Advertisement

ಸುಶ್ಮಾ ಎಚ್ಚರಿಕೆ ಬಳಿಕ ನೆಲಹಾಸನ್ನು ವೆಬ್‌ಸೈಟಿಂದ ತೆಗೆದ ಅಮೆಜಾನ್‌

11:05 AM Jan 12, 2017 | Team Udayavani |

ವಾಷಿಂಗ್ಟನ್‌ /ಒಟಾವಾ : ಭಾರತದ ಧ್ವಜದ ಚಿತ್ರವಿರುವ ನೆಲಹಾಸು ಮಾರಾಟ ಮಾಡುತ್ತಿರುವ ಬಗ್ಗೆ ಅಮೆಜಾನ್‌ ಕೆನಡಾಗೆ ಭಾರತದ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದ ಬಳಿಕ ಅಮೆಜಾನ್‌ ಇದೀಗ ತನ್ನ  ಇ-ಕಾಮರ್ಸ್‌ ವೆಬ್‌ಸೈಟಿನಿಂದ ಅದನ್ನು ತೆಗೆದು ಹಾಕಿದೆ. 

Advertisement

ಸುಶ್ಮಾ ಸ್ವರಾಜ್‌ ಅವರು ನಿನ್ನೆಯಷ್ಟೇ ಟ್ವಿಟರ್‌ನಲ್ಲಿ ಅಮೆಜಾನ್‌ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಮೆಜಾನ್‌ ಈ ಬಗ್ಗೆ ಕ್ಷಮೆ ಕೋರಬೇಕೆಂದೂ ಇಲ್ಲದಿದ್ದರೆ ಅಮೆಜಾನ್‌ನ ಅಧಿಕಾರಿಗಳಿಗೆ ಭಾರತೀಯ ವೀಸಾ ನೀಡಲಾಗದು ಎಂದು ಬೆದರಿಕೆ ಹಾಕಿದ್ದರು. 

ಅಮೆಜಾನ್‌ನ ಸಿಯಾಟಲ್‌ನಲ್ಲಿರುವ ವಕ್ತಾರರೋರ್ವರು “ದಿ ವಾಷಿಂಗ್ಟನ್‌ ಪೋಸ್ಟ್‌’ ಅನ್ನು ಸಂಪರ್ಕಿಸಿ ವಿವಾದಾತ್ಮಕ ನೆಲಹಾಸನ್ನು ತಮ್ಮ ಇ-ಕಾಮರ್ಸ್‌ ವೆಬ್‌ಸೈಟಿನಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದರು. 

ಅಮೆಜಾನ್‌ನ ಕೆನಡಾ ವೆಬ್‌ಸೈಟ್‌ನಲ್ಲಿ ಭಾರತದ ಧ್ವಜದ ಚಿತ್ರವಿರುವ ನೆಲಹಾಸನ್ನು ಮಾರಾಟ ಮಾಡುತ್ತಿರುವ ಬಗ್ಗೆ ಅತುಲ್‌ ಭೋಬೆ ಎಂಬುವವರು ಟ್ವೀಟ್‌ ಮಾಡಿ ಸುಷ್ಮಾ ಅವರಿಗೆ ದೂರು ನೀಡಿದ್ದರು. ಅಮೆಜಾನ್‌ಗೆ ಮರುಟ್ವೀಟ್‌ ಮಾಡಿರುವ ಸುಷ್ಮಾ, ಸರಕನ್ನು ಮಾರಾಟ ತಾಣದಿಂದ ವಾಪಸ್‌ ತೆಗೆಯುವಂತೆ ಮತ್ತು ಬೇಷರತ್‌ ಕ್ಷಮೆಯಾಚಿಸುವಂತೆ ಹೇಳಿದ್ದರು. 

ಜೊತೆಗೆ ಇದನ್ನು ಪಾಲಿಸದೇ ಇದ್ದಲ್ಲಿ ಭಾರತಕ್ಕೆ ಆಗಮಿಸುವ ಅಮೆಜಾನ್‌ ವಿದೇಶಿ ಅಧಿಕಾರಿಗಳಿಗೆ ವೀಸಾ ನಿಷೇಧಿಸುವ ಬಗ್ಗೆ ಎಚ್ಚರಿಸಿದ್ದಾರೆ. ಪ್ರಕರಣ ಬಗ್ಗೆ ಕೆನಡಾದ ಭಾರತೀಯ ಹೈಕಮಿಷನ್‌ ಗಮನಹರಿಸುವಂತೆ ಅವರು ಸೂಚಿಸಿರುವುದು ವೈರಲ್‌ ಆಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next