುರಿತು ಆಕ್ಷೇಪವಿದ್ದರೆ, ಅದನ್ನು ನಿವಾರಿಸಲು ಸಿದ್ಧರಿದ್ದೇವೆ ಎಂದರು.

ಅಗ್ನಿಪಥ ವಿರುದ್ಧ ಸಮಾಜ ವಿದ್ರೋಹಿಗಳ ಕೈವಾಡ
ಹುಬ್ಬಳ್ಳಿ: ಅಗ್ನಿಪಥ ಯೋಜನೆ ವಿರುದ್ಧ ಸಮಾಜ ವಿದ್ರೋಹಿ ಶಕ್ತಿಗಳು ಕೆಲಸ ಮಾಡುತ್ತಿದ್ದು, ಆಯಾ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಅಗ್ನಿಪಥ ತುಂಬಾ ಉತ್ತಮ ಯೋಜನೆ. ಸೈನ್ಯಕ್ಕೆ ಸೇರ ಬಯಸುವವರಿಗೆ ಇದೊಂದು ಸುವರ್ಣಾವಕಾಶ.

Advertisement

ಆದರೆ ಈ ವಿಚಾರದಲ್ಲಿ ಕೆಲವು ವಿನಾಶಕಾರಿ ಶಕ್ತಿಗಳು ದೇಶದಲ್ಲಿ ಗಲಭೆ ಸೃಷ್ಟಿಸುವ ಕೆಲಸಕ್ಕೆ ಮುಂದಾಗಿವೆ. ದೇಶದ ರಕ್ಷಣೆಗೆ ಹೋಗುವವರು ದೇಶದ ಸಂಪತ್ತಿಗೆ ಹಾನಿ ಮಾಡುತ್ತಾರೆಯೇ? ಬಸ್‌-ರೈಲು ಹಾಗೂ ಮಕ್ಕಳಿರುವ ವಾಹನಕ್ಕೆ ಕಲ್ಲು ಹೊಡೆಯುತ್ತಾರೆ, ಬೆಂಕಿ ಹಚ್ಚುತ್ತಾರೆ ಎಂದರೆ ಇದೆಂತಹ ಪ್ರತಿಭಟನೆ? ಅಗ್ನಿಪಥ ಯೋಜನೆ ಕುರಿತು ಕೆಲವರು ತಪ್ಪು ತಿಳಿವಳಿಕೆ ಹೊಂದಿದ್ದು, ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದರು. ಶೇ.90ಕ್ಕೂ ಹೆಚ್ಚು ಹಾಲಿ ಹಾಗೂ ಮಾಜಿ ಸೈನ್ಯದ ಅಧಿಕಾರಿಗಳು, ತಜ್ಞರು ಇದಕ್ಕೆ ಬೆಂಬಲ ನೀಡಿದ್ದಾರೆ. ಪ್ರಯೋಗ ಮಾಡಲೇಬಾರದು ಎನ್ನುವ ಅರಾಜಕತೆ ನಿರ್ಮಿಸಲಾಗುತ್ತಿದೆ. ಯೋಜನೆ ಬಗ್ಗೆ ಗೊಂದಲಗಳಿದ್ದರೆ ಸಂಬಂಧಿಸಿದವರೊಂದಿಗೆ ಚರ್ಚಿಸಬೇಕು. ಈ ರೀತಿ ಹಿಂಸಾಚಾರ ಮಾಡುವುದು ಸರಿಯಲ್ಲ ಎಂದರು.

ದೇಶದಲ್ಲಿ ಕಾಂಗ್ರೆಸ್‌ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ಕೇವಲ 2-3 ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ. ಅದಕ್ಕಾಗಿ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಹೀಗಾಗಿ ಗೊಂದಲ ನಿರ್ಮಾಣ ಮಾಡುತ್ತಿದ್ದು ದೇಶ ವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದೆ.
●ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ಅಗ್ನಿಪಥ ಗಲಾಟೆ ಹಿಂದೆ ಕಾಂಗ್ರೆಸ್‌ ಪಕ್ಷದ ಕೈವಾಡವಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ದೇಶ ಭಕ್ತರು ದೇಶ ಕಾಯೋದಕ್ಕೆ ಹೋಗುತ್ತಾರೆ. ಬೆಂಕಿ ಹಚ್ಚುವ ಕೆಲಸ ಮಾಡಬಾರದು.
●ಆರಗ ಜ್ಞಾನೇಂದ್ರ, ಗೃಹ ಸಚಿವ

ಸೈನ್ಯಕ್ಕೆ ಸೇರಿ ದೇಶ ರಕ್ಷಣೆ ಮಾಡುವವರು ರೈಲುಗಳಿಗೆ ಬೆಂಕಿ ಇಡುವುದಿಲ್ಲ. ದೇಶಪ್ರೇಮಕ್ಕಾಗಿ ಸೇನೆಗೆ ಸೇರುವವರು ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡುವುದಿಲ್ಲ. ಯುವಕರು ಕುತಂತ್ರಕ್ಕೆ ಬಲಿಯಾಗಬಾರದು. ಇದೆಲ್ಲವೂ ಕಿಡಿಗೇಡಿಗಳ ಕುತಂತ್ರವಾಗಿದೆ.
●ಬಿ.ಸಿ.ಪಾಟೀಲ, ಸಚಿವ

ಅಗ್ನಿಪಥ ಯೋಜನೆ ಜಾರಿಯಿಂದ ಕಾಂಗ್ರೆಸ್‌ಗೆ ಏಕೆ ಉರಿ ಬಿದ್ದಿದೆ ತಿಳಿಯುತ್ತಿಲ್ಲ. ಅಗ್ನಿಪಥ ಹೋರಾಟದ ಹಿಂದೆ ಕಾಂಗ್ರೆಸ್‌ ಕೈವಾಡವಿದೆ. ಅಗ್ನಿಪಥ ಯೋಜನೆಯಲ್ಲಿ ಪ್ರಧಾನಿ ಮೋದಿ ತೆಗೆದುಕೊಂಡ ನಿರ್ಧಾರಕ್ಕೆ ಬಿಜೆಪಿ ಬದ್ಧವಾಗಿದೆ.ಯೋಜನೆಯ ಹಿನ್ನಡೆಗೆ ಹುನ್ನಾರ ನಡೆದಿದೆ.

●ಬಿ.ಶ್ರೀರಾಮುಲು, ಸಚಿವ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next