ತಿರುವನಂತಪುರ: ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ ಕೇರಳದ ಸಿಸ್ಟರ್ ಅಭಯಾ ಕೊಲೆ ಪ್ರಕರಣದಲ್ಲಿ 28 ವರ್ಷಗಳ ಅನಂತರ ನ್ಯಾಯ ಸಿಕ್ಕಿದೆ. ಕ್ಯಾಥೋಲಿಕ್ ಚರ್ಚ್‌ನ ಪಾದ್ರಿ ಥಾಮಸ್ ಕೊಟ್ಟೂರ್ ಮತ್ತು ಸಿಸ್ಟರ್ ಸೆಫಿ ಅವರನ್ನು ಅಪರಾಧಿಗಳು ಎಂದು ಇಲ್ಲಿನ ವಿಶೇಷ ಸಿಬಿಐ ಕೋರ್ಟ್‌ನ ನ್ಯಾಯಾಧೀಶ ಕೆ.ಸನಲ್ ಕುಮಾರ್ ಅವರು ಘೋಷಿಸಿದ್ದಾರೆ.
ಇಬ್ಬರೂ ಅಪರಾಧಿಗಳ ಶಿಕ್ಷೆ ಪ್ರಮಾಣ ಬುಧವಾರ ಪ್ರಕಟವಾಗಲಿದೆ. ಸದ್ಯ ಅಪರಾಧಿಗಳಿಬ್ಬರು ಜಾಮೀನಿನಲ್ಲಿದ್ದರು. ಕೋರ್ಟ್ ತೀರ್ಪು ಪ್ರಕಟಿಸುತ್ತಿದ್ದಂತೆ ವಶಕ್ಕೆ ಪಡೆದ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಬುಧವಾರ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.
ಏನಿದು ಪ್ರಕರಣ? 1992ರ ಮಾರ್ಚ್ 27ರಂದು ಕೊಟ್ಟಾಯಂನ ಸೆಂಟ್ ಪಿಯೂಸ್ ಕಾನ್ವೆಂಟ್‌ನಲ್ಲಿ ಸಿಸ್ಟರ್ ಅಭಯ ಅವರು ನಿಗೂಢವಾಗಿ ಸಾವಿಗೀಡಾಗಿದ್ದರು.
ಆರಂಭದಲ್ಲಿ ಸ್ಥಳೀಯ ಪೊಲೀಸರು ಮತ್ತು ಕ್ರೈಂ ಬ್ರಾಂಚ್‌ನ ಸಿಬಂದಿ ಈ ಪ್ರಕರಣ ವಿಚಾರಣೆ ನಡೆಸಿದ್ದರು. ಆದರೆ, ಇದು ಆತ್ಮಹತ್ಯೆ ಎಂಬ ತೀರ್ಮಾನಕ್ಕೆ ಬಂದು ಪ್ರಕರಣ ಮುಚ್ಚಿ ಹಾಕಲಾಗಿತ್ತು. 1993ರಲ್ಲಿ ಸಿಬಿಐ ಈ ಪ್ರಕರಣವನ್ನು ವಹಿಸಿಕೊಂಡು, ಮೂರು ಸಮಾಪ್ತಿ ವರದಿ ಸಲ್ಲಿಕೆ ಮಾಡಿತ್ತು. ಆದರೆ, 2008ರಲ್ಲಿ ಸಿಬಿಐ ತನಿಖೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಹೈಕೋರ್ಟ್, ದಿಲಿಯ ಸಿಬಿಐಗೆ ತನಿಖೆ ಮಾಡುವಂತೆ ಸೂಚಿಸಿತ್ತು. ಅನಂತರದಲ್ಲಿ ಫಾದರ್ ಥಾಮಸ್ ಕೊಟ್ಟೂರ್, ಫಾದರ್ ಜೋಸ್ ಪೂಟ್ರಿಕಿಯಾಲ್ ಮತ್ತು ಸಿಸ್ಟರ್ ಸೆಫಿ ವಿರುದ್ದ ಕೊಲೆ ಕೇಸು ದಾಖಲಿಸಲಾಗಿತ್ತು.
ಅಕ್ರಮ ಸಂಬಂಧ ಬಹಿರಂಗದಿಂದ ಕೊಲೆ?: ತನಿಖೆಯಲ್ಲಿನ ಅಂಶಗಳ ಪ್ರಕಾರ, ಕೊಟ್ಟೂರ್ ಮತ್ತು ಪೂಟ್ರಿಕಿಯಾಲ್ ಅವರು ಸಿಸ್ಟರ್ ಸೆಫಿ ಜತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದರು. 1992ರ ಮಾ.27ರಂದು ಕೊಟ್ಟೂರ್ ಮತ್ತು ಸೆಫಿ ಅವರು ಒಟ್ಟಿಗೆ ಇದ್ದುದನ್ನು ಅಭಯ ನೋಡಿದ್ದರು. ಎಲ್ಲಿ ಈ ಅಕ್ರಮ ಸಂಬಂಧ ಬಹಿರಂಗವಾಗಿ ಬಿಡುತ್ತದೆಯೋ ಎಂದು ಈ ಮೂವರು ಸೇರಿ ಹತ್ಯೆ ಮಾಡಿ ಬಾವಿಗೆ ಹಾಕಿದ್ದರು.
ಕಳ್ಳನೇ ಸಾಕ್ಷಿ : ಕೊಲೆಯಾದ ದಿನವೇ ಕಳ್ಳ ಅಡಕ್ಕಾ ರಾಜು ಎಂಬಾತ ಕಾನ್ವೆಂಟ್‌ಗೆ ಕಳ್ಳತನ ಮಾಡಲು ಹೋಗಿದ್ದ. ಅಂದು ಇಬ್ಬರೂ ಫಾದರ್‌ಗಳು ಕಾನ್ವೆಂಟ್‌ನಲ್ಲಿ ಇದ್ದುದನ್ನು ನೋಡಿದ್ದ. ಪ್ರಕರಣದ ಆರಂಭದಿಂದಲೂ, ಕಡೆವರೆಗೂ ರಾಜು ತನ್ನ ಹೇಳಿಕೆ ಬದಲಿಸಲೇ ಇಲ್ಲ. ಇದೇ ಪ್ರಮುಖ ಸಾಕ್ಷಿಯಾಯಿತು. ಇನ್ನೊಂದು ವಿಶೇಷವೆಂದರೆ, ಪ್ರಕರಣದಲ್ಲಿ ಸಾಕ್ಷಿ ನುಡಿದಿದ್ದ 177 ಮಂದಿಯಲ್ಲಿ ಕೆಲವರು ಸಾವನ್ನಪ್ಪಿದ್ದಾರೆ, ಇನ್ನೂ ಕೆಲವರು ಉಲ್ಟಾ ಹೊಡೆದಿದ್ದಾರೆ.