Advertisement

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

11:48 AM Apr 25, 2024 | Team Udayavani |

ನವದೆಹಲಿ: ಫರಿದಾಬಾದ್‌ ನಿವಾಸದಲ್ಲಿದ್ದ ಬ್ಯಾಂಕ್‌ ಮ್ಯಾನೇಜರ್‌ ಅನ್ನು ಗನ್‌ ಪಾಯಿಂಟ್‌ ನಿಂದ ಅಪಹರಿಸಿ, ಹಿಮಾಚಲ ಪ್ರದೇಶದ ಬಿಲಾಸ್ಪುರ್‌ ಮತ್ತು ಮಥುರಾದತ್ತ ಕರೆದೊಯ್ದಿದ್ದು, ಕೊನೆಗೂ ಕ್ಷಿಪ್ರ ಕಾರ್ಯಾಚರಣೆ ಮೂಲಕ ಹರ್ಯಾಣ ಕ್ರೈಂ ಬ್ರ್ಯಾಂಚ್‌ ಪೊಲೀಸರು ರಕ್ಷಿಸಿರುವ ಘಟನೆ ನಡೆದಿದೆ.

Advertisement

ಇದನ್ನೂ ಓದಿ:Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಬ್ಯಾಂಕ್‌ ಮ್ಯಾನೇಜರ್‌ ಸತೀಶ್‌ ಅವರ ಕಣ್ಣಿಗೆ, ಬಾಯಿಗೆ ಬಟ್ಟೆ ಕಟ್ಟಿ, ಬಿಲಾಸ್‌ ಪುರ್‌, ಮಥುರಾ ಸೇರಿದಂತೆ ಸುಮಾರು 800 ಕಿಲೋ ಮೀಟರ್‌ ಕರೆದೊಯ್ದಿದ್ದರು. ಅಪಹರಣದ ಮೂಲ ರೂವಾರಿ ಸತೀಶ್‌ ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ವ್ಯಕ್ತಿ! ಮಾಜಿ ಬಾಡಿಗೆದಾರ ಭೂಪೇಂದ್ರ, ಆತನ ಪತ್ನಿ, ಸ್ನೇಹಿತ ಪ್ರಮುಖ ಆರೋಪಿಯಾಗಿದ್ದಾರೆ.

ಪೊಲೀಸ್‌ ಅಧಿಕಾರಿ ಅಮಾನ್‌ ಯಾದವ್‌ ಅವರ ಹೇಳಿಕೆ ಪ್ರಕಾರ, ಸತೀಶ್‌ ಅವರು ದೆಹಲಿಯ ಬ್ಯಾಂಕ್‌ ವೊಂದರಲ್ಲಿ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಫರಿದಾಬಾದ್‌ ಸೆಕ್ಟರ್‌ 62ರಲ್ಲಿ ಮನೆ ಇದ್ದು, ಪತ್ನಿ ಸರ್ಕಾರಿ ನೌಕರಿಯಲ್ಲಿದ್ದರು. ಸುಮಾರು 4 ತಿಂಗಳ ಹಿಂದೆ ಸತೀಶ್‌ ಅವರ ನಿವಾಸದಲ್ಲಿ ಭೂಪೇಂದ್ರ ಬಾಡಿಗೆಗೆ ಇದ್ದಿದ್ದ. ಈತ ನಿರುದ್ಯೋಗಿಯಾಗಿದ್ದ. ಆದರೆ ಸತೀಶ್‌ ಅವರ ಆರ್ಥಿಕ ಸ್ಥಿತಿಗತಿ ಬಗ್ಗೆ ತಿಳಿದುಕೊಂಡಿದ್ದ ಭೂಪೇಂದ್ರ, ಕಿಡ್ನಾಪ್‌ ಮಾಡಿ, ಹಣ ವಸೂಲಿ ಮಾಡುವ ಸಂಚು ರೂಪಿಸಿದ್ದ ಎಂದು ತಿಳಿಸಿದ್ದಾರೆ.

ಸತೀಶ್‌ ಅಪಹರಣಕ್ಕೆ ಭೂಪೇಂದ್ರ, ಆತನ ಪತ್ನಿ ಹಾಗೂ ಭೂಪೇಂದ್ರ ಸ್ನೇಹಿತ ರವೀಂದ್ರ ಒಟ್ಟು ಸೇರಿ ಸಂಚು ರೂಪಿಸಿದ್ದರು. ಅಪಹರಣಕ್ಕೂ ಎರಡು ದಿನದ ಮೊದಲು ಸತೀಶ್‌ ಅವರ ಮನೆ ಹತ್ತಿರ ವಾಸವಾಗಿದ್ದು, ಎಲ್ಲಾ ಚಲನವಲನದ ಬಗ್ಗೆ ಗಮನಿಸಿದ್ದರು. ಅದರಂತೆ ಸತೀಶ್‌ ಅವರ ಮನೆಯ ಮುಖ್ಯ ದ್ವಾರಕ್ಕೆ ಬೀಗ ಹಾಕುವುದಿಲ್ಲ ಎಂಬುದನ್ನು ಕಂಡುಕೊಂಡಿದ್ದರು.

Advertisement

ಶನಿವಾರ ರಾತ್ರಿ ಮನೆಯೊಳಗೆ ನುಗ್ಗಿದ ಭೂಪೇಂದ್ರ, ಸತೀಶ್‌ ಹಾಗೂ ಅವರ ಪತ್ನಿಗೆ ಗನ್‌ ಪಾಯಿಂಟ್‌ ಇಟ್ಟಾಗ, ಸತೀಶ್‌ ಸ್ನೇಹಿತ ಅಮಿತ್‌ ಮಧ್ಯಪ್ರವೇಶಿಸಿ ತಡೆಯಲು ಯತ್ನಿಸಿದ್ದ, ಆದರೆ ಅಷ್ಟರಲ್ಲಿ ಅಮಿತ್‌ ತಲೆಗೆ ಸುತ್ತಿಗೆಯಿಂದ ಹೊಡೆದಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ಭೂಪೇಂದ್ರ ಸತೀಶ್‌ ಪತ್ನಿ ಹಾಗೂ ಅಮಿತ್‌ ಮೊಬೈಲ್‌ ಗಳನ್ನು ಕಸಿದುಕೊಂಡು ತೆರಳಿದ್ದ. ಸತೀಶ್‌ ಅವರನ್ನು ಕಾರಿನೊಳಗೆ ಕುಳಿತುಕೊಳ್ಳುವಂತೆ ಹೇಳಿ, ಭೂಪೇಂದ್ರ ಪತ್ನಿ ರೋಹಿಣಿ ಕಾರು ಚಲಾಯಿಸಿಕೊಂಡು ಹೋದ ಮೇಲೆ ರವೀಂದ್ರ ಮತ್ತು ಭೂಪೇಂದ್ರ ಜತೆಗೂಡಿದ್ದರು. ಸ್ವಲ್ಪ ದೂರ ಸಾಗಿದ ನಂತರ ಸತೀಶ್‌ ಅವರ ಕಾರನ್ನು ಅಲ್ಲೇ ಬಿಟ್ಟು, ಕ್ಯಾಬ್‌ ಗೆ ಸತೀಶ್‌ ಅವರನ್ನು ಕೂರಿಸಿ, ಕೈ-ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುಂಬಿ ಹಿಂಬದಿ ಸೀಟ್‌ ನಲ್ಲಿ ಅಡಗಿಸಿ ಇಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸತೀಶ್‌ ಅವರ ಕ್ರೆಡಿಟ್‌ ಕಾರ್ಡ್‌ ಬಳಸಿ ಪೆಟ್ರೋಲ್‌ ತುಂಬಿಸಿಕೊಂಡು ಸುಮಾರು 800 ಕಿಲೋ ಮೀಟರ್‌ ದೂರ ತೆರಳಿದ್ದರು.

ಹಿಮಾಚಲ ಪ್ರದೇಶಕ್ಕೆ ತೆರಳಿದ ಮೇಲೆ ಅಪಹರಣಕಾರರು ಸತೀಶ್‌ ಅವರ ಪತ್ನಿಗೆ ಕರೆ ಮಾಡಿ 50 ಲಕ್ಷ ರೂಪಾಯಿ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಅಷ್ಟರಲ್ಲಿ ಪೊಲೀಸರು ಆರು ತಂಡಗಳನ್ನು ರಚಿಸಿದ್ದರು. ಕ್ಷಿಪ್ರವಾಗಿ ಅಪಹರಣಕಾರರನ್ನು ಬಂಧಿಸಿ, ಸತೀಶ್‌ ಅವರನ್ನು ರಕ್ಷಿಸಿದ್ದು, ಮತ್ತೊಬ್ಬ ಆರೋಪಿ ರವೀಂದ್ರಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next