ಹೊಸದಿಲ್ಲಿ: ನಕಲಿ ರಸಗೊಬ್ಬರ ಉತ್ಪನ್ನಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಸಗೊಬ್ಬರ ಪ್ಯಾಕೆಟ್‌ಗಳ ಮೇಲೆ ಬಾರ್‌ಕೋಡ್ ಅಥವಾ ಕ್ಯುಆರ್ ಕೋಡ್ ಕಡ್ಡಾಯಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿ ಬರುವ ಔಷಧೋದ್ಯಮ ಇಲಾಖೆ ಈ ಕುರಿತು ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದು, ಇದರ ಪ್ರಕಾರ 2023ರ ಆ. 1ರಿಂದ ಮಾರಾಟ ಮಾಡುವ ಎಲ್ಲ ರಸಗೊಬ್ಬರಗಳ ಪ್ಯಾಕೆಟ್‌ಗಳ ಮೇಲೆ ಬಾರ್‌ಕೋಡ್ ಅಥವಾ ಕ್ಯುಆರ್ ಕೋಡ್ ಕಡ್ಡಾಯವಾಗಿದೆ.
ಈ ಕ್ರಮವು ನಕಲಿ ರಸಗೊಬ್ಬರ ತಡೆಯುವ ಮೂಲಕ ಕೃಷಿಕರಿಗೆ ಸಹಕಾರಿಯಾಗಿದೆ. ನಕಲಿ ರಸಗೊಬ್ಬರ ಹಾವಳಿಯಿಂದಾಗಿ ಕೃಷಿ ಉತ್ಪನ್ನಗಳ ಇಳುವರಿ ಕಡಿಮೆಯಾಗುತ್ತದೆ. ಈ ಮೂಲಕ ರೈತರ ಆದಾಯ ಕುಸಿಯುತ್ತದೆ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರಕಾರ ಸಿಂಗಲ್ ಸೂಪರ್ ಫಾಸ್ಪೇಟ್ (ಎಸ್‌ಎಸ್‌ಪಿ) ರಸಗೊಬ್ಬರಕ್ಕೆ ಬಾರ್‌ಕೋಡಿಂಗ್ ಕಡ್ಡಾಯಗೊಳಿಸಿದೆ.
ಎಸ್‌ಎಸ್‌ಪಿ ಒಂದು ಪ್ರಮುಖ ರಸಗೊಬ್ಬರವಾಗಿದ್ದು, ಸಸ್ಯಗಳಿಗೆ ಅಗತ್ಯವಿರುವ ಮೂರು ಪ್ರಮುಖ ಪೋಷಕಾಂಶಗಳಾದ ಫಾಸ್ಫರಸ್, ಸಲ#ರ್ ಮತ್ತು ಕ್ಯಾಲ್ಸಿಯಂ ಜತೆಗೆ ಅನೇಕ ಸೂಕ್ಷ್ಮ ಪೋಷಕಾಂಶಗಳನ್ನು ಒಳಗೊಂಡಿದೆ.
Related Articles
ರಸಗೊಬ್ಬರ ಪ್ಯಾಕೆಟ್‌ಗಳಲ್ಲಿರುವ ಕ್ಯುಆರ್ ಕೋಡ್ ಅನನ್ಯ ಉತ್ಪನ್ನ ಗುರುತಿನ ಕೋಡ್, ಬ್ರ್ಯಾಂಡ್ ಹೆಸರು, ತಯಾರಕರ ಹೆಸರು ಮತ್ತು ವಿಳಾಸ, ಬ್ಯಾಚ್ ಸಂಖ್ಯೆ, ತಯಾರಿಕೆಯ ದಿನಾಂಕ, ಮುಕ್ತಾಯ ದಿನಾಂಕ ಮತ್ತು ಉತ್ಪಾದನ ಪರವಾನಗಿ ಸಂಖ್ಯೆಯನ್ನು ಒಳಗೊಂಡಿರುತ್ತದೆ.
ಕೇಂದ್ರ ಆರೋಗ್ಯ, ಔಷಧ ಮತ್ತು ರಸಗೊಬ್ಬರ ಸಚಿವ ಮನಸುಖ ಮಾಂಡವಿಯಾ ಅವರ ಮುತುವರ್ಜಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಔಷಧ ವಲಯದಲ್ಲಿ ಈಗಾಗಲೇ ಔಷಧಗಳ ಪ್ಯಾಕೆಟ್‌ಗಳ ಮೇಲೆ ಕ್ಯುಆರ್ ಕೋಡ್ ಕಡ್ಡಾಯಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಅದೇ ರೀತಿ ರಸಗೊಬ್ಬರಗಳ ಪ್ಯಾಕೆಟ್‌ಗಳ ಮೇಲೂ ಕ್ಯುಆರ್ ಕೋಡ್ ಕಡ್ಡಾಯಕ್ಕೆ ಸಚಿವರು ಸಲಹೆ ನೀಡಿದ್ದರು ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇಶದಲ್ಲಿ ಪ್ರತೀ ವರ್ಷ 56 ಲಕ್ಷ ಟನ್ ಎಸ್‌ಎಸ್‌ಪಿ ಉತ್ಪಾದಿಸಲಾಗುತ್ತದೆ. ಇದು ಡಿಎಪಿ (ಡಿ-ಅಮೋನಿಯಂ ಫಾಸ್ಪೇಟ್) ರಸಗೊಬ್ಬರ ಆಮದು ಮೇಲಿನ ಅತಿಯಾದ ಅವಲಂಬನೆಯನ್ನು ತಗ್ಗಿಸಿದೆ.