Advertisement

ಮತ್ತೆ ಕೃಷ್ಣಾ ಮೇಲ್ದಂಡೆ ಪೂರ್ಣ ಆಶಯ

05:45 PM Oct 01, 2022 | Team Udayavani |

ಬಾಗಲಕೋಟೆ: ದೇಶದ ಅತಿದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಮತ್ತು ಅಂತಿಮ ಹಂತದ ನೀರಾವರಿ, ಜಲಾಶಯ ಎತ್ತರ, ಪುನರ್‌ವಸತಿ, ಪುನರ್‌ ನಿರ್ಮಾಣ ಹೀಗೆ ಹಲವು ಕಾರ್ಯಗಳು ಕೈಗೊಳ್ಳುವ ವಿಷಯದಲ್ಲಿ ನಾಡದೊರೆ ಬಸವರಾಜ ಬೊಮ್ಮಾಯಿ, ಶುಕ್ರವಾರ ಆಲಮಟ್ಟಿಯಲ್ಲಿ ಆಡಿದ ಮಾತುಗಳು, ಈ ಭಾಗದ ಜನರಲ್ಲಿ ಒಂದಷ್ಟು ಭರವಸೆ ಮೂಡಿಸಿವೆ.

Advertisement

ಹೌದು, ಕೃಷ್ಣಾ ಮೇಲ್ದಂಡೆ ಯೋಜನೆ ಎಂಬುದು ಸುಮಾರು ಅರ್ಧ ಶತಕಕ್ಕೂ ಹೆಚ್ಚು ಅವಧಿಯಿಂದ ನಡೆಯುತ್ತಲೇ ಇದೆ. 1962 ಮತ್ತು 1963ರಲ್ಲಿ ಎರಡು ಬಾರಿ ಭೂಮಿಪೂಜೆಗೊಂಡ ಆಲಮಟ್ಟಿ ಜಲಾಶಯ ನಿರ್ಮಾಣ ಕಾಮಗಾರಿ, ಪೂರ್ಣಗೊಂಡು, ನೀರು ನಿಲ್ಲಿಸಲು ಆರಂಭಿಸಿದ್ದು 1999-2000ನೇ ಅವಧಿಯಲ್ಲಿ. 2005ರಲ್ಲಿ ಈ ಜಲಾಶಯ ಲೋಕಾರ್ಪಣೆಗೊಂಡಿದೆ.

ಚುನಾವಣೆಯ ತಂತ್ರವಾಗದಿರಲಿ: ಪ್ರತಿ ಬಾರಿ ವಿಧಾನಸಭೆ ಚುನಾವಣೆ ಬಂದಾಗೊಮ್ಮೆ, ಆಡಳಿತದಲ್ಲಿರುವ ಪಕ್ಷದ ಮುಖ್ಯಮಂತ್ರಿಗಳು, ಸಚಿವರು, ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು, ಕೃಷ್ಣೆಗೆ ತೋರುವ ಅತೀವ ಕಾಳಜಿ-ಪ್ರೀತಿ ಕಂಡರೆ, ವರ್ಷದಲ್ಲೇ ಎಲ್ಲಾ ಕಾಮಗಾರಿ ಪೂರ್ಣಗೊಳ್ಳುತ್ತವೆಯೇನೋ ಎಂಬ ಭರವಸೆ ಮೂಡುತ್ತದೆ. ಆದರೆ, ಅಧಿಕಾರಕ್ಕೆ ಬಂದ ಬಳಿಕ, ಬರೊಬ್ಬರಿ ನಾಲ್ಕು ವರ್ಷ, ಆಡಿದ ಮಾತುಗಳ ಭರವಸೆಗಳು, ಕುಟುಂತ್ತ ಅನುಷ್ಠಾನಗೊಳ್ಳುತ್ತವೆ. ಇದು ಹಿಂದೆ 2013ರಿಂದ 2018ರಲ್ಲಿ ಈ ಭಾಗದ ಜನರು ಕಣ್ಣಾರೆ ಕಂಡಿದ್ದಾರೆ. ಹಾಗೆಯೇ ಸದ್ಯ ಬೊಮ್ಮಾಯಿ ಅವರು ಹೇಳಿದ ಮಾತುಗಳೂ ಕೇವಲ, ಮುಂಬರುವ ಚುನಾವಣೆಗೆ ರಾಜಕೀಯ ಭರವಸೆಗಳಾಗಿ ಉಳಿಯದಿರಲಿ ಎಂಬುದು ಈ ಭಾಗದ ಹೋರಾಟಗಾರರ ಬಲವಾದ ಒತ್ತಾಯ.

ಭರವಸೆ ಇಮ್ಮಡಿ: ಶುಕ್ರವಾರ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಬೊಮ್ಮಾಯಿ, ಕೃಷ್ಣಾ ನದಿ ನೀರು ಹಂಚಿಕೆ ವಿವಾದ ಸುಪ್ರೀಂ ಕೋರ್ಟ್‌ನಲ್ಲಿರುವುದು, ಮಹಾರಾಷ್ಟ್ರ ಮತ್ತು ಕರ್ನಾಟಕದ ಇಬ್ಬರು ನ್ಯಾಯಮೂರ್ತಿಗಳು, ಹಿಂದಕ್ಕೆ ಸರಿದಿರುವುದು, ಹೊಸ ನ್ಯಾಯಮೂರ್ತಿಗಳ ನೇಮಕ ಹಾಗೂ ಯುಕೆಪಿಗೆ ಸರ್ಕಾರ ಕೈಗೊಳ್ಳಲಿರುವ ಮುಂದಿನ ಯೋಜನೆಗಳ ಕುರಿತು ಭರವಸೆಯ ಮಾತುಗಳನ್ನಾಡಿದ್ದಾರೆ. ಅವರ ಮಾತು, ಈ ಭಾಗದ ರೈತರು, ನೀರಾವರಿ ಹೋರಾಟಗಾರರಿಗೆ ಭರವಸೆ ಇಮ್ಮಡಿಗೊಳಿಸಿದೆ. ಆದರೆ, ಇದು ಆಡಿದ ಮಾತುಗಳಂತೆ ಅನುಷ್ಠಾನಕ್ಕೆ ಬರಲಿ ಎಂಬುದು ಅವರೆಲ್ಲರ ಆಗ್ರಹ.

ಮುಖ್ಯಮಂತ್ರಿಗಳಾದವರಲ್ಲಿ ಯುಕೆಪಿ ಕುರಿತು ಆಳವಾದ ಮಾಹಿತಿ ಇರುವವರಲ್ಲಿ ಬೊಮ್ಮಾಯಿ ಮೊದಲಿಗರೆಂದರೆ ತಪ್ಪಲ್ಲ. ಇಂದಿಗೂ ಅವರು ಈ ಭಾಗದ ಪ್ರತಿಯೊಂದು ಯೋಜನೆ, ಅಂಕಿ-ಸಂಖ್ಯೆಗಳನ್ನು ಯಾವ ಕೈಪಿಡಿ ನೋಡದೇ ಹೇಳುತ್ತಾರೆ. ಅವರೇ ಜಲಸಂಪನ್ಮೂಲ ಸಚಿವರಾಗಿದ್ದಾಗ ಈ ಬಗ್ಗೆ ಸಾಕಷ್ಟು ಅಧ್ಯಯನ ಕೂಡ ಮಾಡಿದ್ದಾರೆ. ಕಳೆದ 2010ರಲ್ಲಿ ಕೃಷ್ಣಾ ನ್ಯಾಯಾಧೀಕರಣದ ತೀರ್ಪು ಬಂದಾಗ, ಸ್ವತಃ ಬೊಮ್ಮಾಯಿ ಅವರೇ ಜಲ ಸಂಪನ್ಮೂಲ ಸಚಿವರೂ ಆಗಿದ್ದರು. ಹೀಗಾಗಿ ಈ ಯೋಜನೆಯ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದಾರೆ.

Advertisement

ಈಗ ಅವರೇ ಸಿಎಂ ಆಗಿರುವುದು, ಈ ಭಾಗಕ್ಕೆ ದೊಡ್ಡ ವರದಾನವಾಗಿ ಪರಿಣಿಸಬೇಕು. ಚುನಾವಣೆ ವರ್ಷವಾದರೂ ನೀತಿ ಸಂಹಿತೆ ಹೊರ ಬೀಳುವ ಮೊದಲೇ, ಕೃಷ್ಣೆಯ ವಿಷಯದಲ್ಲಿ ಅಧಿಸೂಚನೆ, ರಾಷ್ಟ್ರೀಯ ಯೋಜನೆಗೆ ಪ್ರಸ್ತಾವನೆ, ಮುಕ್ಕಾಲು ಭಾಗದಷ್ಟು ಅಗತ್ಯ ಅನುದಾನವೂ ಒದಗಲಿ ಎಂಬುದು ಹಲವರ ಆಶಯ. ಆಲಮಟ್ಟಿ ಜಲಾಶಯವನ್ನು 524.256 ಮೀಟರ್‌ ಎತ್ತರಿಸಿದಾಗ ನೀರಾವರಿ, ಪುನರ್‌ವಸತಿ, ಪುನರ್‌ ನಿರ್ಮಾಣ, ಕಾಲುವೆ ನಿರ್ಮಾಣ ಹೀಗೆ ಹಲವು ಕಾಮಗಾರಿಗೆ ಒಟ್ಟಾರೆ, 1.36 ಲಕ್ಷ ಎಕರೆ ಭೂಮಿ ಕಳೆದುಕೊಳ್ಳಲಿದ್ದೇವೆ. ಮುಖ್ಯವಾಗಿ 20 ಹಳ್ಳಿಗಳು, ಸಂಪೂರ್ಣ ಮುಳುಗಡೆಗೊಳ್ಳಲಿವೆ.

ಮುಳುಗಡೆ ಹಳ್ಳಿ, ಭೂಸ್ವಾಧೀನಕ್ಕಾಗಿ ಹೊರಡಿಸಿದ್ದ ಅಧಿಸೂಚನೆಗಳು, ಅವಧಿ ಮೀರಿದ ಹಿನ್ನೆಲೆಯಲ್ಲಿ ರದ್ದಾಗಿವೆ. ಹೊಸದಾಗಿ ಅಧಿಸೂಚನೆ ಹೊರಡಿಸಿ, 10 ಹಳ್ಳಿಗಳ ಪರಿಹಾರ ವಿತರಣೆಗೆ ಅಂತಿಮ ಹಂತ ತಲುಪಿದೆ. ಇದಕ್ಕಾಗಿ ತಕ್ಷಣವೇ 3900 ಕೋಟಿ ಹಣ ಬೇಕಿದೆ. ಅದನ್ನು ಕೊಡುವುದಾಗಿ ಸ್ವತಃ ಸಿಎಂ ಹೇಳಿದ್ದಾರೆ. ಆದರೆ, ಮುಳುಗಡೆಗೊಳ್ಳುವ 20 ಹಳ್ಳಿಗಳಲ್ಲಿ ಇನ್ನೂ ಆರು ಹಳ್ಳಿಗಳ ಸರ್ವೆ ಕಾರ್ಯ ಪುನಃ ನಡೆಸುವುದಾಗಿ ಹೇಳಿದ್ದು, ಅದರ ಅಗತ್ಯವೇನಿಲ್ಲ ಎಂಬ ಮಾತು ಕೇಳಿ ಬಂದಿದೆ.

ಜಲಾಶಯ ಎತ್ತರದಿಂದ ಮುಳುಗಡೆ ಗೊಳ್ಳುವ ಸುಮಾರು 96 ಸಾವಿರ ಎಕರೆ ಭೂಮಿಗೆ ಪರಿಹಾರ ಸಿಗಬೇಕು. 20 ಹಳ್ಳಿ ಸ್ಥಳಾಂತರಗೊಳ್ಳಬೇಕು. 9 ಉಪ ಯೋಜನೆಗಳ ಎಲ್ಲಾ ಹಂತದ ಕಾಲುವೆ ನಿರ್ಮಾಣವೂ ಆಗಬೇಕು. ಇತ್ತ ನೀರು ನಿಲ್ಲಿಸುತ್ತಿದ್ದಂತೆ, ಅತ್ತ ರೈತರ ಭೂಮಿಗೂ ನೀರು ತಲುಪಬೇಕು. ಸರ್ಕಾರ ಭರವಸೆಯ ಮಾತುಗಳನ್ನಾಡದೇ, ಬದ್ಧತೆಯ ಕೆಲಸ ಮಾಡಬೇಕು ಎಂಬುದು ರೈತರ ಒಕ್ಕೊರಲ ಒತ್ತಾಯವಾಗಿದೆ.
ಶ್ರೀಶೈಲ ಕೆ. ಬಿರಾದಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next