Advertisement

ಡಿ. 26ರಂದು ಮತ್ತೆ ಕಂಕಣ ಸೂರ್ಯಗ್ರಹಣ

10:41 AM Jun 10, 2019 | Suhan S |

ಅಂಕೋಲಾ: 40 ವರ್ಷಗಳ ಬಳಿಕ ಮತ್ತೂಮ್ಮೆ ಡಿ.26 ರಂದು ಗೋಚರಿಸಲಿರುವ ಖಗ್ರಾಸ ಸೂರ್ಯಗ್ರಹಣ ವೀಕ್ಷಿಸಲು ಅಂಕೋಲಾದಲ್ಲಿ ಖಗೋಳ ತಜ್ಞರು ವಿಶೇಷ ಸಿದ್ಧತೆ ನಡೆಸಿದ್ದಾರೆ.

Advertisement

1980 ಫೆಬ್ರುವರಿಯಲ್ಲಿ ಸಂಭವಿಸಿದ ಸೌರಮಂಡಲದ ಚಮತ್ಕಾರಗಳಲ್ಲಿ ಒಂದಾದ ಪೂರ್ಣ ಸೂರ್ಯಗ್ರಹಣ ಈ ವರ್ಷ ಡಿ.26 ರಂದು ಮತ್ತೆ ಕಾಣಿಸಿಕೊಳ್ಳಲಿದೆ. ಅಂದು ಘಟಿಸಿದ ಈ ಸೂರ್ಯ ಗ್ರಹಣ ಭಾರತದ ಅಂಕೋಲಾದಲ್ಲಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಮತ್ತು ವಿಶೇಷವಾಗಿ ಕಾಣಿಸಿದ ಬಗ್ಗೆ ಖಗೋಳ ತಜ್ಞರು ಮಾಹಿತಿ ನೀಡಿದ್ದಾರೆ.

1980 ಫೆ.16 ಶಿವರಾತ್ರಿ ಅಮಾವಾಸ್ಯೆಯ ದಿನ. ಪ್ರಪಂಚದ ಖಗೋಳ ಇತಿಹಾಸದಲ್ಲಿ ಅಂಕೋಲಾ ಊರಿಗೆ ಐತಿಹಾಸಿಕ ಮಹತ್ವ ದೊರೆತಿತ್ತು. ಆ ದಿನ ಅತ್ಯಂತ ವಿರಳಾತಿ ವಿರಳ, ಬಹುಶಃ ಅದೇ ಸ್ಥಳದಲ್ಲಿ ಸಾವಿರಾರು ವರ್ಷಗಳಿಗೊಮ್ಮೆ ನಡೆಯಬಹುದಾದ ಕೌತುಕಪೂರ್ಣ ಖಗೋಳ ವಿದ್ಯಾಮಾನವೊಂದು ನಡೆದು ಹೋಯಿತು. ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ಸೂರ್ಯನಿಗೆ ಚಂದ್ರಬಿಂಬ ಅಡ್ಡ ಹಾಯ್ದ ಪರಿಣಾಮ ನಡು ಹಗಲಿನಲ್ಲಿಯೇ ನಕ್ಷತ್ರ ಕಾಣುವಂತೆ ನಡುರಾತ್ರಿಯ ಅನುಭವ ಸ್ಥಳೀಯರಿಗಾಯಿತು. ವಜ್ರದ ಉಂಗುರದಂತೆ ಸೂರ್ಯ ಕೆಲ ಕಾಲ ರಂಜಿಸಿದ. ಮುನ್ನೆಚ್ಚರಿಕೆ ಯಿಲ್ಲದೇ ಸೌರಗಾಜು, ಬೆಳಕು ನಿರೋಧಕ ಸಾಧನಗಳ ಸಹಾಯವಿಲ್ಲದೇ ತದೇಕದೃಷ್ಟಿಯಿಂದ ಸೂರ್ಯನನ್ನು ಗ್ರಹಣದ ಸಮಯದಲ್ಲೇ ಆಗಲಿ ಬೆಳಗು ಸಂಜೆಯಲ್ಲದೇ ಬೇರಾವುದೇ ಸಮಯದಲ್ಲಿ ನೋಡುವುದು ಕಣ್ಣಿಗೆ ಹಾನಿಯಾಗುತ್ತದೆ ಎಂಬುದನ್ನು ಬಿಟ್ಟರೆ ಇತರ ಯಾವುದೇ ತೊಂದರೆಗಳು ಗ್ರಹಣ ವೀಕ್ಷಣೆಯಿಂದ ಆಗುತ್ತದೆ ಎಂಬುದಕ್ಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ.

•40 ವರ್ಷಗಳ ಬಳಿಕ ಗೋಚರಿಸಲಿದೆ

•ಅಂಕೋಲಾದಲ್ಲಿ ವೀಕ್ಷಿಸಲು ಖಗೋಳ ತಜ್ಞರಿಂದ ನಡೆದಿದೆ ಸಿದ್ಧತೆ

Advertisement

•1980 ಫೆ.16 ಶಿವರಾತ್ರಿ ಅಮಾವಾಸ್ಯೆಯ ದಿನ ಕಾಣಿಸಿ ಕೊಂಡಿತ್ತು

•ಅಂಕೋಲಾದಲ್ಲಿ ಮಾತ್ರ ಪೂರ್ಣ ಪ್ರಮಾಣ- ವಿಶೇಷವಾಗಿ ಕಾಣಿಸಿತ್ತು

•ಬೆಳಕು ನಿರೋಧಕ ಸಾಧನದಿಂದಲೇ ಗ್ರಹಣ ವೀಕ್ಷಿಸಬೇಕು

ಎರಡೂ ಮುಕ್ಕಾಲು ನಿಮಿಷಗಳ ಅವಧಿಯ ಅಂದಿನ ಪೂರ್ಣ ಸೂರ್ಯಗ್ರಹಣ ಆಫ್ರಿಕಾ ಖಂಡದಿಂದ ಪ್ರಾರಂಭವಾಗಿ ಅಂಕೋಲಾದಲ್ಲಿ ಭಾರತವನ್ನು ಪ್ರವೇಶಿಸಿ ರಾಯಚೂರು, ಆಂಧ್ರದ ಸೂರ್ಯಪೇಟೆ, ಒರಿಸ್ಸಾದ ಧರ್ಮಪುರಿ ಮತ್ತು ಪುರಿಯ ಮಾರ್ಗವಾಗಿ ಸಾಗಿ ಬರ್ಮಾ ಮತ್ತು ಚೀನಾದಲ್ಲಿ ಕೊನೆಗೊಂಡಿತು. ಆನಂತರ ಭಾರತದಲ್ಲಿ ಬೆರಳೆಣಿಕೆಯಷ್ಟು ಪೂರ್ಣ ಸೂರ್ಯ ಗ್ರಹಣಗಳಾದರೂ ಕರ್ನಾಟಕದಲ್ಲಿ ಗ್ರಹಣ ನೋಡುವ ಅವಕಾಶ ಲಭ್ಯವಾಗಿರಲಿಲ್ಲ. ಈಗ 40 ವರ್ಷದ ನಂತರ ಮತ್ತೂಮ್ಮೆ ಗ್ರಹಣ ನೋಡುವ ಸದಾವಕಾಶ ಲಭ್ಯವಾಗಿದೆ. ಮತ್ತೆ ಈ ಅವಕಾಶಕ್ಕೆ ಇನ್ನೂ ನಲವತ್ತೈದು ವರ್ಷ 17 ಫೆಬ್ರವರಿ 2064ರವರೆಗೆ ಕಾಯಬೇಕು.

ಈ ವರ್ಷದ ಡಿಸೆಂಬರ್‌ ತಿಂಗಳ ಗ್ರಹಣ ಮೂರು ಕಾಲು ನಿಮಿಷಗಳ ಅವಧಿಯ ಕಂಕಣ ಸೂರ್ಯ ಗ್ರಹಣವಾಗಿದೆ. ಇದು ನಮ್ಮ ಕರ್ನಾಟಕದ ಮಂಗಳೂರಿನ ಕರಾವಳಿ ಮೂಲಕ ಮಡಿಕೇರಿ, ಗುಂಡ್ಲುಪೇಟೆ, ತಮಿಳುನಾಡಿನ ಊಟಿ, ತಿರುಪಟೂರು, ದಿಂಡಿಗಲ್ ಮತ್ತು ಕಾರೈಕುಡಿ ಮಾರ್ಗವಾಗಿ ಬಂಗಾಳ ಕೊಲ್ಲಿಯ ಮೂಲಕ ಮಲೇಷಿಯಾಕ್ಕೆ ಹೋಗಲಿದೆ.

ಅಲ್ಲದೆ ಖಗೋಳ ತಜ್ಞ ಮಂಜುನಾಥ ಜೇಡಿಕುಣಿ ಅವರ ನೇತೃತ್ವದಲ್ಲಿ ಗ್ರಹಣದ ಬಗ್ಗೆ ಮಾಹಿತಿ ನೀಡುವ ಅಭಿಯಾನ ಸಹ ರಾಜ್ಯವ್ಯಾಪಿ ನಡೆಯಲಿದೆ ಎಂದು ತಿಳಿಸಿದ್ದಾರೆ.

•ಅರುಣ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next