Advertisement

ಅಕ್ರಮ ಮರಳು ತಡೆಗೆ ಸಮಿತಿ

01:02 PM Dec 05, 2019 | Naveen |

ಅಫಜಲಪುರ: ತಾಲೂಕಿನ 5 ಮರಳು ಸಾಗಟ ಕೇಂದ್ರಗಳಿಂದ ಅಕ್ರಮ ಮರಳು ಸಾಗಾಟ ತಡೆಗಾಗಿ ಮರಳು ಸಮಿತಿ ರಚನೆ ಮಾಡಲಾಗಿದೆ ಎಂದು ಸಹಾಯಕ ಆಯುಕ್ತ ರಾಮಚಂದ್ರ ಗಡದೆ ಹೇಳಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಅಕ್ರಮ ಮರಳು ಸಾಗಾಟ ತಡೆ, ಮರಳು ಸಮಿತಿ ರಚನೆ, ಗಸ್ತು ತಂಡದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 14 ಮರಳು ಸಾಗಾಟ ಕೇಂದ್ರಗಳಿವೆ. ಈ ಪೈಕಿ ಅಫಜಲಪುರ ತಾಲೂಕಿನಲ್ಲಿಯೇ 5 ಕೇಂದ್ರಗಳಿವೆ. ಎಲ್ಲಾ ಕಡೆ ಅಧಿಕಾರಿಗಳು ಗಮನ ಇಡಬೇಕು. ಸದ್ಯ ನದಿಯಲ್ಲಿ ನೀರು ತುಂಬಿದೆ. ಹೀಗಾಗಿ ಮರಳು ತೆಗೆಯುವುದು ಸಾಧ್ಯವಿಲ್ಲ. ಜಪ್ತಿ ಮಾಡಿದ ಮರಳನ್ನು ಮೊದಲು ಸರ್ಕಾರಿ ಕೆಲಸಗಳಿಗಾಗಿ ಮಾತ್ರ ಬಳಕೆಗೆ ನೀಡಬೇಕು. ನಂತರ ಮರಳು ಉಳಿದರೆ ಸಾರ್ವಜನಿಕರಿಗೆ ನೀಡಲು ಮುಂದಾಗಿ. ಮರಳನ್ನು ಒಳ ಜಿಲ್ಲೆ, ಹೊರ ಜಿಲ್ಲೆಗಳಲ್ಲಿ ಮಾತ್ರ ಸಾಗಣೆ ಮಾಡಲು ಅವಕಾಶವಿದೆ. ಹೊರ ರಾಜ್ಯಗಳಿಗೆ ಮರಳು ಸಾಗಾಟ ನಿಷೇಧವಿರುವುದರಿಂದ ಯಾವುದೇ ಕಾರಣಕ್ಕೂ ಮರಳು ಹೊರ ಹೋಗಲು ಬಿಡಬೇಡಿ. ಇದಕ್ಕಾಗಿಯೇ 5 ಜನರ ತಂಡ ರಚನೆ ಮಾಡಲಾಗಿದೆ. ಈ ತಂಡ ವಾರದಲ್ಲಿ ಎರಡು ಬಾರಿ ಗಸ್ತು ತಿರುಗಿ ಅಕ್ರಮ ಸಾಗಾಟ ತಡೆಯುವ ಕೆಲಸ ಮಾಡಲಿದೆ ಎಂದರು.

ಮರಳು ಸಮಿತಿಯಲ್ಲಿ ಕಂದಾಯ, ಭೂ ವಿಜ್ಞಾನ, ಜಿ.ಪಂ, ಪೊಲೀಸ್‌, ಲೋಕೋಪಯೋಗಿ, ಪಂಚಾಯತ್‌ ರಾಜ್‌ ಇಲಾಖೆಗಳು ಸೇರಿದಂತೆ ಒಟ್ಟು 14 ಇಲಾಖೆಗಳು ಬರುತ್ತವೆ. ಎಲ್ಲರೂ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಬೇಕು. ಮರಳು ಸಮಿತಿಗೆ ಎ.ಸಿ ಅಧ್ಯಕ್ಷರಾಗಿರುತ್ತಾರೆ, ತಹಶೀಲ್ದಾರ್‌ ಕಾರ್ಯದರ್ಶಿಯಾಗಿರಲಿದ್ದಾರೆ. ಪ್ರತಿ ತಿಂಗಳು ಎಲ್ಲಾ ಅ ಧಿಕಾರಿಗಳು ಸಭೆ ನಡೆಸಬೇಕು ಎಂದು ತಾಕೀತು ಮಾಡಿದರು.

ತಹಶೀಲ್ದಾರ್‌ ಮಧುರಾಜ್‌ ಕೂಡಲಗಿ ಮಾತನಾಡಿ, ತಾಲೂಕಿನಲ್ಲಿ ಇದುವರೆಗೆ 10 ಸಾವಿರ ಮೆಟ್ರಿಕ್‌ ಟನ್‌ ಅಕ್ರಮ ಮರಳು ಸೀಜ್‌ ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಡಿವೈಎಸ್‌ಪಿ ಮಲ್ಲಿಕಾರ್ಜುನ, ಸಿಪಿಐ ಮಹಾದೇವ ಪಂಚಮುಖೀ, ಪಿಎಸ್‌ಐ ಸಂತೋಷ ತಟ್ಟೆಪಳ್ಳಿ ಸೇರಿದಂತೆ 14 ಇಲಾಖೆಯ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next