Advertisement

ಸವಾಲಿನ ನಡುವೆಯೂ ಬಿಸಿಯೂಟ ಸಾಂಗ

10:34 PM Oct 21, 2021 | Team Udayavani |

ಮಂಗಳೂರು/ಉಡುಪಿ: ಕೊರೊನಾ ಕಾರಣದಿಂದ ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ಶಾಲಾ ಮಕ್ಕಳ ಬಿಸಿಯೂಟ ಕಾರ್ಯಕ್ರಮ ಗುರುವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಆರಂಭವಾಗಿದೆ. 6ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಮೊದಲ ದಿನದ ಮಧ್ಯಾಹ್ನದ ಬಿಸಿಯೂಟ ವಿತರಿಸಲಾಗಿದೆ.

Advertisement

ಈ ಬಾರಿ ಅಕ್ಕಿಯನ್ನು ಆಹಾರ ನಿಗಮದಿಂದ ನೀಡಲಾಗಿದ್ದು, ಉಳಿದ ಆಹಾರ ಧಾನ್ಯ, ಅಡುಗೆ ಅನಿಲ ಸೇರಿದಂತೆ ಇತರ ಪರಿಕರಗಳನ್ನು ಶಾಲೆಯವರೇ ತಾತ್ಕಾಲಿಕವಾಗಿ ಒಗ್ಗೂಡಿಸಿಕೊಳ್ಳಬೇಕಿತ್ತು.

ಶಿಕ್ಷಕರ ಕೊರತೆ, ಅನುದಾನದ ಸಮಸ್ಯೆ ಹಿನ್ನೆಲೆಯಲ್ಲಿ ಇದು ಶಿಕ್ಷಕರಿಗೆ ಸವಾಲಿನ ವಿಷಯವಾಗಿತ್ತು. ವಿಷಯ ಅರಿತ ಬಹುತೇಕ ಶಾಲೆಗಳ ಶಾಲಾಭಿವೃದ್ಧಿ ಸಮಿತಿ, ಸಂಘ-ಸಂಸ್ಥೆಯವರು, ದಾನಿಗಳು ಶಿಕ್ಷಕರ ಜತೆಗೆ ಸ್ಪಂದಿಸಿ ಬಿಸಿಯೂಟ ಯೋಜನೆ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ದೊರೆಯುವಲ್ಲಿ ಶ್ರಮಿಸಿರುವುದು ವಿಶೇಷವಾಗಿತ್ತು.

1ರಿಂದ 5ನೇ ತರಗತಿ ಮಕ್ಕಳಿಗೆ ಒಂದು ಮಗುವಿಗೆ ತಲಾ 4.97 ರೂ. ಹಾಗೂ 6ರಿಂದ 10ನೇ ತರಗತಿಯ ಒಂದು ವಿದ್ಯಾರ್ಥಿಗೆ 7.45 ರೂ. ಅಡುಗೆ ತಯಾರಿಕಾ ವೆಚ್ಚ ನಿಗದಿಪಡಿಸಲಾಗಿದೆ. ಒಟ್ಟು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ತರಕಾರಿ ಎಣ್ಣೆ, ಉಪ್ಪು, ಅಡುಗೆ ಅನಿಲ, ಸಾಂಬಾರ್‌ ಪುಡಿಯನ್ನು ಶಾಲೆಯವರೇ ಖರೀದಿಸಬೇಕಾಗಿದೆ.

ದ.ಕ.: 68,944 ಮಕ್ಕಳಿಗೆ ಊಟ :

Advertisement

ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ 1,140 ಶಾಲೆಗಳ 68,944 ವಿದ್ಯಾರ್ಥಿಗಳು ಮೊದಲ ದಿನ ಬಿಸಿಯೂಟ ಸವಿದಿದ್ದಾರೆ. ಶಾಲೆಗಳಲ್ಲೇ ಬಿಸಿಯೂಟ ತಯಾರಿಸಿ ನೀಡಿರುವುದನ್ನು ಹೊರತುಪಡಿಸಿ, ಇಸ್ಕಾನ್‌ ಸಂಸ್ಥೆಯಿಂದ 133 ಶಾಲೆಗಳಿಗೆ ಹಾಗೂ ಸುಬ್ರಹ್ಮಣ್ಯ ದೇವಸ್ಥಾನದಿಂದ ಸ್ಥಳೀಯ ಶಾಲೆಗಳಿಗೆ ಬಿಸಿಯೂಟ ಪೂರೈಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ 18,514, ಬೆಳ್ತಂಗಡಿಯಲ್ಲಿ 19,056, ಮಂಗಳೂರು 23,179, ಪುತ್ತೂರು 12,296 ಮತ್ತು ಸುಳ್ಯದಲ್ಲಿ 4,899 ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿದ್ದಾರೆ.

ಉಡುಪಿ: 32,841 ಮಕ್ಕಳಿಗೆ ಊಟ :

ಉಡುಪಿ ಜಿಲ್ಲೆಯ ಒಟ್ಟು 32,841 ವಿದ್ಯಾರ್ಥಿಗಳಿಗೆ ಗುರುವಾರ ಬಿಸಿಯೂಟ ಉಣ ಬಡಿಸಲಾಯಿತು. ಉಡುಪಿ ವಲಯದ 93 ಹಿ.ಪ್ರಾ. ಹಾಗೂ 47 ಪ್ರೌಢಶಾಲೆಗಳಲ್ಲಿ ಒಟ್ಟು 9,505 ವಿದ್ಯಾರ್ಥಿಗಳು, ಕಾರ್ಕಳ ವಲಯದಲ್ಲಿ 110 ಹಿ.ಪ್ರಾ. ಶಾಲೆ ಹಾಗೂ 38 ಪ್ರೌಢಶಾಲೆಯಲ್ಲಿ ಒಟ್ಟು 6,737 ವಿದ್ಯಾರ್ಥಿಗಳು, ಕುಂದಾಪುರ ಹಾಗೂ ಬೈಂದೂರಿನಲ್ಲಿ ಒಟ್ಟು 244 ಪ್ರೌಢ ಹಾಗೂ ಹಿ.ಪ್ರಾ. ಶಾಲೆಯಲ್ಲಿ 16,599 ವಿದ್ಯಾರ್ಥಿಗಳು ಬಿಸಿಯೂಟ ಉಂಡಿದ್ದಾರೆ.

3 ತಿಂಗಳಿಂದ  ಗೌರವಧನ ಬಂದಿಲ್ಲ :

ಕಳೆದ 3 ತಿಂಗಳಿನಿಂದ ಅಕ್ಷರ ದಾಸೋಹದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆ ಸಿಬಂದಿ, ಸಹಾ ಯಕ ಅಡುಗೆ ಸಿಬಂದಿಗೆ ಗೌರವಧನ ಪಾವತಿಯಾಗಿಲ್ಲ. ಹೀಗಾಗಿ ಕೋವಿಡ್‌ ಸಂಕಷ್ಟದ ನಡುವೆ ಗೌರವಧನ ರಹಿತವಾಗಿ ಕೆಲಸ ನಿರ್ವಹಿಸಬೇಕಾದ ಸ್ಥಿತಿ ಉಂಟಾ ಗಿರುವ ಅಂಶವು ಬೆಳಕಿಗೆ ಬಂದಿದೆ.

ಬಿಸಿಯೂಟ ಸವಿದ ಬಿಇಒ :

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ ಅವರು ಡಾ| ಶಿವರಾಮ ಕಾರಂತ ಪ್ರೌಢ ಶಾಲೆ, ಮೌಲಾನ ಆಜಾದ್‌ ಪ್ರೌಢ ಶಾಲೆ, ಪೆರ್ಲಂಪಾಡಿ ಸ.ಹಿ.ಪ್ರಾ. ಶಾಲೆಗೆ ಭೇಟಿ ನೀಡಿ ಬಿಸಿಯೂಟ ಪರಿಶೀಲಿಸಿದರು. ಪೆರ್ಲಂಪಾಡಿ ಶಾಲೆಯಲ್ಲಿ ವಿದ್ಯಾರ್ಥಿಗಳ ಜತೆಗೂಡಿ ಬಿಸಿಯೂಟ ಸವಿದರು. ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ ಅವರು ಸಂಪಾಜೆ ಶಾಲೆಗೆ ತೆರಳಿ ಬಿಸಿಯೂಟದ ಬಗ್ಗೆ ಪರಿಶೀಲಿಸಿ ವಿದ್ಯಾರ್ಥಿಗಳ ಜತೆ ಮಾಹಿತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next