Advertisement

Chikkaballapura: ಮುಂಗಾರು ಬೆನ್ನಲ್ಲೇ ಹೈನೋದ್ಯಮಕ್ಕೆ ಜೀವಕಳೆ

12:56 PM Jun 19, 2024 | Team Udayavani |

ಚಿಕ್ಕಬಳ್ಳಾಪುರ: ಬೇಸಿಗೆ ಕಳೆದು ಮುಂಗಾರು ಶುರುವಾಗುತ್ತಿದ್ದಂತೆ ಅವಿಭಜಿತ ಕೋಚಿಕ್ಕಬಳ್ಳಾಪುರ ಜಿಲ್ಲೆಗಳ ಜನರ ಜೀವನಾಡಿ ಆಗಿರುವ ಹೈನೋದ್ಯಮಕ್ಕೆ ಅಂತೂ ಜೀವ ಕಳೆ ಬಂದಿದೆ. ಕಳೆದ ವರ್ಷ ಮಳೆ ಬೆಳೆ ಇಲ್ಲದೇ ಹೈನೋದ್ಯಮದ ಮೇಲೆ ಬರದ ಕರಿನೆರಳಿನ ದಟ್ಟ ಪ್ರಭಾವ ಆವರಿಸಿ ಕ್ಷೀರ ಉತ್ಪಾದನೆ ಕ್ಷೀಣಿಸಿತ್ತು.

Advertisement

ಜಿಲ್ಲಾದ್ಯಂತ ಮುಂಗಾರು ಮಳೆ ಶುರುವಾಗಿರುವ ಬೆನ್ನಲ್ಲೇ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಾಲು ಉತ್ಪಾದನೆಯಲ್ಲಿ ಭಾರೀ ಹೆಚ್ಚಳ ಕಂಡಿದ್ದು , ಕೇವಲ ಒಂದೂವರೆ ತಿಂಗಳಲ್ಲಿ 2.50 ಲಕ್ಷ ಲೀಟರ್‌ನಷ್ಟು ಹಾಲು ಉತ್ಪಾದನೆ ಎರಡು ಜಿಲ್ಲೆಗಳಲ್ಲಿ ಹೆಚ್ಚಳ ಕಾಣುವ ಮೂಲಕ ಹೈನೋದ್ಯಮದಲ್ಲಿ ತೊಡಗಿಸಿಕೊಂಡಿರುವ ರೈತರಲ್ಲಿ ಸಂತಸ ಮೂಡಿಸಿದೆ.

ಹೈನೋದ್ಯಮದ ಮೇಲೆ ಅವಲಂಬಿತ: ಹೇಳಿ ಕೇಳಿ ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆ ದಶಕಗಳಿಂದ ಹೈನೋದ್ಯಮದ ಮೇಲೆಯೆ ಹೆಚ್ಚು ಅವಲಂಬಿತವಾಗಿದೆ. ಲಕ್ಷಾಂತರ ಕುಟುಂಬಗಳು ಹಾಲು ಉತ್ಪಾದನೆಯಲ್ಲಿ ತೊಡಗಿಸಿ ಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿವೆ.

ಆದರೆ ಬೇಸಿಗೆ ಪರಿಣಾಮ ಹಲವು ತಿಂಗಳಿಂದ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆಯಲ್ಲಿ ಭಾರೀ ಕುಸಿತ ಕಂಡಿತ್ತು. ಆದರೆ ಈಗ ಮತ್ತೆ ಮುಂಗಾರು ಶುರುವಾದ ಕೂಡಲೇ ಎರಡು ಜಿಲ್ಲೆಗಳಲ್ಲಿ ಹೈನುಗಾರಿಕೆ ಚೇತರಿಕೆ ಹಾದಿ ಹಿಡಿದಿದ್ದು, ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಸಮಾಧಾನ ತಂದಿದೆ. ಇಡೀ ರಾಜ್ಯದಲ್ಲಿಯೆ ಕೋಚಿಮುಲ್‌ ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರತಿ ವರ್ಷ ಕೋಟ್ಯಂತರ ರೂ. ಆರ್ಥಿಕ ವಹಿವಾಟು ನಡೆಸುವ ಒಕ್ಕೂಟ ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮೇಗಾ ಡೇರಿಗಳನ್ನು ಹೊಂದಿದೆ. ಎರಡು ಜಿಲ್ಲೆಗಳಲ್ಲಿ 1,928 ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಹೊಂದಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 978 ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಹೊಂದಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಹಾಲು ಉತ್ಪಾದಕ ರೈತರು ಇದ್ದಾರೆ.

ಎರಡು ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿ ಇಲ್ಲದ ಪರಿಣಾಮ ರೈತರು ತಮ್ಮ ಬದುಕಿನ ಬಂಡಿ ನಡೆಸಲು ಹೈನುಗಾರಿಕೆಯನ್ನು ಹೆಚ್ಚು ಅವಲಂಬಿಸಿದ್ದಾರೆ. ಸದ್ಯ ಮಳೆಗಾಲ ಶುರುವಾಗಿರುವ ಕಾರಣ ರೈತರಿಗೆ ಹಸಿರು ಮೇವು, ಜಾನುವಾರುಗಳಿಗೆ ಅಗತ್ಯ ಕುಡಿಯುವ ನೀರು ಲಭ್ಯವಾಗುತ್ತಿರುವುದರಿಂದ ಹಾಲು ಉತ್ಪಾದನೆಯಲ್ಲಿ ಏರಿಕೆ ಕಂಡು ರೈತರಿಗೆ ಆರ್ಥಿಕವಾಗಿ ಸಂಸಾರದ ನೊಗ ಹೊರಲು ಸಹಾಯಕವಾಗಿ ಹೈನೋದ್ಯಮ ನಿಲ್ಲುವಂತಾಗಿದೆ.

Advertisement

ಮೇವು ಬೆಳೆಯಲು ಪ್ರೋತ್ಸಾಹ ಧನ: ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರೈತರಿಗೆ ಪ್ರತಿ ತಿಂಗಳಲ್ಲಿ 15 ದಿನಕ್ಕೊಮ್ಮೆ ಹಾಲು ಪೂರೈಸುವ ರೈತರಿಗೆ ಬಡಾವಡೆ ಮಾಡುತ್ತಿದೆ. ಜೊತೆಗೆ ಕಳೆದ ಒಂದು ವರ್ಷದಿಂದ ಬೆಲೆ ಕಡಿಮೆ ಮಾಡದ ಪರಿಣಾಮ ಎರಡು ಜಿಲ್ಲೆಗಳಲ್ಲಿ ಹಾಲು ಉತ್ಪಾದನೆಯಲ್ಲಿ ಹೆಚ್ಚಳಕ್ಕೆ ಪ್ರಮುಖ ಎಂದು ಒಕ್ಕೂಟದ ಅಧಿಕಾರಿಗಳು ಹೇಳುತ್ತಿದ್ದಾರೆ. ಅಲ್ಲದೇ ಬೇಸಿಗೆಯಲ್ಲಿ ಪ್ರತಿ ರೈತನಿಗೂ ಮೇವು ಬೆಳೆಯಲು 3,000 ರೂ. ಪ್ರೋತ್ಸಾಹ ಧನ ಕೊಟ್ಟಿದ್ದು, ಒಕ್ಕೂಟದಿಂದ ಸಕಾಲದಲ್ಲಿ ರೈತರಿಗೆ ಪಶು ವೈದ್ಯಕೀಯ ಸೇವೆ ಒದಗಿಸುತ್ತಿರುವುದರಿಂದಲೂ ಕೂಡ ಹಾಲು ಉತ್ಪಾದನೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಹಾಲಿನ ಬೆಲೆ ಇಳಿಕೆ ಮಾಡದೇ ಇರುವುದರ ಜೊತೆಗೆ ಬೇಸಿಗೆಯಲ್ಲಿ ಪ್ರತಿ ರೈತನಿಗೆ ಮೇವು ಬೆಳೆಯಲು ಒಕ್ಕೂಟದಿಂದ 3,000 ರೂ. ಪ್ರೋತ್ಸಾಹ ಧನ ನೀಡಿದ್ದು, ವೈದ್ಯಕೀಯ ಸೇವೆ, ತಾಂತ್ರಿಕ ಸೇವೆ ಸಕಾಲದಲ್ಲಿ ನೀಡಿದ್ದರ ಜೊತೆಗೆ ಮಳೆಗಾಲ ಶುರುವಾಗಿದ್ದರಿಂದ ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಒಂದೇ ತಿಂಗಳಲ್ಲಿ ಸರಿ ಸುಮಾರು 2.50 ಲಕ್ಷ ಲೀಟರ್‌ ಹಾಲಿನ ಉತ್ಪಾದನೆ ಹೆಚ್ಚಾಗಿದೆ. – ಶ್ರೀನಿವಾಸಗೌಡ, ವ್ಯವಸ್ಥಾಪಕರು, ಕೋಚಿಮುಲ್‌

 

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next