Advertisement

ಸುಳ್ಯ: ಮತ್ತೆ ಒನ್‌ ಸೈಡ್‌ ಪಾರ್ಕಿಂಗ್‌

10:39 AM Aug 23, 2022 | Team Udayavani |

ಸುಳ್ಯ: ಸುಳ್ಯ ನಗರ ಪಂಚಾಯತ್‌ ವ್ಯಾಪ್ತಿಯ ಸುಳ್ಯ ನಗರದಲ್ಲಿ ಕೆಲವು ವರ್ಷಗಳ ಹಿಂದೆ ಜಾರಿಯಲ್ಲಿದ್ದ ಒನ್‌ ಸೈಡ್‌ ಪಾರ್ಕಿಂಗ್‌ ವ್ಯವಸ್ಥೆಯನ್ನು ಮರು ಜಾರಿ ಮಾಡಿದೆ. ದಂಡನೆ ಕುರಿತು ಇನ್ನೊಂದು ಸಭೆ ನಡೆಸಲು ನಿರ್ಧರಿಸಿದೆ.

Advertisement

ಸುಳ್ಯ ನಗರದ ಮುಖ್ಯ ರಸ್ತೆ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು ದಿನನಿತ್ಯ ಟ್ರಾಫಿಕ್‌ ಸಮಸ್ಯೆ ಕಂಡು ಬರುತ್ತಿತ್ತು.

ಇಲ್ಲಿಯ ರಸ್ತೆ ಬದಿಯಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದಾಗಿ ಪೇಟೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ದೂರು ಬಂದ ಹಿನ್ನೆಲೆಯಲ್ಲಿ ಈ ಯೋಜನೆ ಮರು ಜಾರಿಗೆ ಸ್ಥಳೀಯ ಆಡಳಿತ ಮುಂದಾಗಿದೆ.

ಇಲ್ಲಿನ ಟ್ರಾಫಿಕ್‌ ಸಮಸ್ಯೆ ಬಗೆಹರಿಸಲು ಸುಳ್ಯ ನಗರ ಪಂಚಾಯತ್‌, ಪೊಲೀಸ್‌ ಇಲಾಖೆ, ವಾಹನ ಚಾಲಕರು, ವರ್ತಕರು ಕೆಲವು ಸುತ್ತಿನ ಸಭೆ ನಡೆಸಿ ವಿವಿಧ ತೀರ್ಮಾನ ಕೈಗೊಂಡಿದ್ದರು. ಇದೀಗ ಕೈಗೊಂಡ ನಿರ್ಣಯಗಳನ್ನು ಹಂತಹಂತವಾಗಿ ಅನುಷ್ಠಾನಕ್ಕೆ ನ.ಪಂ. ಮುಂದಾಗಿದೆ.

ಒನ್‌ ಸೈಡ್‌ ಪಾರ್ಕಿಂಗ್‌ ವ್ಯವಸ್ಥೆ ಸುಳ್ಯ ನಗರಕ್ಕೆ ಹೊಸದೇನು ಅಲ್ಲ. ಕೆಲವು ವರ್ಷಗಳ ಹಿಂದೆ ಜಾರಿಯಲ್ಲಿ ಇತ್ತಾದರೂ ಆ ಬಳಿಕ ನೇಪಥ್ಯಕ್ಕೆ ಸರಿದಿತ್ತು. ಅನಂತರ ಮತ್ತದೇ ಟ್ರಾಫಿಕ್‌ ಸಮಸ್ಯೆಗೆ ನಾಂದಿಯಾಯಿತು.

Advertisement

ಇದೀಗ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಒನ್‌ ಸೈಡ್‌ ಪಾರ್ಕಿಂಗ್‌ ಕಟ್ಟುನಿಟ್ಟಾಗಿ ಮರುಜಾರಿಯಾಗಲಿದೆ. ಅದರಂತೆ ಒಂದು ದಿನ ಬಲ ಬದಿ, ಇನ್ನೊಂದು ದಿನ ಎಡ ಬದಿಯಲ್ಲಿ ಪಾರ್ಕಿಂಗ್‌ ಮಾಡಲು ಸ್ಥಳೀಯಾಡಳಿತ ಸೂಚಿಸಿದೆ. ಇದಕ್ಕಾಗಿ ಇನ್ನೊಂದು ಸಭೆ ನಡೆಯಲಿದೆ.

ವರ್ತಕರಿಂದ ಬೋರ್ಡ್‌ ಅಳವಡಿಕೆ

ಒನ್‌ ಸೈಡ್‌ ಪಾರ್ಕಿಂಗ್‌ ಜಾರಿಯಲ್ಲಿರುವುದನ್ನು ತಿಳಿಸಲು ಈಗ ಅಂದಾಜಿನಂತೆ ವರ್ತಕರು ತಮ್ಮ ಅಂಗಡಿ, ಮಳಿಗೆ ಮುಂಭಾಗ ಪಾರ್ಕಿಂಗ್‌ ಇಲ್ಲದ ದಿನ ನೋ ಪಾರ್ಕಿಂಗ್‌ ಬೋರ್ಡ್‌ ಅಳವಡಿಸಲು ಸೂಚಿಸಲಾಗಿದ್ದು ಅದರಂತೆ ವರ್ತಕರು ಬೋರ್ಡ್‌ ಅಳವಡಿಸಿ ಸಹಕರಿಸುತ್ತಿದ್ದಾರೆ. ಒನ್‌ ಸೈಡ್‌ ಪಾರ್ಕಿಂಗ್‌ ವ್ಯವಸ್ಥೆ ಗಾಂಧಿನಗರದಿಂದ ಜ್ಯೋತಿ ಆಸ್ಪತ್ರೆ ಬಳಿಯವರೆಗೆ ಇರಲಿದೆ. ಬಸ್‌ಗಳನ್ನು ಬಸ್‌ ಬೇಯಲ್ಲಿ ಮಾತ್ರವೇ ನಿಲ್ಲಿಸಬೇಕು, ಪ್ರಮುಖ ಜಂಕ್ಷನ್‌ಗಳಲ್ಲಿ ರಸ್ತೆ ಬದಿಯಲ್ಲಿ ಪಾರ್ಕಿಂಗ್‌ ಸಂಪೂರ್ಣ ನಿಷೇಧ ಮಾಡುವುದನ್ನು ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಯಮ ಕಟ್ಟು ನಿಟ್ಟಿನ ಪಾಲನೆಗಾಗಿ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದು ನಿಯಮ ಉಲ್ಲಂಘನೆ ಮಾಡುವವರಿಗೆ ಈಗ ತಪ್ಪು ತಿದ್ದಲು ಸೂಚನೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next