Advertisement

23 ವರ್ಷದ ನಂತರ ತುಂಬಿದ ಹಳೇಬೀಡು ಕೆರೆಗೆ ಶಾಸಕರಿಂದ ಬಾಗಿನ ಅರ್ಪಣೆ

11:54 AM Nov 30, 2021 | Team Udayavani |

ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿಯ ಹಳೇಬೀಡು ಊರ ಮುಂದಿನ ದೊಡ್ಡ ಕೆರೆ 23 ವರ್ಷಗಳ ನಂತರ ಭರ್ತಿಯಾಗಿದ್ದು, ಕೆರೆ ತುಂಬಿದ ಸಂಭ್ರಮದಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಗ್ರಾಮಸ್ಥರೊಂದಿಗೆ ಬಾಗಿನ ಅರ್ಪಿಸಿದರು.

Advertisement

ಹಿಂದಿನ ಸಿದ್ದರಾಮಯ್ಯರ ಸರಕಾರದ ಅವಧಿಯಲ್ಲಿ ಹೊಸರಾಮನಹಳ್ಳಿ ಬಳಿಯ ಲಕ್ಷ್ಮಣತೀರ್ಥ ನದಿಯಿಂದ ಏತ ನೀರಾವರಿ ಮೂಲಕ ಜೀನಹಳ್ಳಿ-ಬಿಳಿಕೆರೆ-ಹಳೇಬೀಡು ಕೆರೆ ತುಂಬಿಸುವ ಯೋಜನೆ ಸಾಕಾರಗೊಂಡಿತ್ತು. ಆದರೆ ಕಳೆದ ಐದು ವರ್ಷಗಳಿಂದ ಜೀನಹಳ್ಳಿ, ಬಿಳಿಕೆರೆ ಕೆರೆ ತುಂಬಿತ್ತಾದರೂ ಹಳೇಬೀಡು ಕೆರೆಗೆ ಅಲ್ಪಸ್ವಲ್ಪ ಮಾತ್ರವೇ ನೀರು ಹರಿದಿತ್ತು. ಇದೀಗ ಬಿಳಿಕೆರೆ ಕೆರೆ ಕೋಡಿ ನೀರು, ಬೋಳನಹಳ್ಳಿ ಕೆರೆ, ಮೈದನಹಳ್ಳಿ ಕೆರೆ ಹಾಗೂ ಯಾಚೇಗೌಡನಕಟ್ಟೆ ಕಡೆಯಿಂದ ಸುಮಾರು 80 ಎಕರೆ ವಿಸ್ತೀರ್ಣದ ಹಳೆಬೀಡು ಕೆರೆಗೆ ನೀರು ಸೇರಿದ್ದರಿಂದ ಹಾಗೂ ಇತ್ತೀಚಿನ ದಿನಗಳಲ್ಲಿ ಬಿದ್ದ ಸತತಮಳೆಯಿಂದಾಗಿ 23 ವರ್ಷಗಳ ನಂತರ ಸಂಪೂರ್ಣ ಭರ್ತಿಯಾಗಿದೆ. ಹಳೇಬೀಡು ಹಾಗೂ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ.

ಕಾರ್ತಿಕ ಮಾಸದ ಅಂಗವಾಗಿ ಹಳೇಬೀಡು ಕೆರೆ ದಡದಲ್ಲಿನ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷದಂತೆ ಕಡೇ ಕಾರ್ತಿಕವನ್ನು ಗ್ರಾಮದ ಮಹದೇಶ್ವರ ಅಭಿವೃದ್ದಿ ಸಮಿತಿ ಹಾಗೂ ಗ್ರಾಮಸ್ಥರು ನಡೆಸಿಕೊಂಡು ಬರುತ್ತಿದ್ದಂತೆ ಕೆರೆ ಭರ್ತಿಯಾಗಿರುವ ಈ ಸಂದರ್ಭದಲ್ಲಿ  ಮತ್ತಷ್ಟು ಹರ್ಷಿತರಾಗಿರುವ ಗ್ರಾಮಸ್ಥರು ವಿಜೃಂಭಣೆಯಿಂದ ಕಾರ್ತಿಕವನ್ನು ಆಚರಿಸಿ. ಅನ್ನದಾಸೋಹ ನಡೆಸಿದರು. ಇದಕ್ಕೂ ಮೊದಲು ಕೆರೆ ಬಳಿಗೆ ಆಗಮಿಸಿದ ಶಾಸಕ ಮಂಜುನಾಥ್ ಹಾಗೂ ಅತಿಥಿಗಳನ್ನು ಕಳಸಹೊತ್ತ ಮಹಿಳೆಯರು ಸ್ವಾಗತಿಸಿದರು. ನಂತರ ಮಹಿಳೆಯರು ಹಾಗೂ ಗ್ರಾಮದ ಯಜಮಾನರು ಗಂಗೆಗೆ ಪೂಜೆ ಸಲ್ಲಿಸಿದರು. ಶಾಸಕ ಎಚ್.ಪಿ.ಮಂಜುನಾಥ್ ಸೇರಿದಂತೆ ಮುಖಂಡರು ತುಂಬಿದ ಕೆರೆಗೆ ಬಾಗಿನ ಅರ್ಪಿಸಿದರು.

ಈ ವೇಳೆ ಹಳೇಬೀಡು ಗ್ರಾ.ಪಂ.ಅಧ್ಯಕ್ಷ ಮಹೇಶ್, ಉಪಾಧ್ಯಕ್ಷೆ ಗೌರಮ್ಮ, ಸದಸ್ಯರು, ಮಹದೇಶ್ವರ ಅಭಿವೃದ್ದಿ ಸಮಿತಿಯ ಗಿರೀಶ್, ಮಹದೇವಶೆಟ್ಟಿ, ಶೇಖರ್, ಗ್ರಾಮದ ವಿವಿಧ ಸಮುದಾಯದ ಯಜಮಾನರು, ತಾ.ಪಂ.ಮಾಜಿ ಸದಸ್ಯ ಹಂದನಹಳ್ಳಿಸೋಮಶೇಖರ್, ಮುಖಂಡ ಬಿಳಿಕೆರೆಬಸವರಾಜು, ಹಳೇಬೀಡು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next