ಮುಂಬೈ:ಯಾವುದೇ ಅಪರಾಧ ಪ್ರಕರಣಗಳ ಭೇದಿಸಿದ ಬಳಿಕ ಜೈಲಿನಲ್ಲಿ ಪೊಲೀಸರ ಲಾಠಿ ಏಟಿಗೆ ಅಪರಾಧಿಗಳು ರಾಗ ಪಾಡುವುದೋ, ಇಲ್ಲ ತಪ್ಪೊಪ್ಪಿಕೊಳ್ಳುವುದನ್ನೋ ನೋಡಿರುತ್ತೀರಿ. ಆದರೆ, ಮಹಾರಾಷ್ಟ್ರದ ಠಾಣೆಯೊಂದು ಈ ಕಲ್ಪನೆಗೆ ತದ್ವಿರುದ್ಧವಾಗಿದ್ದು, ಇಲ್ಲಿನ ಪೊಲೀಸರು ಪ್ರಕರಣ ಭೇದಿಸಿದ ಬಳಿಕ ಸಂಗೀತ ಕಛೇರಿಯನ್ನೇ ನಡೆಸುತ್ತಿದ್ದಾರೆ..
ಆಶ್ಚರ್ಯ ಎಂದೆನಿಸಿದರೂ, ಇದು ಸತ್ಯ ! ಪುಣೆ ಕಂಟೋನ್ಮೆಂಟ್ ಏರಿಯಾದ ಪೊಲೀಸ್ ಠಾಣೆಯಲ್ಲಿ, ಅಪರಾಧ ಪ್ರಕರಣಗಳನ್ನು ಭೇದಿಸಿ, ಠಾಣೆಗೆ ಹಿಂದಿರುಗಿದ ಬಳಿಕ ಪೊಲೀಸರು ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ, ಠಾಣೆಯ ಎಲ್ಲ ಸಿಬ್ಬಂದಿ ಸೇರಿ ಹಾಡು ಹಾಡುವ ಪರಿಪಾಠವನ್ನ ರೂಢಿಸಿಕೊಂಡಿದ್ದಾರೆ.
ಇದಕ್ಕಾಗಿ ಠಾಣೆಯಲ್ಲೇ ಮ್ಯೂಸಿಕ್ ರೂಂ ಕೂಡ ಏರ್ಪಾಡು ಮಾಡಿಕೊಂಡಿದ್ದು, ಕರೋಕೆ ಸಿಸ್ಟಮ್, ಸ್ಪೀಕರ್, ಸೌಂಡ್ ಮಿಕ್ಸರ್‌ಗಳನ್ನೂ ಇಟ್ಟುಕೊಳ್ಳಲಾಗಿದೆ. ತೀರಾ ಒತ್ತಡದ ದಿನಗಳಲ್ಲಿ ರಾತ್ರಿ 7ರ ಬಳಿಕ ಸಿಬ್ಬಂದಿ ಹಾಡನ್ನು ಹಾಡಿ, ತಮ್ಮ ಒತ್ತಡವನ್ನ ದೂರ ಮಾಡಿಕೊಳ್ತಿದ್ದಾರೆ. ಅಲ್ಲದೇ, ಈ ಉಪಕ್ರಮದಿಂದಾಗಿ ಠಾಣೆಯ ಸಿಬ್ಬಂದಿಯ ನಡುವಿನ ಬಾಂಧವ್ಯವೂ ಹೆಚ್ಚಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಅಶೋಖ್ ಕದಮ್ ಹೇಳಿದ್ದಾರೆ.