Advertisement

ರಿಸಲ್ಟ್ ಬಳಿಕ ಕೈ ಉಸ್ತುವಾರಿ ಬದಲು?

10:23 AM Dec 08, 2019 | mahesh |

ಬೆಂಗಳೂರು: ಉಪ ಚುನಾವಣೆ ಫ‌ಲಿತಾಂಶದ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗುವ ಸಾಧ್ಯತೆಯಿದ್ದು, ಪ್ರಮುಖವಾಗಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಬದಲಾವಣೆಯಾಗುವ ಬಗ್ಗೆ ರಾಜ್ಯ ಕಾಂಗ್ರೆಸ್‌ನಲ್ಲಿ ಚರ್ಚೆ ನಡೆಯುತ್ತಿದೆ.
ಕಳೆದ ನಾಲ್ಕು ವರ್ಷ ಗಳಿಂದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯಾಗಿ ಕೆ.ಸಿ. ವೇಣುಗೋಪಾಲ್‌ ಕಾರ್ಯನಿರ್ವಹಿಸಿದ್ದಾರೆ.

Advertisement

ರಾಜ್ಯದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಅವರನ್ನು ಬದಲಾಯಿಸು ವಂತೆ ರಾಜ್ಯ ಕಾಂಗ್ರೆಸ್‌ ನಾಯಕರು ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಜತೆಗೆ, ಸ್ವತಃ ವೇಣು ಗೋಪಾಲ್‌ ಅವರೇ ಉಸ್ತುವಾರಿ ಜವಾಬ್ದಾರಿಯಿಂದ ಬಿಡುಗಡೆಗೆ ಮನವಿ
ಮಾಡಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್‌ನ ಒಂದು ಬಣಕ್ಕೆ ವೇಣು ಗೋಪಾಲ್‌ ಬದಲಾವಣೆಯಾದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ಮಣಿಸಬ ಹುದೆಂಬ ಲೆಕ್ಕಾಚಾರವಿದೆ. ವೇಣುಗೋಪಾಲ್‌ ಅವರು ಸಿದ್ದರಾಮಯ್ಯ “ತಾಳಕ್ಕೆ’ ಕುಣಿಯುತ್ತಾರೆಂಬ
ಆರೋಪ ಆ ಗುಂಪಿನಿಂದ ಸದಾ ಕೇಳಿ ಬಂದಿತ್ತು.

ಕೇರಳ ಸಿಎಂ ಆಗುವ ಬಯಕೆ: ಮುಂದಿನ ವರ್ಷ ಕೇರಳ ವಿಧಾನಸಭೆಗೆ ಚುನಾವಣೆ ನಡೆಯುವುದರಿಂದ
ರಾಜ್ಯಮಟ್ಟದಲ್ಲಿ ಪಕ್ಷದ ನಾಯಕತ್ವ ವಹಿಸಿಕೊಂಡು ಪಕ್ಷವನ್ನು ಅಧಿಕಾರದ ಗದ್ದುಗೆಗೆ ಏರಿಸುವ ಮೂಲಕ
ಮುಖ್ಯಮಂತ್ರಿ ಸ್ಥಾನ ಅಲಂಕರಿಸಬಹುದು ಎನ್ನುವ ಲೆಕ್ಕಾಚಾರವನ್ನು ಕೆ.ಸಿ.ವೇಣುಗೋಪಾಲ್‌
ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಸಂಸದರೂ
ಆಗಿರುವುದರಿಂದ ಈ ಬಾರಿ ಕೇರಳದಲ್ಲಿ ಅವರ ಪ್ರಭಾವ ಬಳಸಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಮುಖ್ಯ ಮಂತ್ರಿ ಪದವಿಗೇರಬಹುದು ಎನ್ನುವ ಲೆಕ್ಕಾಚಾರ ವೇಣುಗೋಪಾಲ್‌ರದು. ಅದೇ ಕಾರಣಕ್ಕೆ ಕರ್ನಾಟಕದ ಕಾಂಗ್ರೆಸ್‌ ಉಸ್ತುವಾರಿಯಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ
ವೇಣುಗೋಪಾಲ್‌ ಮನವಿ ಮಾಡಿಸಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ವೇಣುಗೋಪಾಲ್‌ ಅವರು
ರಾಹುಲ್‌ ಗಾಂಧಿ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಎಐಸಿಸಿಯಲ್ಲಿ ರಾಹುಲ್‌ ಬದಲು ಸೋನಿಯಾ ಗಾಂಧಿ ಅಧ್ಯಕ್ಷರಾಗಿರುವುದರಿಂದ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಲ್ಲ ನಾಯಕರ ಅಭಿಪ್ರಾಯ ಪಡೆಯುತ್ತಾರೆ. ಅಲ್ಲದೆ, ಹಿರಿಯ ನಾಯಕರ ಅಭಿಪ್ರಾಯಗಳಿಗೆ ಆದ್ಯತೆ ನೀಡುತ್ತಾರೆ. ಅಲ್ಲದೆ, ಸೋನಿಯಾ ಹಾಗೂ ಹಿರಿಯ ನಾಯಕರಿಗೆ ಕೆ.ಸಿ.ವೇಣುಗೋಪಾಲ್‌ ಅವರ ಕಾರ್ಯ ವೈಖರಿಯ ಬಗ್ಗೆ ಆಕ್ಷೇಪಗಳಿವೆ. ಹೀಗಾಗಿ, ವೇಣುಗೋಪಾಲ್‌ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿಯಿಂದ ಹೊರಬರಲು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ.

ರಾಜ್ಯ ನಾಯಕರ ವಾದ: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗ ಉಸ್ತುವಾರಿ ವಹಿಸಿಕೊಂಡಿದ್ದ
ವೇಣುಗೋಪಾಲ್‌, ಆರಂಭದಲ್ಲಿ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುವ ಪ್ರಯತ್ನ ನಡೆಸಿದರು.
ಆರ್‌ಎಸ್‌ಎಸ್‌ ಮಾದರಿಯಲ್ಲಿ ಬೂತ್‌ ಮಟ್ಟದಲ್ಲಿ ಕಾರ್ಯಕರ್ತರ ಸಂಘಟನೆ ಮಾಡಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿಸುವ ಕೆಲಸ ಮಾಡಿದರು. ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ಸೇರಿ ಎಲ್ಲ ನಾಯ ಕರೂ ಪಕ್ಷದ ಕಚೇರಿಗೆ ಆಗಮಿಸಿ ಕಾರ್ಯಕರ್ತರ ಅಹವಾಲು ಸ್ವೀಕರಿಸಬೇಕು ಹಾಗೂ ಪಕ್ಷದ ಸೂಚನೆಗಳನ್ನು ಪಾಲಿಸಬೇಕೆಂಬ ಕಟ್ಟಪ್ಪಣೆ ಮಾಡಿ ಸಿದ್ದರಾಮಯ್ಯ ವಿರೋಧಿ ಬಣದವರು ಹಾಗೂ
ಕಾರ್ಯಕರ್ತರು ಖುಷಿ ಪಡುವಂತೆ ಮಾಡಿದರು. ನಂತರ, ಸಿದ್ದರಾಮಯ್ಯ ಅವರ ಸೂಚನೆಯಂತೆಯೇ
ರಾಜ್ಯದಲ್ಲಿ ಪಕ್ಷದ ಎಲ್ಲ ಚಟುವಟಿಕೆಗಳು, ನೇಮಕಾತಿಗಳು ನಡೆದರೂ, ಎಲ್ಲದಕ್ಕೂ ಪ್ರತಿರೋಧ
ವ್ಯಕ್ತಪಡಿಸದೆ, ರಾಹುಲ್‌ ಮೂಲಕ ಒಪ್ಪಿಗೆ ಕೊಡಿಸುವ ಕೆಲಸ ಮಾಡಿದರು ಎಂಬ ಆರೋಪ ಕೇಳಿ ಬಂತು.

Advertisement

ಚುನಾವಣೆಯಲ್ಲಿ ಸೋಲು: ಕಾಂಗ್ರೆಸ್‌ನ ಸ್ಪಷ್ಟ ಬಹುಮತವಿರುವ ಸರ್ಕಾರವೇ ರಾಜ್ಯದಲ್ಲಿ ಚುನಾವಣೆ
ಎದುರಿಸಿ ಸೋಲು ಕಾಣಲು ವೇಣುಗೋಪಾಲ್‌ ಅವರ ಅತಿಯಾದ ವಿಶ್ವಾಸ ಕಾರಣ. ಅಲ್ಲದೆ, ವಿಧಾನಸ
ಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸೇರಿ ಎಲ್ಲ ನಿರ್ಧಾ ರಗಳಲ್ಲಿಯೂ ಸಿದ್ದರಾಮಯ್ಯ ಅವರನ್ನೇ ಅತಿ
ಯಾಗಿ ಅವಲಂಬನೆಯಾಗಿದ್ದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ಪಕ್ಷದ ನಿರೀಕ್ಷಿತ ಸ್ಥಾನ ಪಡೆಯಲು ಕಷ್ಟವಾಗುವುದರಿಂದ ಚುನಾವಣಾ ಕಾರ್ಯ ತಂತ್ರ ಬದಲಾವಣೆಗೂ ಆದ್ಯತೆ ನೀಡದೆ
ಸರಳ ಬಹುಮತ ಪಡೆಯುತ್ತೇವೆಂದು ಹೈಕಮಾಂಡ್‌ಗೆ ಮಾಹಿತಿ ನೀಡಿ, ಪಕ್ಷದ ಸೋಲಿಗೆ ಕಾರಣೀಕರ್ತರಾಗಿದ್ದಾರೆಂಬ ದೂರುಗಳು ವೇಣುಗೋಪಾಲ್‌ ಮೇಲಿವೆ. ಜೊತೆಗೆ, ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೂ ನಿರೀಕ್ಷೆಗೂ ಮೀರಿ ಸೋಲಾಗಿರುವುದು ಅವರ ಮೇಲೆ ಪಕ್ಷದ ಒಂದು ಗುಂಪು ತಿರುಗಿ ಬೀಳಲು ಕಾರಣವಾಗಿದೆ.

ಮೈತ್ರಿ ಸಮನ್ವಯತೆ ವೈಫ‌ಲ್ಯ: ವೇಣುಗೋಪಾಲ್‌ ಅವರು ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಎರಡೂ
ಪಕ್ಷಗಳ ನಾಯಕರ ನಡುವೆ ಗೊಂದಲ ಉಂಟಾದಾಗ ಸರಿಪಡಿಸುವಲ್ಲಿ ವಿಫ‌ಲರಾಗಿದ್ದಾರೆ. ಸಿದ್ದರಾಮಯ್ಯ
ಅವರನ್ನು ಸರಿಯಾಗಿ ನಿಯಂತ್ರಿಸದಿದ್ದುದು ಮೈತ್ರಿ ಸರ್ಕಾರದಲ್ಲಿ ಗೊಂದಲಗಳು ಹೆಚ್ಚಾಗಲು ಕಾರಣವಾಯಿತು. ಹೈಕಮಾಂಡ್‌ನ‌ ಪ್ರತಿನಿಧಿಯಾಗಿ ವೇಣು ಗೋಪಾಲ್‌, ಎಲ್ಲವನ್ನೂ ಸರಿಪಡಿಸಿ ಒಟ್ಟಾಗಿ ತೆಗೆದುಕೊಂಡು ಹೋಗುವಲ್ಲಿ ವಿಫ‌ಲರಾಗಿದ್ದಾರೆ. ಹೀಗಾಗಿ, ಅವರನ್ನು ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯಿಂದ ಕೈ ಬಿಡಬೇಕೆಂದು ಕಾಂಗ್ರೆಸ್‌ನ ಒಂದು ಬಣದ ನಾಯಕರು ಹೈಕಮಾಂಡ್‌ ಮುಂದೆ ಮನವಿ ಮಾಡಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ, ಉಪ ಚುನಾವಣೆಯಲ್ಲಿ ಕಾಂಗ್ರೆಸ್‌
ನಿರೀಕ್ಷಿತ ಫ‌ಲಿತಾಂಶ ಪಡೆಯದೆ ಹೋದರೆ, ಹೈಕಮಾಂಡ್‌ ಉಸ್ತುವಾರಿ ಬದಲಾವಣೆ ಮಾಡುವ ಕುರಿತು
ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಹೊರೆಯಾದ ಕಾರ್ಯದರ್ಶಿಗಳು: ರಾಜ್ಯದಲ್ಲಿ ಕಾಂಗ್ರೆಸ್‌ನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂದು ಎಐಸಿಸಿ
ವತಿಯಿಂದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯ ಜೊತೆಗೆ ಐವರು ಕಾರ್ಯದರ್ಶಿಗಳನ್ನು ನೇಮಕ
ಮಾಡಲಾಗಿತ್ತು. ಪ್ರತಿ ಕಂದಾಯ ವಿಭಾಗಕ್ಕೊಬ್ಬರನ್ನು ನೇಮಿಸಿ, ಬೆಂಗಳೂರಿಗೆ ಪ್ರತ್ಯೇಕ ಕಾರ್ಯದರ್ಶಿ
ಯನ್ನೂ ನೇಮಿಸಲಾಗಿತ್ತು. ಆದರೆ, ವಿಧಾನಸಭೆ ಚುನಾವಣೆಗೆ ಪಕ್ಷ ಸಂಘಟನೆ, ಸರ್ಕಾರದ
ಸಾಧನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿ, ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರನ್ನು ಬಳಸಿಕೊಂಡು ಪಕ್ಷ ಬಲಗೊಳಿಸುವ ಕಾರ್ಯವನ್ನು ಅವರು ಮಾಡಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಕಾರ್‌ ವಾಪಸ್‌ ನೀಡದ ಕಾರ್ಯದರ್ಶಿ ರಾಜ್ಯ ಉಸ್ತುವಾರಿ ಕಾರ್ಯದರ್ಶಿಗಳಿಗೆ ಕೆಪಿಸಿಸಿ ವತಿಯಿಂದ ಫೈವ್‌ ಸ್ಟಾರ್‌ ಮಾದರಿಯ ಸೌಲಭ್ಯಗಳನ್ನು ನೀಡ ಲಾಗಿತ್ತು. ಅಲ್ಲದೇ ಅವರು ರಾಜ್ಯ ಪ್ರವಾಸ ಕೈಗೊಳ್ಳುವಾಗ ಅವರು ಬಯಸಿದ ಸಮಯಕ್ಕೆ ವಿಮಾನ ಸೌಲಭ್ಯ ಸಿಗು ವಂತೆ ನೋಡಿಕೊಳ್ಳಲಾಗಿತ್ತು. ಆದರೆ, ನಿರೀಕ್ಷಿತ ಚುನಾವಣಾ ಫ‌ಲಿತಾಂಶ ಬಾರದಿರುವುದು ರಾಜ್ಯ ಕಾಂಗ್ರೆಸ್‌ಗೆ ಉಸ್ತು ವಾರಿ ಕಾರ್ಯದರ್ಶಿಗಳು ಹೊರೆಯಾಗಿ ಪರಿಣಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರತಿಯೊಬ್ಬ ಉಸ್ತು ವಾರಿ ಕಾರ್ಯದರ್ಶಿಗೂ ಕೆಪಿಸಿಸಿ ವತಿಯಿಂದ ಓಡಾಡಲು ಪ್ರತ್ಯೇಕ ವಾಹನ ನೀಡಲಾಗಿತ್ತು. ಒಬ್ಬ ಉಸ್ತುವಾರಿ ಕಾರ್ಯದರ್ಶಿ ತಮಗೆ ರಾಜ್ಯದಲ್ಲಿ ತಿರುಗಾಡಿ ಪಕ್ಷ ಸಂಘಟಿಸಲು ನೀಡಿರುವ ಕಾರನ್ನು ಸ್ವಂತ ರಾಜ್ಯಕ್ಕೆ ತೆಗೆದುಕೊಂಡು ಹೋಗಿದ್ದು, ಕೆಪಿಸಿಸಿಗೆ ವಾಪಸ್‌ ನೀಡಿಲ್ಲ ಎಂಬ ಮಾತುಗಳು ಕೆಪಿಸಿಸಿ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next