Advertisement

ಭಿಕ್ಷೆ ಬೇಡುವ ಸೋಗಲ್ಲಿ ದರೋಡೆ

12:12 PM Aug 31, 2017 | |

ದಾವಣಗೆರೆ: ಭಿಕ್ಷೆ ಬೇಡುವ ಸೋಗಲ್ಲಿ ಬಸ್‌ ಹಾಗೂ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಹಣ-ಆಭರಣ ದೋಚುತ್ತಿದ್ದ ಮೂವರು ಸಹೋದರಿಯರನ್ನು
ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣಗಳಿಗೆ ಸಂಬಂಧಿಸಿದಂತೆ ತಾಯಿ ಹಾಗೂ ಆಕೆಯ ನಾಲ್ವರು ಪುತ್ರಿಯರನ್ನು ಬಂಧಿಸಲಾಗಿದೆ
ಹೆಚ್ಚುವರಿ ಪೊಲೀಸ್‌ ಅಧೀಕ್ಷಕಿ ಯಶೋದಾ ಎಸ್‌. ವಂಟಿಗೋಡಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Advertisement

ಹರಿಹರದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಬಳಿ ಜು.18ರಂದು ಭಿಕ್ಷೆ ಬೇಡುವ ನೆಪದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿ, ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಎಂ.ಕೆ.ದೊಡ್ಡಿಯ ವೆಂಕಟರಮಣಮ್ಮ (ತಾಯಿ) ಹಾಗೂ ಆಕೆಯ ಪುತ್ರಿ ಕವಿತಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಒಂದೇ ಕುಟುಂಬದವರು ಹಣ-ಆಭರಣ ದೋಚುವ ಪ್ರಕರಣ ಬೆಳಕಿಗೆ ಬಂದಿವೆ ಎಂದರು.

ಆರೋಪಿಗಳಿಬ್ಬರ ಮಾಹಿತಿ ಆಧರಿಸಿ, ಕಾರ್ಯಾಚರಣೆ ಕೈಗೊಂಡ ಹರಿಹರ-ಹೊನ್ನಾಳಿ ಪೊಲೀಸರು , ವೆಂಕಟರಮಣಮ್ಮನ ಇನ್ನೂ ಮೂವರು ಪುತ್ರಿಯರಾದ ಕಲಾವತಿ ಅಲಿಯಾಸ್‌ ಕೃಷ್ಣವೇಣಿ ಅಲಿಯಾಸ್‌ ಗೀತಾ (35), ಜ್ಯೋತಿ ಅಲಿಯಾಸ್‌ ಗೀತಾ (30), ಅಲುವೇಲು ಅಲಿಯಾಸ್‌ ಅಲವೇರಿ (28) ಇವರನ್ನು ಬಂಧಿಸಿ, 21ಲಕ್ಷ ಮೌಲ್ಯದ 700 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ದರೋಡೆಗೆ ಸಂಬಂಧಿಸಿದಂತೆ ಪರಾರಿಯಾಗಿರುವ ಕೃಷ್ಣಮೂರ್ತಿ ಸಹ ಇದೇ ಕುಟುಂಬದವನು. ಇಡೀ ಕುಟುಂಬವೇ ಕಳ್ಳತನ, ದರೋಡೆ, ಡಕಾಯತಿ ಕೃತ್ಯ ಎಸಗುತ್ತಿತ್ತುಎಂದು ತಿಳಿಸಿದರು.

ಕಳೆದ 18ರಂದು ರಾತ್ರಿ 8 ಗಂಟೆ ವೇಳೆ ಹರಿಹರದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುವರ್ಣಮ್ಮ ಎಂಬುವರನ್ನು ಐವರು ಮಹಿಳೆಯರು, ಓರ್ವ ಗಂಡಸು ಭಿಕ್ಷೆ ಬೇಡುವ ನೆಪದಲ್ಲಿ ತಡೆದು, ಹಲ್ಲೆ ನಡೆಸಿ, ಚಾಕು ತೋರಿಸಿ, ಬೆದರಿಸಿ 4,700 ರೂಪಾಯಿ ಕಿತ್ತುಕೊಂಡು ಪರಾರಿಯಾಗಿದ್ದರು. ದರೋಡೆ ಪ್ರಕರಣ ದಾಖಲಿಸಿಕೊಂಡ ಹರಿಹರ ನಗರ ಠಾಣೆ ಪೊಲೀಸರು ಘಟನೆ ನಡೆದ ದಿನವೇ ವೆಂಕಟರಮಣಮ್ಮ ಹಾಗೂ ಕವಿತಾಳನ್ನು ಬಂಧಿಸಿ, ಒಂದು ಸಾವಿರ ರೂ. ವಶಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು ಎಂದು ಎಎಸ್ಪಿ ತಿಳಿಸಿದರು.

ಉಳಿದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದ ತಂಡ ಆ.25ರಂದು ಹರಿಹರ ತಾಲೂಕಿನ ಮಲೇಬೆನ್ನೂರು ಬಸ್‌ ನಿಲ್ದಾಣದಲ್ಲಿ ಮೂವರನ್ನು ಬಂಧಿಸಿದೆ. ಈ ಆರೋಪಿಗಳು ಕಳ್ಳತನ, ದರೋಡೆಯಲ್ಲಿ ನಿರತರಾಗಿದ್ದು, ಬಸ್‌ ಮತ್ತು ರೈಲ್ವೆ ನಿಲ್ದಾಣ ಹಾಗೂ ಜನನಿಬಿಡ ಪ್ರದೇಶದಲ್ಲಿ
ಅತಿ ಅವಸರದಲ್ಲಿ ಬಸ್‌, ರೈಲು ಹತ್ತುವ ಮಹಿಳಾ ಪ್ರಯಾಣಿಕರನ್ನೇ ಗುರಿಯಾಗಿಟ್ಟುಕೊಳ್ಳುತ್ತಿದ್ದರು. ಆ ಪ್ರಯಾಣಿಕರ ವ್ಯಾನಿಟಿ ಬ್ಯಾಗ್‌ಗಳ ಜಿಪ್‌ ತೆಗೆದು, ಚಿನ್ನಾಭರಣ, ಹಣ ದೋಚುತ್ತಿದ್ದರು. ಎಲ್ಲರೂ ಒಂದಾಗಿ ಜನರ ಗಮನ ಬೇರೆ ಕಡೆ ಸೆಳೆದು, ಉಪಾಯದಿಂದ ಕೃತ್ಯ ಎಸಗುತ್ತಿದ್ದರು ಎಂದು ತಿಳಿಸಿದರು.

Advertisement

ಆರೋಪಿಗಳು ನಿರ್ಜನ ಪ್ರದೇಶದಲ್ಲಿ ಒಂಟಿ ಮಹಿಳೆಯರ ಮೇಲೂ ದಾಳಿ ಮಾಡಿ, ಚಿನ್ನಾಭರಣ, ಕೈಗೆ ಸಿಕ್ಕಿದ್ದನ್ನು ದೋಚುತ್ತಿದ್ದರು. ದೋಚಿದ ವಸ್ತುಗಳನ್ನು ಅದೇ ಕುಟುಂಬದ ಕೃಷ್ಣಮೂರ್ತಿ ಮಾರಾಟ ಮಾಡುತ್ತಿದ್ದ. ಅವನ ಬಂಧನಕ್ಕೆ ಬಲೆ ಬೀಸಲಾಗಿದೆ. ಎಲ್ಲರೂ ಅಲೆಮಾರಿಗಳಾಗಿದ್ದು, ಬಯಲು ಪ್ರದೇಶದಲ್ಲಿ ಟೆಂಟ್‌ ಹಾಕಿಕೊಂಡು ವಾಸ ಮಾಡುತ್ತಿದ್ದರು. ಕಳ್ಳತನ, ದರೋಡೆ ಮಾಡಿ, ಇನ್ನೊಂದು ಕಡೆಗೆ ತೆರಳುತ್ತಿದ್ದರು ಎಂದು ತಿಳಿಸಿದರು.

ವರು ದಾವಣಗೆರೆ, ಹರಿಹರ, ಮಲೇಬೆನ್ನೂರು, ಹೊನ್ನಾಳಿ, ನ್ಯಾಮತಿ, ಜಗಳೂರು, ಹಾವೇರಿ, ಬನಹಟ್ಟಿ, ಕಲಾದಗಿ, ಚಿತ್ರದುರ್ಗ ಮುಂತಾದ ಕಡೆ ಕಳ್ಳತನ ಮಾಡಿದ್ದಾರೆ. ದರೋಡೆಗೆ ಸಂಬಂಧಿಸಿದಂತೆ ಐವರು ಮಹಿಳೆಯರನ್ನು ಬಂಧಿಸಿರುವುದು ಜಿಲ್ಲೆಯಲ್ಲೇ ಇದೇ ಮೊದಲು. ಐವರನ್ನು
ಬಂಧಿಸಿರುವ ಹೊನ್ನಾಳಿ ಸಿಪಿಐ ರಮೇಶ್‌, ಹರಿಹರ ಸಿಪಿಐ  ಲಕ್ಷ್ಮಣ ನಾಯ್ಕ, ಪಿಎಸ್‌ಐ ಹನುಮಂತಪ್ಪ ಶಿರೇಹಳ್ಳಿ, ಎಎಸ್‌ಐ ಮಂಜುಳಾ, ಸಿಬ್ಬಂದಿ ಮಜೀದ್‌, ಮಂಜುಳಾ, ರಾಘವೇಂದ್ರ, ಆಂಜನೇಯ, ಸೈಯದ್‌ ಗಫಾರ್‌, ದ್ವಾರಕೀಶ್‌, ನಾಗರಾಜ್‌, ಫೈರೋಜ್‌, ರಾಜಶೇಖರ್‌, ಶಾಂತರಾಜ್‌, ರಮೇಶ್‌ ನಾಯ್ಕ, ಕುಬೇಂದ್ರ ನಾಯ್ಕ, ಹರೀಶ್‌, ದೊಡ್ಡಬಸಪ್ಪ, ತಾಂತ್ರಿಕ ವಿಭಾಗದ ರಾಮಚಂದ್ರ ಜಾಧವ್‌, ರಮೇಶ್‌ಗೆ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಗ್ರಾಮಾಂತರ ಉಪಾಧೀಕ್ಷಕ ಮಂಜುನಾಥ್‌ ಕೆ. ಗಂಗಲ್‌, ಹೊನ್ನಾಳಿ ಸಿಪಿಐ ರಮೇಶ್‌, ಹರಿಹರ ಸಿಪಿಐ ಲಕ್ಷ್ಮಣನಾಯ್ಕ, ಪಿಎಸ್‌ಐ ಹನುಮಂತಪ್ಪ ಶಿರೇಹಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next