Advertisement
ಡಿ.22ರ ಶುಕ್ರವಾರದಂದು ಮರಾಠಿ ನಟ ಅಂಕುಶ್ ಚೌಧರಿ ಅಭಿನಯದ ಸಿನೆಮಾ “ದೇವಾ’ ತೆರೆಗೆ ಅಪ್ಪಳಿಸಲಿದ್ದು ಥಿಯೇಟರ್‌ಗಳಲ್ಲಿ ಪ್ರೈಮ್ ಟೈಮ್‌ನಲ್ಲಿ ಈ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡದೇ ಹೋದಲ್ಲಿ ಸಲ್ಮಾನ್ ಅಭಿನಯದ ಸಿನೆಮಾದ ಪ್ರದರ್ಶನಕ್ಕೆ ತಡೆಯೊಡ್ಡುವುದಾಗಿ ಎಂಎನ್‌ಎಸ್‌ನ ಸಿನೇಮಾ ಘಟಕದ ಮುಖ್ಯಸ್ಥರಾದ ಅಮೇಯ ಖೋಪ್ಕರ್ ಅವರು ಸಿನೆಮಾ ಪ್ರದರ್ಶಕರಿಗೆ ಬರೆದಿರುವ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.
Related Articles
ಇದೇ ವಿಚಾರವಾಗಿ ಅಮೇಯ ಖೋಪ್ಕರ್ ಅವರು ರಾಜ್ಯದ ಸಂಸ್ಕೃತಿ ಸಚಿವ ವಿನೋದ್ ತಾಬ್ಡೆ ಅವರಿಗೂ ಪತ್ರವೊಂದನ್ನು ಬರೆದಿದ್ದು ರಾಜ್ಯ ಸರಕಾರ ಮರಾಠಿ ಸಿನೆಮಾ ನಿರ್ಮಾಪಕರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಸರಕಾರ ಯಾವುದೇ ಕ್ರಮ ಕೈಗೊಳ್ಳದೇ ಹೋದಲ್ಲಿ ಎಂಎನ್‌ಎಸ್ “ಟೈಗರ್ ಜಿಂದಾ ಹೈ’ ಚಿತ್ರದ ನಿರ್ಮಾಪಕರ ವಿರುದ್ಧ ತನ್ನದೇ ಶೈಲಿಯಲ್ಲಿ ಪ್ರತಿಭಟನೆ ನಡೆಸಲಿದೆ ಎಂದವರು ಎಚ್ಚರಿಕೆ ನೀಡಿದ್ದಾರೆ.
Advertisement
ಥಿಯೇಟರ್‌ಗಳಲ್ಲಿ ಪ್ರೈಮ್ ಟೈಮ್‌ನಲ್ಲಿ ಮರಾಠಿ ಸಿನೆಮಾದ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಸರಕಾರ ಈಗಾಗಲೇ ನಿಯಮಾವಳಿಯನ್ನು ರೂಪಿಸಿದ್ದು ಈ ನಿಯಾಮವಳಿಯನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದು ಸರಕಾರದ ಜವಾಬ್ದಾರಿಯಾಗಿದೆ ಎಂದು ಎಂಎನ್‌ಎಸ್‌ನ ನಾಯಕರೋರ್ವರು ತಿಳಿಸಿದರು.
ವರ್ಷದ ಕೊನೆಯಲ್ಲಿ ಸಲ್ಮಾನ್ ಅಭಿನಯದ ಸಿನೆಮಾ ಬಿಡುಗಡೆಗೊಳ್ಳುತ್ತಿರುವುದು ಥಿಯೇಟರ್‌ಗಳ ಮಾಲಕರಲ್ಲಿ ಹೊಸ ಆಶಾವಾದವನ್ನು ಮೂಡಿಸಿದೆ. ಸಲ್ಮಾನ್ ಅಭಿನಯದ ಸಿನೆಮಾ ಬಿಡುಗಡೆಯಾದ ಮೊದಲ ಮೂರು ದಿನಗಳ ಅವಧಿಯಲ್ಲಿ ಥಿಯೇಟರ್‌ಗಳಲ್ಲಿ ಗರಿಷ್ಠ ಆದಾಯ ಸಂಗ್ರಹವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಲ್ಮಾನ್ ಅಭಿನಯದ ಸಿನೆಮಾವನ್ನು ಪ್ರದರ್ಶಿಸಲು ಅವಕಾಶ ನೀಡದಿರುವ ಎಂಎನ್‌ಎಸ್‌ನ ಬೆದರಿಕೆ ಸರಿಯಲ್ಲ. ಅಲ್ಲದೆ ಕಳೆದ 2-3ತಿಂಗಳುಗಳಿಂದೀಚೆಗೆ ಯಾವೊಂದೂ ಚಲನಚಿತ್ರವೂ ಥಿಯೇಟರ್‌ಗಳಿಗೆ ಉತ್ತಮ ಆದಾಯವನ್ನು ತಂದುಕೊಟ್ಟಿಲ್ಲ.
ಬಲುನಿರೀಕ್ಷಿತ “ಪದ್ಮಾವತಿ’ ಸಿನೇಮಾ ಡಿ.1ರಂದು ಬಿಡುಗಡೆಗೊಳ್ಳುವ ನಿರೀಕ್ಷೆ ಇತ್ತಾದರೂ ಸಿನೆಮಾ ವಿವಾದದಲ್ಲಿ ಸಿಲುಕಿದ ಪರಿಣಾಮ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಲ್ಮಾನ್ ಖಾನ್ ಅಭಿನಯದ ಸಿನೆಮಾ ಪ್ರದರ್ಶನಕ್ಕೆ ತಡೆಯೊಡ್ಡುವ ಎಂಎನ್‌ಎಸ್ ಬೆದರಿಕೆ ಥಿಯೇಟರ್‌ಗಳ ಮಟ್ಟಿಗೆ ಆತಂಕಕಾರಿ ಬೆಳವಣಿಗೆಯಾಗಿದೆ. “ಟೈಗರ್ ಜಿಂದಾ ಹೈ’ ಸಿನೆಮಾವನ್ನು ಪ್ರದರ್ಶಿಸಿದಲ್ಲಿ ಹಿಂಸಾಚಾರ ನಡೆಸುವ ಎಂಎನ್‌ಎಸ್ ಬೆದರಿಕೆ ಕುರಿತಂತೆ ಪೊಲೀಸರು ಮತ್ತು ರಾಜ್ಯ ಸರಕಾರ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಮುಂಬಯಿ ಉಪನಗರದ ಥಿಯೇಟರ್ ಒಂದರ ಮೆನೇಜರ್ ಓರ್ವರು ಹೇಳಿದರು.