Advertisement

Agarbatti business: ಹೂವಿನ ತ್ಯಾಜ್ಯ ಈಗ “ಪರಿಮಳ ಬೀರುವ ಅಗರಬತ್ತಿ

11:06 AM Nov 29, 2023 | Team Udayavani |

ಬೆಂಗಳೂರು: ಹೂವಿನ ತ್ಯಾಜ್ಯದಲ್ಲಿ ಪರಿಮಳ ಬೀರುವ ಅಗರಬತ್ತಿ ತಯಾರಿಸುವ ಮೂಲಕ ಬೆಳಗಾವಿ ನಗರ ಪಾಲಿಕೆ ಬಿಬಿಎಂಸಿ ಸೇರಿದಂತೆ ಇತರೆ ನಗರ ಸ್ಥಳೀಯ ಸಂಸ್ಥೆಗಳಿಗೆ ಮಾದರಿ ಆಗಿದೆ.

Advertisement

ನಗರಾಭಿವೃದ್ಧಿ ಇಲಾಖೆ ಅರಮನೆ ಮೈದಾನ ದಲ್ಲಿ ಆರಂಭಿಸಿರುವ ಮೂರು ದಿನಗಳ “ಮುನಿಸಿ ಪಾಲಿಕಾ-2023′ ಪ್ರದರ್ಶನ ಮೇಳದಲ್ಲಿ ಹೂವಿನ ತ್ಯಾಜ್ಯದಿಂದ ತಯಾರಿಸಿದ್ದ ಸುವಾಸನೆ ಭರಿತ ಅಗರಬತ್ತಿಗಳು ಗಮನ ಸೆಳೆಯುತ್ತಿವೆ. ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರ ಜೊತೆ ತಯಾರಿಸುತ್ತಿರುವ ಈ ಅಗರಬತ್ತಿಗಳು ಸಾರ್ವಜನಿಕರ ಮೆಚ್ಚುಗೆ ಪಡೆದಿವೆ.

ಬೆಂಗಳೂರು ಸೇರಿ ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಹೂ ಮಾರುಕಟ್ಟೆಗಳಲ್ಲಿ ಪ್ರತಿದಿನ ನೂರಾರು ಕೆ.ಜಿ. ಹೂವಿನ ತ್ಯಾಜ್ಯ ಸಂಗ್ರಹವಾಗುತ್ತದೆ. ಅದೆಲ್ಲ ಈಗ ಗೊಬ್ಬರ ಆಗುತ್ತಿದೆ. ಇದನ್ನು ಮನಗಂಡ ಬೆಳಗಾವಿ ಪಾಲಿಕೆ ಪರಿಸರ ಎಂಜಿನಿಯರ್‌ ಹನುಮಂತ್‌ ಕಲಾದಗಿ ಅವರ ಮುಂದಾಲೋಚನೆ ಫ‌ಲವಾಗಿ ನಿತ್ಯ 500 ಕೆ.ಜಿ. ಹೂವಿನ ತ್ಯಾಜ್ಯ ಅಗರಬತ್ತಿಗೆ ಬಳಕೆಯಾಗುತ್ತಿದೆ.

ದಿನಕ್ಕೆ 500 ಕೆ.ಜಿ. ತ್ಯಾಜ್ಯ ಉತ್ಪತ್ತಿ: ಬೆಳಗಾವಿ ಅಶೋಕ ನಗರದಲ್ಲಿರುವ ಸಗಟು ಹೂವಿನ ಮಾರುಕಟ್ಟೆ ಒಂದರಿಂದಲೇ ದಿನಕ್ಕೆ 500 ಕೆ.ಜಿ.ಗೂ ಹೆಚ್ಚು ಹೂವಿನ ತ್ಯಾಜ್ಯ ಉತ್ಪತ್ತಿ ಆಗುತ್ತದೆ. ಅದನ್ನು ಅದೇ ಸ್ಥಳದಲ್ಲಿ ಒಣಗಿಸಿ ಪುಡಿ ಮಾಡಲಾಗುತ್ತದೆ. ನಂತರ, ಇತರೆ ಪದಾರ್ಥ ಸೇರಿಸಿ ಅಗರಬತ್ತಿ ತಯಾರಿಕೆಗೆ ಬಳಸಲಾಗುತ್ತಿದೆ ಎಂದು ಪಾಲಿಕೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಮೊದಲು ಐದು ಕೆ.ಜಿ. ಹೂವು ಒಣಗಿಸಿ ಕೆಮಿಕಲ್‌ ಬಳಸಿ ಅಗರಬತ್ತಿ ತಯಾರಿಸಿದೆ: ನಾನು ಮೂಲತಃ ಕೆಮಿಕಲ್‌ ಎಂಜಿನಿಯರ್‌. ಮಾರುಕಟ್ಟೆಯಲ್ಲಿ ಪ್ರತಿ ದಿನ ಸಾವಿರಾರು ಕೆ.ಜಿ. ಹೂವಿನ ತ್ಯಾಜ್ಯ ಹಾಳಾಗುತ್ತಿರುವುದನ್ನು ಕಂಡು, ಅದರಲ್ಲಿ 5 ಕೆ.ಜಿ. ಹೂ ಒಣಗಿಸಿ ಪರಿಮಳ ಭರಿತ ಪುಡಿ ತಯಾರಿಸಿದೆ. ನಂತರ ನಾನೇ ಕೆಲವು ಕೆಮಿಕಲ್‌ಗ‌ಳನ್ನು ಬಳಸಿ ಅಗರಬತ್ತಿ ತಯಾರಿಸಿದೆ. ಪ್ರಾಯೋಗಿಕವಾಗಿ ಯಶಸ್ವಿ ಪಡೆದೆ ಎಂದು ಬೆಳಗಾವಿ ಮಹಾನಗರ ಪಾಲಿಕೆ ಪರಿಸರ ಎಂಜಿನಿಯರ್‌ ಹನುಮಂತ್‌ ಕಲಾದಗಿ ಹೇಳಿದರು.

Advertisement

ಎರಡು ಯಂತ್ರಗಳು ಮತ್ತು ಶೆಡ್‌ ಸೇರಿ 1.5 ಲಕ್ಷ ರೂ. ಖರ್ಚಾಯಿತು. ಈ ಯಶಸ್ಸಿನ ಬಳಿಕ ಹೂ ಒಣಗಿಸಿ ಪುಡಿ ಮಾಡುವ ಪ್ರಕ್ರಿಯೆಯನ್ನು ಈಗ ಸ್ಥಳೀಯ ಸ್ತ್ರೀಶಕ್ತಿ ಸಂಘಕ್ಕೆ ವಹಿಸಲಾಗಿದೆ. ಪ್ರತಿನಿತ್ಯ 300 ರಿಂದ 500 ಕೆ.ಜಿ. ಹೂವಿನ ತ್ಯಾಜ್ಯ ಸಂಗ್ರಹವಾಗುತ್ತಿದೆ. 50 ಕೆ.ಜಿ. ಹೂವಿನ ಪುಡಿ ತಯಾರು ಮಾಡಲಾಗುತ್ತಿದೆ. ಇದರಿಂದಾಗಿ ಅಲ್ಲಿ ಕೆಲಸ ಮಾಡುತ್ತಿರುವ ನಾಲ್ಕೈದು ಮಹಿಳೆಯರು ತಿಂಗಳಿಗೆ 10 ರಿಂದ 15 ಸಾವಿರ ರೂ. ಗಳಿಸುತ್ತಿದ್ದಾರೆ. ಈಗಾಗಲೇ ಹುಬ್ಬಳ್ಳಿ ಮೂಲದ ಖಾಸಗಿ ಅಗರಬತ್ತಿ ಸಂಸ್ಥೆ ಹೂವಿನ ಪುಡಿ ಖರೀದಿಸುತ್ತಿದೆ. ಹಲವು ಅಗರಬತ್ತಿ ಸಂಸ್ಥೆಗಳು ಕೂಡ ಒಣ ಹೂವಿನ ಪುಡಿ ಖರೀದಿಗೆ ಮುಂದೆ ಬಂದಿವೆ ಎಂದು ತಿಳಿಸಿದರು.

ಯಲ್ಲಮ್ಮ ದೇಗುಲ ಆವರಣದಲ್ಲಿ ಘಟಕ: ಈ ಯೋಜನೆ ಅನುಷ್ಠಾನಗೊಳಿಸಿದ ನಂತರ ಹಲವು ದೇಗುಲದ ಅಧಿಕಾರಿಗಳು ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ. ಸವದತ್ತಿಯ ಯಲ್ಲಮ್ಮ ದೇವಸ್ಥಾನದ ಅಧಿಕಾರಿಗಳೂ ಸಂಪರ್ಕಿಸಿದ್ದಾರೆ. ಸವದತ್ತಿ ದೇವಸ್ಥಾನದಲ್ಲಿ ಟನ್‌ಗಟ್ಟಲೆ ಹೂವಿನ ತ್ಯಾಜ್ಯ ಉತ್ಪತ್ತಿ ಆಗುತ್ತಿದೆ. ಅಲ್ಲಿ ಘಟಕ ನಿರ್ಮಿಸಿ, ಮಂಡಳಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಬೆಳಗಾವಿ ಪಾಲಿಕೆಯ ಪರಿಸರ ಅಭಿಯಾಂತರ ಅದಿಲ್‌ ಖಾನ್‌ ಹೇಳುತ್ತಾರೆ.

-ದೇವೇಶ ಸೂರಗುಪ್ಪ

 

Advertisement

Udayavani is now on Telegram. Click here to join our channel and stay updated with the latest news.

Next