Advertisement

ಹಣ ಗಳಿಕೆಯಷ್ಟೇ ಯುವ ವೈದ್ಯರ ಉದ್ದೇಶ ಆಗದಿರಲಿ

11:55 AM Apr 07, 2017 | Team Udayavani |

ಬೆಂಗಳೂರು: “ಆರೋಗ್ಯ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಸಂಶೋಧನೆಯ ಅಗತ್ಯವಿದೆ. ಕಡಿಮೆ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಮತ್ತು ಔಷಧಗಳು ಸಿಗುವಂತಾಗಬೇಕಿದೆ,’ ಎಂದು ಮಾನವ ತಳಿಶಾಸ್ತ್ರ ಕೇಂದ್ರದ ನಿರ್ದೇಶಕ ಡಾ.ಎಚ್‌.ಬಿ. ಶರತ್‌ಚಂದ್ರ ಹೇಳಿದ್ದಾರೆ.

Advertisement

ಗುರುವಾರ ನಿಮ್ಹಾನ್ಸ್‌ ಕನ್ವೆನನ್‌ ಸೆಂಟರ್‌ನಲ್ಲಿ ನಡೆದ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ  ಭಾಷಣ ಮಾಡಿದ ಅವರು, “ವೈದ್ಯಕೀಯ ಕ್ಷೇತ್ರದಲ್ಲಿ ವಿವಿಧ ರೋಗಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕು. ಅದಕ್ಕೆ ಸಾಕಷ್ಟು ಸೌಲಭ್ಯ, ಸಹಕಾರದ ಅಗತ್ಯವಿದೆ. ದೇಶದ ಜಿಡಿಪಿಗೆ ಆರೋಗ್ಯ ಕ್ಷೇತ್ರ ಶೇ.1.5ರಷ್ಟು ಕೊಡುಗೆ ನೀಡುತ್ತಿದೆ.

ಇತರ ದೇಶಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಿದ್ದು, ಇಲ್ಲೂ ಕೂಡ ಅದನ್ನು ವೃದ್ಧಿಸುವ ಪ್ರಯತ್ನಗಳು ಪ್ರಾಮಾಣಿಕವಾಗಿ ನಡೆಯಬೇಕಿದೆ. ದೇಶದಲ್ಲಿ ಜನರಿಗೆ ಆರೋಗ್ಯ ವಿಮೆ ಪ್ರಮಾಣ ಕಡಿಮೆ ಇದ್ದು, ಕಡಿಮೆ ದರದಲ್ಲಿ ಔಷಧಿಗಳು, ಆರೋಗ್ಯ ಸೇವೆಗಳು ಲಭ್ಯವಾಗಬೇಕು. ಯುವ ವೈದ್ಯರುಗಳು ಕೇವಲ ಹಣ ಗಳಿಕೆಗೆ ಮಾತ್ರ ತಮ್ಮ ವೃತ್ತಿಯನ್ನು ಬಳಸಿಕೊಳ್ಳದೆ ಮನುಕುಲದ ಉದ್ಧಾರಕ್ಕಾಗಿ ಬಳಕೆ ಮಾಡಬೇಕು. ಮಾನವೀಯ ಮೌಲ್ಯಗಳನ್ನು ಎಂದಿಗೂ ಮರೆಯಬಾರದು,” ಎಂದು ಹೇಳಿದರು. 

“ಪ್ರಸ್ತುತ ನ್ಯುಮೋನಿಯಾದಿಂದ ಶಿಶು ಮರಣ ಪ್ರಮಾಣ ಹೆಚ್ಚುತ್ತಿದೆ. ದಿನೆ ದಿನೇ ಜಾಸ್ತಿಯಾಗುತ್ತಿರುವ ಸಾಂಕ್ರಾಮಿಕ ರೋಗಗಳ ನಿರ್ಮೂಲನೆಗೆ ವೈದ್ಯಕೀಯ ಕ್ಷೇತ್ರ ಪ್ರಯತ್ನಿಸಬೇಕು. ವೈದ್ಯಕೀಯ ಕ್ಷೇತ್ರ ಕೇವಲ ಉದ್ಯಮವಲ್ಲ. ವೈದ್ಯರು ರೋಗಿಗಳ ಪಾಲಿನ ದೇವರು ಎಂದು ನಂಬಲಾಗುತ್ತಿದ್ದು, ಆ ನಂಬಿಕೆಯನ್ನು ಹುಸಿಗೊಳಿಸದಂತೆ ಸಾಧ್ಯವಾದಷ್ಟು ಸೇವೆ ಮಾಡಬೇಕು,’ ಎಂದರು. 

ಇಬ್ಬರಿಗೆ ಡಾಕ್ಟರೇಟ್‌ ಪ್ರದಾನ
ರಾಜ್ಯಪಾಲ ವಜುಭಾಯಿ ವಾಲಾ ಅವರು ನಿವೃತ್ತ ಪ್ರಾಧ್ಯಾಪಕ ಡಾ. ಕುತುಪಾಡಿ ಗೋವಿಂದದಾಸ್‌ ಹಾಗೂ ಮೈಸೂರು ಮೂಲದ ಹೃದ್ರೋಗ ತಜ್ಞ ಡಾ. ಗೋವಿಂದ ರಾಜ್‌ ಸುಬ್ರಮಣಿ ಅವರಿಗೆ ಗೌರವ ಡಾಕ್ಟರೆಟ್‌ ಪದವಿ ಪ್ರದಾನ ಮಾಡಿದರು. ನಂತರ 69 ಪದವೀಧರರಿಗೆ 103 ಚಿನ್ನದ ಪದಕ ಹಾಗೂ 9 ನಗದು ಬಹುಮಾನ ವಿತರಿಸಿದರು. 

Advertisement

ದೀಪ್ತಿ, ಸ್ವಾತಿಮುತ್ತುಗೆ ತಲಾ 5 ಚಿನ್ನ
ದಾವಣಗೆರೆಯ ಜೆಜೆಎಂ ವೈದ್ಯ ಕಾಲೇಜಿನ ಡಾ. ದೀಪ್ತಿ ಅಗರ್ವಾಲ…, ಧರ್ಮಸ್ಥಳ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜಿನ ಡಾ.ಬಿ.ಎನ್‌.ಸ್ವಾತಿಮುತ್ತು ತಲಾ 5 ಚಿನ್ನದ ಪದಕ ಪಡೆದರು. ಬೆಳಗಾವಿ ವೈದ್ಯಕೀಯ ಸಂಸ್ಥೆಯ ಡಾ. ಭಾಗ್ಯಶ್ರೀ, ಬೆಂಗಳೂರಿನ ಡಿ.ಎ.ಪಾಂಡು ಆರ್‌.ವಿ. ಡೆಂಟಲ್‌ ಕಾಲೇಜಿನ ಡಾ.ಅಭಿಷೇಕ್‌ ಪಾಠಕ್‌ ತಲಾ 4 ಚಿನ್ನದ ಪದಕ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next