ನವದೆಹಲಿ:ವಿವಾಹ ವಿಧಿ ವಿಧಾನ ನಡೆಯುತ್ತಿದ್ದಾಗಲೇ ವಧು ಕುಸಿದು ಬಿದ್ದು ಸಾವನ್ನಪ್ಪಿದ್ದ ಬಳಿಕ ವರ ವಧುವಿನ ಸಹೋದರಿಯನ್ನು ವಿವಾಹವಾದ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪೈಸೆ-ಪೈಸೆ ಏರಿಕೆ ಕಂಡು ಮುಂಬೈನಲ್ಲಿ ಶತಕ ಬಾರಿಸಿದ ಪೆಟ್ರೋಲ್ ದರ
ಉತ್ತರಪ್ರದೇಶದ ಇಟಾವಾ ಜಿಲ್ಲೆಯ ಭರ್ತಾನಾದ ಸಮಸ್ಪುರ್ ನಲ್ಲಿ ಈ ಘಟನೆ ನಡೆದಿದೆ. ನೂತನ ವಧು-ವರರು ಸಂಪ್ರದಾಯದಂತೆ ಹಸೆಮಣೆಯಲ್ಲಿ ಕುಳಿತು ವಿಧಿವಿಧಾನ ನಡೆಯುತ್ತಿದ್ದ ಸಂದರ್ಭದಲ್ಲಿ ವಧು ಸುರಭಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿರುವುದಾಗಿ ವರದಿ ವಿವರಿಸಿದೆ.
ಕೂಡಲೇ ವೈದ್ಯರ ಬಳಿ ಕೊಂಡೊಯ್ದಾಗ ಆಕೆ ಹೃದಯ ಸ್ತಂಭನದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಈ ಬಗ್ಗೆ ಎಎನ್ ಐ ಜತೆ ಮಾತನಾಡಿರುವ ವಧುವಿನ ಸಹೋದರ ಸೌರಭ್, ದಿಢೀರ್ ಸಂಭವಿಸಿದ ಘಟನೆಯಿಂದ ಏನು ಮಾಡಬೇಕೆಂದು ತೋಚಲಿಲ್ಲ. ನಂತರ ಎರಡೂ ಮನೆಯವರು ಒಟ್ಟಿಗೆ ಕುಳಿದು ಚರ್ಚಿಸಿದಾಗ, ನನ್ನ ಕಿರಿಯ
ಸಹೋದರಿ ನಿಶಾಳನ್ನು ವರ ಮಂಜೇಶ್ ಕುಮಾರ್ ಜತೆ ವಿವಾಹ ನೆರವೇರಿಸಲು ನಿಶ್ಚಯಿಸಿರುವುದಾಗಿ ತಿಳಿಸಿದ್ದಾರೆ. ದುಃಖದ ನಡುವೆಯೂ ಸುರಭಿಯ ಶವವನ್ನು ಒಂದು ಕೋಣೆಯಲ್ಲಿಟ್ಟು, ನಂತರ ಮಂಜೇಶ್ ಮತ್ತು ನಿಶಾಳ ವಿವಾಹ ಕಾರ್ಯ ಪೂರ್ಣಗೊಳಿಸಿದ್ದೇವು. ಬಳಿಕ ಸುರಭಿಯ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಸೌರಭ್ ತಿಳಿಸಿದ್ದಾರೆ.
ಇದೊಂದು ಅಗ್ನಿಪರೀಕ್ಷೆಯ ಸಂದರ್ಭವಾಗಿತ್ತು. ಒಬ್ಬ ಮಗಳು ಸಾವನ್ನಪ್ಪಿ ಒಂದು ಕೋಣೆಯಲ್ಲಿದ್ದರೆ, ಮತ್ತೊಬ್ಬ ಮಗಳ ವಿವಾಹ ನಡೆದಿತ್ತು. ಇಂತಹ ಆಘಾತಕಾರಿ ಸನ್ನಿವೇಶವನ್ನು ನಾವೆಂದೂ ಕಂಡಿರಲಿಲ್ಲ ಎಂದು ಸುರಭಿ ಚಿಕ್ಕಪ್ಪ ಅಜಬ್ ಸಿಂಗ್ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.