ಪರಭಾಷಾ ನಾಯಕಿಯರನ್ನು ಕನ್ನಡಕ್ಕೆ ಕರೆತರಲು ಉತ್ಸಾಹ ತೋರುವ ನಿರ್ಮಾಪಕ, ನಿರ್ದೇಶಕರಿಗೆ ನಮ್ಮಲ್ಲೇನೂ ಕೊರತೆಯಿಲ್ಲ. ಯಾವುದಾದರೊಂದು ಪರಭಾಷಾ ನಾಯಕಿಯ ಹೆಸರು ನೆನಪಿಗೆ ಬಂದ ಕೂಡಲೇ, “ನನ್ನ ಮುಂದಿನ ಚಿತ್ರಕ್ಕೆ ಆಕೆ ನಾಯಕಿಯಾಗುವ ಸಾಧ್ಯತೆ ಇದೆ. ಮಾತುಕತೆ ನಡೆಯುತ್ತಿದೆ’ ಎಂದು ಹೇಳಿ ಸುಖಾಸುಮ್ಮನೆ ಸುದ್ದಿಯಾಗುತ್ತಾರೆ. ಇಂತಹ ನಿರ್ಮಾಪಕ, ನಿರ್ದೇಶಕರ ವಿರುದ್ಧ ಜಗ್ಗೇಶ್ ಬೇಸರಗೊಂಡಿದ್ದಾರೆ.
ಪರಭಾಷಾ ನಾಯಕಿಯರ ಬದಲು ನಮ್ಮ ಕನ್ನಡ ನಟಿಯರಿಗೆ ಅವಕಾಶ ಕೊಡಿ, ಕನ್ನಡದಲ್ಲಿ ನಾಯಕಿಯರಿಗೆ ಕೊರತೆ ಇಲ್ಲ ಎಂದು ಹೇಳಿದ್ದಲ್ಲದೇ, ಪರಭಾಷಾ ನಾಯಕಿಯರ ಮನೆ ಮುಂದೆ ನಿಲ್ಲಲು ಕನ್ನಡ ನಿರ್ಮಾಪಕರು ಭಿಕ್ಷುಕರೇ ಎಂದು ಪ್ರಶ್ನಿಸಿದ್ದಾರೆ. ಪರಭಾಷಾ ನಾಯಕಿಯರನ್ನು ಕಾಡಿಬೇಡಿ ಕನ್ನಡಕ್ಕೆ ಕರೆತರುವ ಬಗ್ಗೆ ಜಗ್ಗೇಶ್ ಸಿಟ್ಟಾಗಿ ತಮ್ಮ ಬೇಸರವನ್ನು ಸರಣಿ ಟ್ವೀಟ್ ಮೂಲಕ ಹೊರಹಾಕಿದ್ದಾರೆ.
ಅಷ್ಟಕ್ಕೂ ಈಗ ಪರಭಾಷಾ ನಟಿಯರ ವಿಷಯ ಯಾಕಾಗಿ ಬಂತು ಎಂದರೆ ಪರಭಾಷಾ ನಟಿ ಶ್ರುತಿ ಹಾಸನ್ ಅವರತ್ತ ಬೆರಳು ತೋರಿಸಬೇಕಾಗುತ್ತದೆ. ನಂದಕಿಶೋರ್ ನಿರ್ದೇಶನದ, ಧ್ರುವ ಸರ್ಜಾ ನಾಯಕರಾಗಿರುವ “ಪೊಗರು’ ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗುತ್ತಾರೆಂಬ ಸುದ್ದಿ ಕೆಲ ದಿನಗಳ ಹಿಂದೆ ಕೇಳಿಬಂದಿತ್ತು. ಈ ಸುದ್ದಿ ನೇರವಾಗಿ ಶ್ರುತಿ ಹಾಸನ್ ಕಿವಿಗೂ ಬಿದ್ದಿದೆ. ತಡಮಾಡದ ಶ್ರುತಿ ಹಾಸನ್, “ಸದ್ಯಕ್ಕೆ ಕನ್ನಡ ಸಿನಿಮಾಗಳಲ್ಲಿ ನಟಿಸುವ ಯಾವ ಯೋಚನೆಯೂ ನನಗಿಲ್ಲ.
ಯಾವ ಚಿತ್ರತಂಡವೂ ನನ್ನನ್ನು ಸಂಪರ್ಕಿಸಿಲ್ಲ. ಎಲ್ಲವೂ ರೂಮರ್’ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ತಾನು ಕನ್ನಡಕ್ಕೆ ಬರೋದಿಲ್ಲ ಎಂಬುದನ್ನು ಶ್ರುತಿ ಹೇಳಿದ್ದಾರೆ. ಇದರೊಂದಿಗೆ ಪರಭಾಷಾ ನಾಯಕಿಯರ ಓಲೈಕೆ ಯಾಕೆ ಎಂಬ ಚರ್ಚೆ ಕೂಡಾ ಆರಂಭವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಶ್ರುತಿ ಹಾಸನ್ ವಿರುದ್ಧ ಬೇಸರ ವ್ಯಕ್ತಪಡಿಸುವ ಜೊತೆಗೆ “ನೀವು ಬರದಿದ್ದರೆ ಬೇಸರವಿಲ್ಲ. ನಮ್ಮಲ್ಲೇ ತುಂಬಾ ಜನ ನಾಯಕಿಯರಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.
ನಟ ಜಗ್ಗೇಶ್ ಪರಭಾಷಾ ನಾಯಕಿಯರನ್ನು ಕರೆತರುವ ಬದಲು ನಮ್ಮ ನಟಿಯರಿಗೆ ಅವಕಾಶ ಕೊಡಿ ಎಂದು ಕನ್ನಡ ನಿರ್ಮಾಪಕರಲ್ಲಿ ಮನವಿ ಮಾಡಿದ್ದಾರೆ. ಅವರು ಮಾಡಿರುವ ಕೆಲವು ಟ್ವೀಟ್‌ಗಳು ಇಲ್ಲಿವೆ. “ನಮ್ಮ ಕನ್ನಡದಲ್ಲಿ ನಾಯಕಿಯರಿಗೆ ಕೊರತೆಯೇ!ಇಂಥ ಮಾತು ಕೇಳಿ ಇವರ ಮನೆಮುಂದೆ ನಿಲ್ಲಲು ಕನ್ನಡ ನಿರ್ಮಾಪಕರು ಭಿಕ್ಷಕುಕರೇ! ನಮ್ಮವರಿಗೆ ಇನ್ನು ಬುದ್ಧಿ ಬಂದಿಲ್ಲ!ದೌರ್ಭಾಗ್ಯ’, “ನಾನು ಪ್ರಾಮಾಣಿಕವಾಗಿ ನನ್ನ ಕನ್ನಡ ನಿರ್ಮಾಪಕರಿಗೆ ವಿನಂತಿ ಮಾಡುವೆ ದಯಮಾಡಿ ನಮ್ಮ ಕನ್ನಡದ ಮಕ್ಕಳನ್ನೇ ನಮ್ಮ ಚಿತ್ರಗಳಲ್ಲಿ ನಟ ನಟಿಯನ್ನಾಗಿ ಬಳಸಿ.
ಸ್ವಾಭಿಮಾನದಿಂದ ಬದುಕೋಣ’, “ಕರ್ನಾಟಕದ ಕಾಲೇಜು ಹೆಣ್ಣುಮಕ್ಕಳ ರೂಪದ ಮುಂದೆ ಇವರೆಲ್ಲಾ ಕಾಲು ಧೂಳು!ಬಣ್ಣ ತೆಗೆದು ಬಂದರೆ ನಮ್ಮ ಯುವಕರು ಮೈಲಿ ದೂರ ಓಡುತ್ತಾರೆ! ಕನ್ನಡಿಗರ ದುಡ್ಡುಬೇಕು ಕನ್ನಡ ಚಿತ್ರ ಬೇಡ್ವಂತೆ’, “ದಕ್ಷಿಣ ಭಾರತದಲ್ಲಿ ಬಲಿಷ್ಟವಾಗಿರೋದೆ ನಮ್ಮ ಕನ್ನಡ ಚಿತ್ರರಂಗ. ಪುನೀತ್, ಸುದೀಪ್, ದರ್ಶನ್, ಯಶ್, ಧ್ರುವ, ಗಣೇಶ್, ಚಿರು, ವಿಜಿ, ರಚಿತ, ರಾಧಿಕಾ,ಹರಿಪ್ರಿಯ ..ಇನ್ನು ಅನೇಕರಿದ್ದಾರೆ,ಚಿಂತೆ ಏಕೆ’ … ಹೀಗೆ ಸರಣಿ ಟ್ವೀಟ್‌ಗಳ ಮೂಲಕ ಜಗ್ಗೇಶ್ ತಮ್ಮ ಬೇಸರ ತೋಡಿಕೊಂಡಿದ್ದಾರೆ.
ಕನ್ನಡದ ನಟಿಯರಿಗೆ ಅವಕಾಶ ಸಿಗುತ್ತಿಲ್ಲ, ಪರಭಾಷೆಯವರನ್ನು ಸಿಕ್ಕಾಪಟ್ಟೆ ಸಂಭಾವನೆ ಕೊಟ್ಟು ಕರೆತರುತ್ತಾರೆಂಬ ಕೂಗು ಕನ್ನಡದ ನಟಿಯರಿಂದಲೂ ಆಗಾಗ ಕೇಳಿಬರುತ್ತಲೇ ಇರುತ್ತದೆ. ಈಗ ಶ್ರುತಿ ಹಾಸನ್ ಟ್ವೀಟ್ ಮೂಲಕ ಮತ್ತೆ ಪರಭಾಷಾ ನಾಯಕಿ ವಿಚಾರ ಸದ್ದು ಮಾಡಲಾರಂಭಿಸಿದೆ.