ಬೀದರ್ : ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಕಣ್ಣೀರು ಹಾಕುವ ಮೂಲಕ ಔರಾದ ಕ್ಷೇತ್ರದ ವಿಜೇತ ಅಭ್ಯರ್ಥಿ, ಮಾಜಿ ಸಚಿವ ಪ್ರಭು ಚೌಹಾಣ್ ಅವರು ಆಕೋಶ ಹೊರಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರದೊಂದಿಗೆ ಮಾತನಾಡಿದ ಚವ್ಹಾಣ, ನನ್ನನ್ನು ಸೋಲಿಸಲು ನಮ್ಮ ಪಕ್ಷದವೇ ಆಗಿರುವ ಕೇಂದ್ರ ಸಚಿವ ಭಗವಂತ ಖೂಬಾ ‘ಬಿ’ ಟೀಮ್ ಕಟ್ಟಿಕೊಂಡು ಕುತಂತ್ರ ಮಾಡಿದರು. ಚುನಾವಣೆ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸೇರಿ ನೂರಾರು ಮುಖಂಡರು ಬಿಜೆಪಿ ತೊರೆದು, ನನ್ನ ಸೋಲಿಸಲು ಸಾಕಷ್ಟು ಷಡ್ಯಂತ್ರ ನಡೆಸಿದರು. ಆದರೆ, ಕೊನೆಗೂ ಕ್ಷೇತ್ರದ ಮತದಾರರು ನನ್ನನ್ನು ಕೈಹಿಡಿದಿದ್ದಾರೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಖೂಬಾ ಗೆಲುವಿಗಾಗಿ ಶ್ರಮಿಸಿದೆ. ಆದರೆ, ಅವರು ನನಗೆ ದೋಖಾ ಮಾಡಿದರು. ನಾನೇನು ಅನ್ಯಾಯ ಮಾಡಿದ್ದೆ? ನನ್ನನ್ನು ಸೋಲಿಸಲು ಕಾಂಗ್ರೆಸ್‌ಗೆ ಫಂಡಿಂಗ್ ಮಾಡಲಾಗಿದೆ ಎನ್ನಲಾಗುತ್ತಿದೆ. ಪಕ್ಷಕ್ಕೆ ಮೋಸ ಮಾಡಿದರೆ ತಾಯಿಗೆ ದ್ರೋಹ ಬಗೆದಂತೆ, ಅವರಿಗೆ ದೇವರು ನೋಡಿಕೊಳ್ಳುತ್ತಾನೆ ಎಂದು ಬಿಕ್ಕಿ ಬಿಕ್ಕಿ ಅತ್ತ ಚವ್ಹಾಣ, ಸಚಿವ ಖೂಬಾ ಕುತಂತ್ರ ಕುರಿತು ಪಕ್ಷದ ವರಿಷ್ಠರಿಗೆ ದೂರು ಕೊಡುತ್ತೇನೆ ಎಂದರು.