Advertisement

ಜೆಫ್ ಬಗ್ಗೆ ಬಿಜೆಪಿ ಮುನಿಸು ; ಸರಕಾರದ ವಿರುದ್ಧ ಸುದ್ದಿ ಪ್ರಕಟಕ್ಕೆ ಆಕ್ರೋಶ

10:12 AM Jan 19, 2020 | Hari Prasad |

ಹೊಸದಿಲ್ಲಿ: ಒಂದು ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡುವ ಮೂಲಕ ಅಮೆಜಾನ್‌ ಭಾರತಕ್ಕೆ ಯಾವುದೇ ಅನುಕೂಲವನ್ನು ಕಲ್ಪಿಸುತ್ತಿಲ್ಲ ಎಂದು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಹೇಳಿಕೆ ನೀಡಿದ ಬೆನ್ನಲ್ಲೇ ಬಿಜೆಪಿ ವಿದೇಶಾಂಗ ವ್ಯವಹಾರಗಳ ವಿಭಾಗದ ಮುಖ್ಯಸ್ಥ ವಿಜಯ್‌ ಚೌತೆವಾಲಾ ಅವರೂ ಅಮೆಜಾನ್‌ ಸಿಇಒ ಜೆಫ್ ಬೆಝೋಸ್‌ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

Advertisement

ಜೆಫ್ ಮಾಲಕತ್ವದ ‘ವಾಷಿಂಗ್ಟನ್‌ ಪೋಸ್ಟ್‌’ ನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ ಎನ್ನುವುದೇ ಇವರ ಆಕ್ರೋಶಕ್ಕೆ ಕಾರಣ. ‘ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯ ಸಂಪಾದಕೀಯ ನೀತಿಯು ತಾರತಮ್ಯದಿಂದ ಕೂಡಿದೆ’ ಎಂದು ವಿಜಯ್‌ ಆರೋಪಿಸಿದ್ದಾರೆ. ಇತ್ತೀಚೆಗೆ ಈ ಪತ್ರಿಕೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಲೇಖನವೂ ಪ್ರಕಟವಾಗಿತ್ತು.

ಭೇಟಿಗೆ ನಿರಾಕರಣೆ
ಒಂದು ತಿಂಗಳ ಹಿಂದಷ್ಟೇ, ಜೆಫ್ ಅವರ ಭಾರತ ಪ್ರವಾಸ ವೇಳೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಸಮಯ ಕೋರಲಾಗಿತ್ತು. ಆದರೆ, ಪ್ರಧಾನಿ ಕಾರ್ಯಾಲಯವು ದಿನಾಂಕ ನಿಗದಿಗೆ ನಿರಾಕರಿಸಿತ್ತು ಎಂದು ಮೂಲಗಳು ಹೇಳಿವೆ.
10 ಲಕ್ಷ ಉದ್ಯೋಗ: ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಜೆಫ್ ಅವರು 2025ರೊಳಗೆ ಭಾರತದಲ್ಲಿ ಹೆಚ್ಚುವರಿ 10 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದಾರೆ.

ಮೂರು ದಿನಗಳ ಪ್ರವಾಸ ಮುಗಿಸಿ ಅಮೆರಿಕಕ್ಕೆ ಶುಕ್ರವಾರ ವಾಪಸಾದ ಜೆಫ್, ಅಮೆಜಾನ್‌.ಇನ್‌ನಲ್ಲಿ ಪ್ರಕಟಿಸಿದ ಪತ್ರದಲ್ಲಿ ಈ ವಿಚಾರ ತಿಳಿಸಿದ್ದಾರೆ. ಜತೆಗೆ, ನಾನು ಪ್ರತಿ ಬಾರಿ ಭಾರತಕ್ಕೆ ಹೋಗಿ ಬಂದಾಗಲೂ ನನಗೆ ಭಾರತ ದೊಂದಿಗಿನ ಪ್ರೀತಿ ಹೆಚ್ಚುತ್ತಲೇ ಇರುತ್ತದೆ. ಭಾರತೀಯರ ಸಾಮರ್ಥ್ಯ, ನಾವೀನ್ಯತೆ ನನಗೆ ಸ್ಫೂರ್ತಿ ಎಂದೂ ಅವರು ಪತ್ರದಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next