ಟೊರೊಂಟೊ/ಮೆಲ್ಬರ್ನ್: ಆಸ್ಟ್ರೇಲಿಯಾ ಮತ್ತು ಕೆನಡಾಗಳಲ್ಲಿ ಹಿಂದೂ ದೇಗುಲಗಳನ್ನು ಗುರಿಯಾಗಿಸಿ ದಾಳಿ ಮಾಡುವ ಘಟನೆಗಳು ಹೆಚ್ಚುತ್ತಿದ್ದು, ಸೋಮವಾರ ರಾತ್ರಿ ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಗೌರಿಶಂಕರ ದೇಗುಲವನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ.
ಆಸ್ಟ್ರೇಲಿಯಾದ ಮೂರು ದೇಗುಲಗಳಲ್ಲಿ ಖಲಿಸ್ಥಾನಿ ಕಿಡಿಗೇಡಿಗಳು ಭಾರತ ವಿರೋಧಿ ಬರಹಗಳನ್ನು ಬರೆದಿರುವ ಬೆನ್ನಲ್ಲೇ ಕೆನಡಾದಲ್ಲೂ ಈ ಘಟನೆ ನಡೆದಿದೆ.
ಈ ಬಗ್ಗೆ ಟೊರೊಂಟೊದಲ್ಲಿರುವ ಭಾರತೀಯ ದೂತಾವಾಸ ಕಚೇರಿ ಆಕ್ರೋಶ ವ್ಯಕ್ತಪಡಿಸಿದೆ. ದೇಗುಲದ ಸಂಸ್ಥಾಪಕ ಮತ್ತು ಅರ್ಚಕ ಧೀರೇಂದ್ರ ತ್ರಿಪಾಠಿ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ದೇಗುಲವನ್ನು ಅಪವಿತ್ರಗೊಳಿಸಿದವರ ವಿರುದ್ಧ ಕೆನಡಾ ಸರಕಾರ ಕಠಿನ ಕ್ರಮ ಕೈಗೊಳ್ಳಬೇಕು. ಭಾರತ ಸರಕಾರವೂ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೃತ್ಯಗಳ ವಿರುದ್ಧ ದನಿ ಎತ್ತಬೇಕು ಎಂದು ಒತ್ತಾಯಿಸಿದಾರೆ.
ಮೇಯರ್ ಖಂಡನೆ
ಬ್ರಾಂಪ್ಟನ್ ನಗರದ ಮೇಯರ್ ಪ್ಯಾಟ್ರಿಕ್ ಬ್ರೌನ್ ಈ ಕುಕೃತ್ಯವನ್ನು ಖಂಡಿಸಿದ್ದು, ಘಟನೆ ಭಾರತೀಯರಿಗೆ ತೀವ್ರ ನೋವುಂಟು ಮಾಡಿದೆ. ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಪ್ರತಿ ಯೊಬ್ಬರೂ ತಮ್ಮ ಪೂಜಾ ಸ್ಥಳದಲ್ಲಿ ಸುರಕ್ಷಿತವಾಗಿರಲು ಅರ್ಹರಾಗಿರು ತ್ತಾರೆ ಎಂದಿದ್ದಾರೆ. ಈ ಹಿಂದೆ 2022ರ ಸೆಪ್ಟಂಬರ್‌ನಲ್ಲಿ ಕೆನಡಾದ ಸ್ವಾಮಿ ನಾರಾಯಣ ಮಂದಿರವನ್ನು ಖಲಿಸ್ಥಾನಿ ಪ್ರತ್ಯೇಕತಾವಾದಿಗಳು ವಿರೂಪಗೊಳಿಸಿದ್ದರು.
Related Articles
ಆಸೀಸ್‌ನಲ್ಲಿಯೂ ಘಟನೆ
ಆಸ್ಟ್ರೇಲಿಯಾದಲ್ಲಿ ಕೂಡ ಭಾರತೀಯರು ವಿಶೇಷವಾಗಿ ಹಿಂದೂ ಸಮುದಾಯವನ್ನು ಗುರಿಯಾಗಿ ಇರಿಸಿ ಕೊಂಡು ದಾಳಿಗಳು ನಡೆದಿವೆ. ಇದೇ ತಿಂಗಳಿನಲ್ಲಿಯೇ ಮೂರು ದೇಗುಲಗಳನ್ನು ವಿರೂಪಗೊಳಿಸಲಾಗಿದೆ. ಜ. 12ರಂದು ಮೆಲ್ಬರ್ನ್ನ ಸ್ವಾಮಿ ನಾರಾಯಣ ದೇಗುಲ, ಜ. 16ರಂದು ವಿಕ್ಟೋರಿಯಾದ ಶಿವ ವಿಷ್ಣು ದೇಗುಲ, ಜ. 23ರಂದು ಮೆಲ್ಬರ್ನ್ನ ಇಸ್ಕಾನ್ ದೇಗುಲದಲ್ಲಿ ಭಾರತ ವಿರೋಧಿ ಬರಹಗಳನ್ನು ಬರೆಯಲಾಗಿತ್ತು.
ರವಿವಾರ ಮೆಲ್ಬರ್ನ್ನಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಿಡಿದಿದ್ದವರನ್ನು ಗುರಿಯಾಗಿಸಿ ಖಲಿಸ್ಥಾನ ಬೆಂಬಲಿಗರು ದಾಳಿ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಗಳಲ್ಲಿದ್ದ ದ್ವೇಷ ಈಗ ದೇವಾಲಯಗಳ ಮೇಲಿನ ತೋಳ್ಬಲದ ದಾಳಿಯಾಗಿ ಮಾರ್ಪಟ್ಟಿದೆ. ಮುಂದೇನು? ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಕೆನಡಾ ಸರಕಾರವನ್ನು ಒತ್ತಾಯಿಸುತ್ತೇನೆ.
-ಚಂದ್ರ ಆರ್ಯ, ಕೆನಡಾ ಸಂಸದ