Advertisement

ಕಲಿಯುವ ಮನಸ್ಸಿದ್ದರೆ ವಯಸ್ಸು ತಡೆಯದು

12:09 AM Jul 03, 2019 | sudhir |

ಕಾಸರಗೋಡು: ಅರುವತ್ತೂಂದನೆಯ ವಯೋಮಾನದಲ್ಲೂ ಅರಿವು ಮತ್ತು ಸಾಹಿತ್ಯದ ಅನಂತತೆಯನ್ನು ಮನನ ಮಾಡಿಕೊಳ್ಳುವ ಯತ್ನದಲ್ಲಿ ಅಬ್ದುಲ್ಲ ಮೌಲವಿ ಅವರು ಇತರರಿಗೆ ಮಾದರಿಯಾಗಿದ್ದಾರೆ.

Advertisement

ವಾಚನ ಪಕ್ಷಾಚರಣೆ ಅಂಗವಾಗಿ ಜಿಲ್ಲಾ ಸಾಕ್ಷರತಾ ಮಿಷನ್‌ ಮತ್ತು ಜಿಲ್ಲಾ ವಾರ್ತಾ ಇಲಾಖೆ ಜಂಟಿಯಾಗಿ ಜಿಲ್ಲಾ ಪಂಚಾಯತ್‌ ಅನೆಕ್ಸ್‌ ಸಭಾಂಗಣದಲ್ಲಿ ಸೋಮವಾರ ನಡೆಸಿದ ಸಾಹಿತ್ಯ ಕೃತಿಗಳ (ಕತೆ, ಕವನ, ಪುಸ್ತಕ ವಾಚನ) ರಚನೆ ಸ್ಪರ್ಧೆ ಯಲ್ಲಿ ಅಬ್ದುಲ್ಲ ಮೌಲವಿ ಎಲ್ಲರ ಕುತೂಹಲಕ್ಕೆ ಪಾತ್ರರಾಗಿದ್ದರು.

ಅವರು ಸಾಕ್ಷರತಾ ಮಿಷನ್‌ ನಡೆಸುತ್ತಿರುವ ಹತ್ತನೇ ತರಗತಿ ತತ್ಸಮಾನ ಕಲಿಕೆಯ ವಿದ್ಯಾರ್ಥಿ. ವಯೋಮಾನದ ಅಶಕ್ತಿಯನ್ನು ಕಡೆಗಣಿಸಿ ಪುಟ್ಟ ಮಕ್ಕಳಂತೆ ಸ್ಪರ್ಧೆಗಳಲ್ಲಿ ಭಾಗಿಯಾದ ಮೌಲವಿ ಅವರು ಸಹಜವಾಗಿಯೇ ಕುತೂಹಲಕ್ಕೆ ಕಾರಣರಾಗಿದ್ದರು.

ಹಿಂದೆಯೂ ಸ್ಥಳೀಯ ಮಟ್ಟದಲ್ಲಿ ನಡೆಯುತ್ತಿದ್ದ ಕತೆ, ಕವನ ರಚನೆ ಸ್ಪರ್ಧೆಗಳಲ್ಲಿ ಅವರು ಭಾಗವಹಿಸಿ ಬಹುಮಾನ ಗೆದ್ದಿದ್ದಾರೆ.

ಅಜಾನೂರು ಗ್ರಾಮ ಪಂಚಾಯತ್‌ ನಿವಾಸಿ ಅಬ್ದುಲ್ಲ ಮೌಲವಿ ಬಾಲ್ಯದಿಂದಲೇ ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದವರು. ಆದರೆ ತಂದೆಯವರ ಅಕಾಲಿಕ ನಿಧನ ಅವರ ಕಲಿಕೆಯ ಕನಸಿಗೆ ತಣ್ಣೀರೆರಚಿತ್ತು. ಅನಂತರ ಬದುಕಿಗಾಗಿ ಯಾತ್ರೆಗಳನ್ನು ನಡೆಸಬೇಕಾಗಿ ಬಂದುದು ಶಾಲಾ ಕಲಿಕೆಯ ಆಗ್ರಹಕ್ಕೆ ವಿಳಂಬ ತಂದಿತ್ತು. ಜೊತೆಗೆ ಮತೀಯ ಕಲಿಕೆಯನ್ನು ನಡೆಸಿದ್ದರು. ಸಾಕ್ಷರತಾ ಮಿಷನ್‌ ಮೂಲಕ ನಡೆಸಲಾಗುವ ತತ್ಸಮಾನ ತರಗತಿಗಳು ಅವರಲ್ಲಿ ಕಲಿಕೆಯ ಬಗೆಗಿನ ಆಸಕ್ತಿಯನ್ನು ಮತ್ತೆ ಕೆರಳುವಂತೆ ಮಾಡಿದೆ.

Advertisement

ಕಾಸರಗೋಡಿನ ನೆಲ್ಲಿಕುಂಜೆ ಮದ್ರಸಾದಲ್ಲಿ ಶಿಕ್ಷಕರಾಗಿ ಅವರು ಕಾಯಕ ನಡೆಸುತ್ತಿದ್ದಾರೆ. ಪತ್ನಿ ಹೈರುನ್ನೀಸಾ ಮತ್ತು 7 ಮಂದಿ ಮಕ್ಕಳು ಇವರ ಕಲಿಕೆಯ ಆಸಕ್ತಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಸಾಕ್ಷರತಾ ಮಿಷನ್‌ ಮೂಲಕ ನಡೆಯುತ್ತಿರುವ ತತ್ಸಮಾನ ಶಿಕ್ಷಣ ಸಾಧಾರಣ ವ್ಯಕ್ತಿಯೊಬ್ಬನ ಬದುಕಿನಲ್ಲಿ ಅರ್ಧದಲ್ಲಿ ಮೊಟಕುಗೊಂಡ ನಿರೀಕ್ಷೆಯನ್ನು ಮರಳಿ ತಂದುಕೊಡುವ ಬಲುದೊಡ್ಡ ಸಹಾಯ ಹಸ್ತವಾಗಿದೆ ಎಂದು ಅಬ್ದುಲ್ಲ ಮೌಲವಿ ಅವರು ಸಂತೃಪ್ತಿಯಿಂದ ಅಭಿಪ್ರಾಯಪಡುತ್ತಾರೆ.

ಕಲಿಯುವ ಮನಸ್ಸಿದ್ದರೆ ವಯಸ್ಸು ಸಹಿತ ವಿಚಾರಗಳು ಒಂದು ತಡೆಯೇ ಅಲ್ಲ ಎಂಬುದು ಅವರ ಖಚಿತ ನಿಲುವು.

Advertisement

Udayavani is now on Telegram. Click here to join our channel and stay updated with the latest news.

Next