ನವ ದೆಹಲಿ: ಜನವರಿ 26 ರಂದು ನಡೆದ ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ಮೂಲ ಕಾರಣ ಎನ್ನಲಾಗುತ್ತಿದ್ದ ಪಂಜಾಬ್ ನಟ ದೀಪ್ ಸಿಧು ಬಂಧನದ ನಂತರ, ಹಿಂಸಾಚಾರದಲ್ಲಿ ಭಾಗಿಯಾಗಿದ್ದ ದೀಪ್ ಸಿಧು ಅವರ ಮೂವರು ಗೆಳೆಯರಿಗಾಗಿ ದೆಹಲಿ ಪೋಲಿಸರ ಕ್ರೈಂ ಬ್ರ್ಯಾಂಚ್ ಬಲೆ ಬೀಸಿದೆ.
ಓದಿ : “ಹೂ ಈಸ್ ಈಶ್ವರಪ್ಪ, ಐ ಡೋಂಟ್ ಕೇರ್ ಈಶ್ವರಪ್ಪ”: ತಿರುಗೇಟು ನೀಡಿದ ಸಿದ್ದರಾಮಯ್ಯ
ರೈತರ ಟ್ರ್ಯಾಕ್ಟರ್ ಪರೇಡ್ ಸಂದರ್ಭದಲ್ಲಿ ಕೆಂಪು ಕೋಟೆ ಮತ್ತು ರಾಷ್ಟ್ರ ರಾಜಧಾನಿಯ ಪ್ರಮುಖ ಪ್ರದೇಶಗಳಲ್ಲಿ ಗಲಭೆ ಸೃಷ್ಟಿಸಲು ನಟ ದೀಪ್ ಸಿಧು ಅವರೇ ಕಾರಣ ಎಂದು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಈಗ ಅವರ ಮೂವರು ಗೆಳೆಯರ ಬಂಧನಕ್ಕೆ ಪೊಲೀಸ್ ಕಾರ್ಯಾಚರಣೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ, ನಟ ಹಾಗೂ ಸಾಮಾಜಿಕ ಹೋರಾಟಗಾರ ದೀಪ್ ಸಿಧು ಅವರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಳಪಡಿಸಿ, ಅವರನ್ನು ಕ್ರೈಂ ಬ್ರ್ಯಾಂಚ್ ಗೆ ವಿಚಾರಣೆಗಾಗಿ ಒಪ್ಪಿಸಲಾಗಿದೆ.
ದೆಹಲಿ ಕ್ರೈಂ ಬ್ರ್ಯಾಂಚ್, ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರ ಹಾಗೂ ವಿಧ್ವಂಸಕತೆಯ ಕುರಿತಾಗಿ ಮೊದಲ ದಿನದ ವಿಚಾರಣೆಯಲ್ಲಿ, ಬಿಗಿ ಪೊಲೀಸ್ ಭದ್ರತೆಯ ನಡುವೆಯಲ್ಲಿಯೂ ಕೆಂಪು ಕೋಟೆಯನ್ನು ಪ್ರವೇಶಿಸಿದ ಬಗ್ಗೆ ಹಲವಾರು ಪ್ರಶ್ನೆಗಳನ್ನು ನಟ ದೀಪ್ ಸಿಧು ಅವರಿಗೆ ಕೇಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಜನವರಿ 25ರಂದು ನಾನು ಸಿಂಘು ಗಡಿ ಭಾಗದಲ್ಲಿದ್ದೆ. ಯಾವ ದುರುದ್ದೇಶ ನನ್ನಲ್ಲಿರಲಿಲ್ಲ. ರೈತ ಪ್ರತಿಭಟನಾಕಾರರೊಂದಿಗೆ ನಾನು ಕೂಡ ಐತಿಹಾಸಿಕ ಕೆಂಪುಕೋಟೆಗೆ ಪ್ರವೇಶಿಸಿದ್ದೇನೆ” ಎಂದು ಸಿಧು ಪೊಲೀಸರ ಪ್ರಶ್ನೆಗೆ ಉತ್ತರಿಸಿದ್ದಾರೆ ಎಂದು ವರದಿಯಾಗಿದೆ.
ಓದಿ : ಏಳು ಸ್ಕ್ರೀನ್ ಗಳ ವಿಶಿಷ್ಟ ಲ್ಯಾಪ್ ಟಾಪ್ “Aurora 7” …!