Advertisement

ಮತ್ತೆ ವೆನಿಲ್ಲಾದತ್ತ ರೈತನ ಚಿತ್ತ

01:49 PM Jul 31, 2017 | Team Udayavani |

ಶೃಂಗೇರಿ: ರೈತರಿಗೆ ಉಪ ಬೆಳೆಯಾಗಿ ಪರಿಚಯವಾದ ವೆನಿಲ್ಲಾ ಬೆಳೆಗೆ 2004 ರಲ್ಲಿ ನಿರೀಕ್ಷೆಗೂ ಮೀರಿ ಬೆಲೆ ಬಂದಿತ್ತು. ಇದರಿಂದಾಗಿ ರೈತರು ಈ ಬೆಳೆಯತ್ತ ಆಕರ್ಷಿತರಾಗಿದ್ದರು. ಆದರೆ ನಂತರ ಬೆಲೆ ಕುಸಿದಿದ್ದರಿಂದ ರೈತರು ಈ ಬೆಳೆಯಿಂದ ವಿಮುಖರಾಗಿದ್ದರು. ಆದರೆ ಈಗ ಮತ್ತೆ ವೆನಿಲ್ಲಾ ಧಾರಣೆ ಏರುಮುಖದಲ್ಲಿದ್ದು, ರೈತರು ಮತ್ತೆ ಈ ಬೆಳೆಯತ್ತ ಆಕರ್ಷಿತರಾಗುತ್ತಿದ್ದಾರೆ.

Advertisement

ಕಳೆದ ಎರಡು ವರ್ಷದಿಂದಲೇ ವೆನಿಲ್ಲಾದ ಬೆಲೆ ಏರಿಕೆ ಕಾಣುತ್ತಿದ್ದು, ಪ್ರಸ್ತುತ ಮಲೆನಾಡಿನಲ್ಲಿ ಬೆಳೆ ಬಹುತೇಕ ನಾಶವಾಗಿದೆ. ಸೊರಗು ರೋಗ ಈ ಬೆಳೆಗೆ ಮಾರಕವಾಗಿದ್ದು, ತೋಟದಲ್ಲಿದ್ದ ಬಳ್ಳಿಗಳು ಈ ರೋಗಕ್ಕೆ ತುತ್ತಾಗಿ ನಾಟಿ ಮಾಡಲು ಬಳ್ಳಿ ದೊರಕದ ಸ್ಥಿತಿ ನಿರ್ಮಾಣವಾಗಿದೆ.ಆಧುನಿಕ
ಕೃಷಿ ಪದ್ಧತಿಯಲ್ಲಿ ಅಂಗಾಂಶ ಪದ್ದತಿಯಲ್ಲಿ ಸಿದ್ದಪಡಿಸಿದ ಗಿಡಗಳನ್ನು ಈಗ ಮತ್ತೆ ಮರು ನಾಟಿಗೆ ರೈತರು ಒಲವು ತೋರುತ್ತಿದ್ದಾರೆ. ಇದೀಗ ಸೊರಗು ರೋಗವನ್ನು ತಡೆಗಟ್ಟಲು ರೈತರು ಪ್ರಯತ್ನಿಸಿದ್ದು, ತಜ್ಞರ ಸಲಹೆಯಂತೆ ಪ್ಲಾಸ್ಟಿಕ್‌ ಕವರ್‌ನಲ್ಲಿ ಬೆಳೆಸಿದ ಬಳ್ಳಿಯನ್ನು ಮರಕ್ಕೆ ಹಬ್ಬಿಸಲಾಗುತ್ತಿದೆ. ಆರ್ಕಿಡ್‌ ಜಾತಿಯ ಸಸ್ಯವಾಗಿದ್ದರಿಂದ ವೆನಿಲ್ಲಾ ಮಣ್ಣಿನಿಂದ ಆಹಾರ ಪಡೆಯದೆ,ಆಶ್ರಯ ಪಡೆದ ಮರದಿಂದ ಆಹಾರ ಪಡೆಯುತ್ತದೆ. ಪ್ಲಾಸ್ಟಿಕ್‌ ಕವರ್‌ನಲ್ಲಿ ಬಳ್ಳಿಗೆ ತೆಂಗಿನ ನಾರು,ಮರದ ಹೊಟ್ಟು ಬಳಸಿ ಗಿಡವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 

ಬಳ್ಳಿಯನ್ನು ಮಣ್ಣಿಗೆ ತಾಗದಂತೆ ಜಾಗ್ರತೆ ಮಾಡಿದರೆ ಸೊರಗು ರೋಗದಿಂದ ಮುಕ್ತವಾಗಿಸಬಹುದೆಂದು ತಜ್ಞರ ಅಭಿಪ್ರಾಯವಾಗಿದೆ. ಅಂಗಾಂಶ ಕೃಷಿ ಪದ್ಧತಿ ಮೂಲಕ ಅಭಿವೃದ್ಧಿಪಡಿಸಿದ ಗಿಡಗಳನ್ನು ನೆಡುವುದಕ್ಕೆ ಬಳಸಬಹುದಾಗಿದೆ. ಬಳ್ಳಿಯಿಂದಲೂ ಗಿಡಗಳನ್ನು ಅಭಿವೃಸದ್ಧಿ ಪಡಿಸಬಹುದಾದರೂ, ತಾಲೂಕಿನಲ್ಲಿ ಬಳ್ಳಿಯ ಕೊರತೆ ಇದೆ. ಭಾರತದ ವೆನಿಲ್ಲಾಕ್ಕೆ ಯುರೋಪ್‌ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ.ವೆನಿಲ್ಲಾ ಬೆಳೆಯುವ ದೇಶ ಮಡಗಾಸ್ಕರ್‌ನಲ್ಲಿ ಬೆಳೆ ನಾಶವಾಗಿರುವುದು ಮತ್ತೆ ವೆನಿಲ್ಲಾಕ್ಕೆ ಬೇಡಿಕೆ ಪಡೆದುಕೊಂಡಿದೆ. ಕಳೆದ ವರ್ಷ ವೆನಿಲ್ಲಾ ಹಸಿ ಬೀನ್ಸ್‌ಗೆ 3 ರಿಂದ 4 ಸಾವಿರವಿತ್ತು.ಒಣ ಬೀನ್ಸ್‌ಗೆ ಇಪ್ಪತ್ತು ಸಾವಿರ ಬೆಲೆ ಇದ್ದು, ಬೆಲೆ ಮತ್ತೆ ಏರಿಕೆ ಕಾಣುವ ನಿರೀಕ್ಷೆ ಇದೆ. ತಾಲೂಕಿನಲ್ಲಿ ಅಡಕೆಗೆ ಬಂದಿರುವ ರೋಗಗಳಿಂದ ಪರ್ಯಾಯ ಬೆಳೆಗಳತ್ತ ಮನಸ್ಸು ಮಾಡಿರುವ ರೈತರಿಗೆ ಮತ್ತೆ ವೆನಿಲ್ಲಾ ಆಶಾಕಿರಣವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಬೆಳೆಗೆ ತಗುಲುವ ಸೊರಗು ರೋಗ ಮತ್ತಿತರ ರೋಗಗಳಿಂದ ಮುಕ್ತವಾದರೆ ಬೆಳೆ ರೈತರ ಪಾಲಿಗೆ ಮತ್ತೆ ವರದಾನವಾಗಲಿದೆ. 

ಈ ಹಿಂದೆ ನಮ್ಮ ತೋಟದಲ್ಲಿ ಸಾಕಷ್ಟು ವೆನಿಲ್ಲಾ ಬೆಳೆದಿದ್ದು,ಆದರೆ ಸೊರಗು ರೋಗದಿಂದ ಬೆಳೆ ಸಂಪೂರ್ಣ ನಾಶವಾಗಿತ್ತು. ಆದರೆ ಈಗ ಅಂಗಾಂಶ ಕೃಷಿಯಿಂದ ಅಭಿವೃದ್ಧಿಪಡಿಸಿದ ಗಿಡಗಳನ್ನು ಮರು ನಾಟಿ ಮಾಡಲಾಗುತ್ತಿದೆ. ಪ್ಲಾಸ್ಟಿಕ್‌ ಕವರ್‌ನಲ್ಲಿ ಬೆಳಸಿದ ಬಳ್ಳಿಗಳನ್ನು ಮಣ್ಣಿಗೆ ತಾಗದಂತೆ ನೆಡಲಾಗಿದ್ದು, ಇದರಿಂದ ಸೊರಗು ರೋಗ ತಡೆಗಟ್ಟಬಹುದೆಂದು ನಿರೀಕ್ಷಿಸಲಾಗಿದೆ.ಆಸಕ್ತ ರೈತರಿಗೆ ಮಾಹಿತಿ ಹಾಗೂ ಗಿಡಗಳನ್ನು ಒದಗಿಸಲಾಗುತ್ತದೆ. 
ಕೆರೆಮನೆ ಭರತ್‌ರಾಜ್‌, ಶೃಂಗೇರಿ,(9448694288)

ಸಾವಯವ ಕೃಷಿ ಮೂಲಕ ವೆನಿಲ್ಲಾ ಬೆಳೆಯಬಹುದಾಗಿದ್ದು, ಸೊರಗು ರೋಗದಿಂದ ಎಲ್ಲೆಡೆ ಬೆಳೆ ನಾಶವಾಗಿತ್ತು. ಆದರೆ ಬೆಳೆಯ ಬಗ್ಗೆ ಈಗ ರೈತರಿಗೆ ಸಂಪೂರ್ಣ ಮಾಹಿತಿ ಇದ್ದು, ಪರಾಗಸ್ಪರ್ಶ, ಬಳ್ಳಿಯ ನಿರ್ವಹಣೆ ಬಗ್ಗೆ ಅರಿವಿದೆ. ಸುಲಭವಾಗಿ ಬೆಳೆಯಬಹುದಾದ ಬೆಳೆ ಅಲ್ಪ ಜಾಗದಲ್ಲಿ
ಕೃಷಿ ಮಾಡಬಹುದಾಗಿದೆ. ಈಗ ಇರುವ ದರ ದೊರಕಿದರೂ ರೈತರಿಗೆ ಲಾಭದಾಯಕ ಬೆಳೆಯಾಗಲಿದೆ. ಆರ್ಥಿಕ ಬಲ ನೀಡುವ ಈ ಬೆಳೆಯತ್ತ ಮತ್ತೆ ರೈತರು ಚಿಂತನೆ ನಡೆಸಬೇಕಿದೆ. 
ಕಲ್ಕುಳಿ ಮಂಜುನಾಥ್‌, ಕೂತಗೋಡು ಗ್ರಾಪಂ,ಶೃಂಗೇರಿ.

Advertisement

ರಮೇಶ ಕರುವಾನೆ

Advertisement

Udayavani is now on Telegram. Click here to join our channel and stay updated with the latest news.

Next