Advertisement

13 ವರ್ಷಗಳ ಬಳಿಕ ಆರೆಸ್ಸೆಸ್‌ ಬೈಠಕ್‌ ಆತಿಥ್ಯ

02:37 PM Oct 26, 2021 | Team Udayavani |

ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್‌) ಕೈಗೊಂಡ ನಿರ್ಣಯಗಳ ಅನುಷ್ಠಾನದ ಪರಾಮರ್ಶೆಯ ಅತ್ಯುನ್ನತ ಸಮಿತಿ ಅಖೀಲ ಭಾರತ ಕಾರ್ಯಕಾರಿ ಮಂಡಳಿ ಸಭೆ ಸುಮಾರು 13 ವರ್ಷಗಳ ನಂತರ ಧಾರವಾಡದಲ್ಲಿ ನಡೆಯಲಿದ್ದು, ಸರ ಸಂಘ ಚಾಲಕ ಡಾ| ಮೋಹನ ಭಾಗವತ್‌ ಅವರು ಸೇರಿದಂತೆ ಸಂಘದ ಅತ್ಯುನ್ನತ ಅಧಿಕಾರಿವರ್ಗ ಪಾಲ್ಗೊಂಡು, ಮೂರು ದಿನಗಳವರೆಗೆ ಚಿಂತನ-ಮಂಥನ ನಡೆಸಲಿದೆ.

Advertisement

ಆರೆಸ್ಸೆಸ್‌ನ ಸಂಘಟನಾತ್ಮಕ ದೃಷ್ಟಿಯಿಂದ ಅಖೀಲ ಭಾರತ ಪ್ರತಿನಿಧಿಗಳ ಸಭೆ ಅತ್ಯುನ್ನತ ಸ್ಥಾನ ಹೊಂದಿದೆ. ಅದೇ ರೀತಿ ಮತ್ತೂಂದು ಮಹತ್ವದ ಸಮಿತಿ ಎಂದರೆ ಅಖೀಲ ಭಾರತ ಕಾರ್ಯಕಾರಿ ಮಂಡಳಿಯಾಗಿದೆ. ಆರೆಸ್ಸೆಸ್‌ ಅಖೀಲ ಭಾರತ ಪ್ರತಿನಿಧಿಗಳ ಸಭೆ ಮಾರ್ಚ್ ನಲ್ಲಿ ನಡೆಯುತ್ತಿದ್ದು, ಇದು ಸಂಘದ ನಡೆ, ಕಾರ್ಯ, ಮುಂದಿನ ನಡೆ, ವಿವಿಧ ವಿಷಯಗಳ ಮೇಲೆ ಸಂಘದ ದೃಷ್ಟಿಕೋನ, ಅಭಿಪ್ರಾಯ, ದೇಶ ರಕ್ಷಣೆ ಹಾಗೂ ಹಿತದೃಷ್ಟಿಯಿಂದ ಸಂಘ ವಹಿಸಬೇಕಾದ ಪಾತ್ರ ಇನ್ನಿತರ ವಿಷಯಗಳ ಕುರಿತಾಗಿ ನಿರ್ಣಯಗಳನ್ನು ಕೈಗೊಳ್ಳುತ್ತದೆ.

ಇಂತಹ ನಿರ್ಣಯಗಳನ್ನು ಕೈಗೊಂಡ ಆರು ತಿಂಗಳ ನಂತರ ಅಖೀಲ ಭಾರತ ಕಾರ್ಯಕಾರಿ ಮಂಡಳಿ ಸಭೆ ನಡೆಯುತ್ತದೆ. ಪ್ರತಿನಿಧಿಗಳ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಅನುಷ್ಠಾನ, ಲೋಪ, ಕೊರತೆ ಇನ್ನಿತರ ಕುರಿತಾಗಿ ಪರಿಶೀಲನೆ, ಪರಾಮರ್ಶೆಗಾಗಿ ಅಖೀಲ ಭಾರತ ಕಾರ್ಯಕಾರಿ ಮಂಡಳಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ನಿರ್ಣಯಗಳ ಅನುಷ್ಠಾನ ಎಷ್ಟಾಗಿದೆ, ಇನ್ನು ಏನಾಗಬೇಕಾಗಿದೆ ಎಂಬುದರ ಮಹತ್ವದ ಚರ್ಚೆ ನಡೆಯಲಿದೆ.

ಮುಂದಿನ ವರ್ಷದ ಅಖೀಲ ಭಾರತ ಕಾರ್ಯಕಾರಿ ಮಂಡಳಿ ಸಭೆ ಎಲ್ಲಿ ನಡೆಯಬೇಕು ಎಂಬುದರ ನಿರ್ಣಯವೂ ಆಗುತ್ತದೆ ಎನ್ನಲಾಗಿದೆ. ಆರೆಸ್ಸೆಸ್‌ ಸಂಘಟನೆ ದೃಷ್ಟಿಯಿಂದ ಇವೆರಡು ಮಹತ್ವದ ಘಟ್ಟಗಳಾಗಿದ್ದು, ಹೃದಯ ಹಾಗೂ ಮೆದುಳು ರೂಪದಲ್ಲಿ ಕಾರ್ಯನಿರ್ವಹಿಸಲಿವೆ. ಸಂಘದ ಒಟ್ಟಾರೆ ದೃಷ್ಟಿಕೋನ, ಆಶಯ, ಕೈಗೊಳ್ಳಬೇಕಾದ ಸೇವಾ ಕಾರ್ಯಗಳನ್ನು ಅಖೀಲ ಭಾರತ ಪ್ರತಿನಿಧಿಗಳ ಸಭೆ ನಿರ್ಧರಿಸಿದರೆ, ಕೈಗೊಂಡ ನಿರ್ಣಯಗಳ ಅನುಷ್ಠಾನದ ಪರಾಮರ್ಶೆ ಹಾಗೂ ಮಹತ್ವದ ಸಲಹೆ ನೀಡುವ ಕಾರ್ಯವನ್ನು ಕಾರ್ಯಕಾರಿ ಮಂಡಳಿ ಮಾಡುತ್ತದೆ.

ಮೂರು ದಿನ-ಸಂಪೂರ್ಣ ಆಂತರಿಕ

Advertisement

ಅ.28-30ವರೆಗೂ ಮೂರು ದಿನಗಳವರೆಗೆ ನಡೆಯುವ ಸಭೆ ಸಂಪೂರ್ಣವಾಗಿ ಆಂತರಿಕವಾಗಿದೆ. ಆರೆಸ್ಸೆಸ್‌ನ ಅಖೀಲ ಭಾರತ ಕಾರ್ಯಕಾರಿ ಮಂಡಳಿಯ ಸುಮಾರು 350ಕ್ಕೂ ಹೆಚ್ಚು ವಿವಿಧ ಪದಾಧಿಕಾರಿಗಳು ಮೂರು ದಿನಗಳ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರತಿ ರಾಜ್ಯದಿಂದ ಕನಿಷ್ಟ 2-3 ಜನರು ಪ್ರತಿನಿಧಿಸಲಿದ್ದು, ಆರೆಸ್ಸೆಸ್‌ನ ಅತ್ಯುನ್ನತ ನಾಯಕರೆಲ್ಲರೂ ಸಂಗಮವಾಗುವ ಸಭೆ ಇದಾಗಿದೆ.

ಇದನ್ನೂ ಓದಿ: ನೆಡುತೋಪಿನಲ್ಲಿ ಆಕಸ್ಮಿಕ ಬೆಂಕಿ

2008ರಲ್ಲಿ ನಡೆದಿತ್ತು ಸಭೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್‌)ದ ಅಖೀಲ ಭಾರತ ಕಾರ್ಯಕಾರಿ ಸಭೆ 2008ರಲ್ಲಿ ಧಾರವಾಡದ ಗರಗನಲ್ಲಿನ ರಾಷ್ಟ್ರೋತ್ಥಾನ ವಸತಿ ಶಾಲೆಯಲ್ಲಿ ನಡೆದಿತ್ತು. ಇದಾದ 13 ವರ್ಷಗಳ ನಂತರ ಇದೀಗ ಅದೇ ಗರಗದ ರಾಷ್ಟ್ರೋತ್ಥಾನ ವಸತಿ ಶಾಲೆಯಲ್ಲಿಯೇ ಸಭೆ ನಡೆಯುತ್ತಿದೆ. ಈ ಹಿಂದೆ ಇಂತಹ ಮಹತ್ವದ ಸಭೆಗಳು ನಾಗ್ಪುರ, ಲಕ್ನೋ, ಬೆಂಗಳೂರಿನಲ್ಲಿ ನಡೆಯುತ್ತಿತ್ತು. ಆನಂತರದಲ್ಲಿ ದೇಶದ ವಿವಿಧ ಕಡೆಗಳಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಸಂಘ ಪ್ರೇರಿತ ರಾಷ್ಟ್ರೋತ್ಥಾನ ವಸತಿ ಶಾಲೆಗಳಲ್ಲಿ ನಡೆಸಲಾಗುತ್ತಿದ್ದು, ಅದರ ಭಾಗವಾಗಿಯೇ ಧಾರವಾಡದಲ್ಲಿ ಸಭೆ ಕೈಗೊಳ್ಳಲಾಗುತ್ತಿದೆ.

23ರಂದೇ ಆಗಮಿಸಿದ ಡಾ| ಮೋಹನ ಭಾಗವತ್‌

ಆರೆಸ್ಸೆಸ್‌ ಮುಖ್ಯಸ್ಥ ಸರ ಸಂಘ ಚಾಲಕ ಡಾ. ಮೋಹನ ಭಾಗವತ್‌ ಅವರು ಅಖೀಲ ಭಾರತ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ. ಅ.23ರಂದು ಸಂಜೆ ಹುಬ್ಬಳ್ಳಿಗೆ ಆಗಮಿಸಿರುವ ಡಾ. ಭಾಗವತ್‌ ಅವರು ಸಭೆ ಮುಗಿಯುವವರೆಗೂ ಇರಲಿದ್ದಾರೆ. ಜತೆಗೆ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಅನೇಕ ಪ್ರಮುಖರು ಈಗಾಗಲೇ ಹುಬ್ಬಳ್ಳಿಗೆ ಆಗಮಿಸಿದ್ದಾರೆ.

ಸಿದ್ಧತೆ ಹೇಗಿದೆ?

ದೇಶದ ವಿವಿಧ ಕಡೆಯಿಂದ ಬಂದ ಪ್ರತಿನಿಧಿಗಳಿಗೆ ಊಟ-ವಸತಿ, ವೈದ್ಯಕೀಯ ಸೌಲಭ್ಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ವಿವಿಧ ಜವಾಬ್ದಾರಿ ಪಡೆದ ಸ್ವಯಂ ಸೇವಕರ ಸಂಘ ಸೇವಾ ಹಾಗೂ ತಯಾರಿ ಕಾರ್ಯದಲ್ಲಿ ಕಾರ್ಯೋನ್ಮುಖವಾಗಿದೆ. ಸಭೆಗೆ ವಿವಿಧ ಬ್ಲಾಕ್‌ ಗಳನ್ನು ರೂಪಿಸಲಾಗಿದ್ದು, ಪ್ರತಿ ಬ್ಲಾಕ್‌ಗೆ ಜಗಜ್ಯೋತಿ ಬಸವೇಶ್ವರ, ಕನಕದಾಸ, ವೇದವ್ಯಾಸ, ನಾರದ ಮುನಿ ಇನ್ನಿತರ ಹೆಸರುಗಳನ್ನು ಇರಿಸಲಾಗಿದೆ. ಬೆಳಗ್ಗೆ 5 ಗಂಟೆಯಿಂದಲೇ ಸಭೆ ಆರಂಭವಾಗಲಿದ್ದು, ಯೋಗ, ಪ್ರಾರ್ಥನೆ ಇನ್ನಿತರ ಕಾರ್ಯಗಳೊಂದಿಗೆ ದಿನ ಆರಂಭವಾಗಲಿದೆ. ಸಮಯ ವ್ಯರ್ಥಕ್ಕೆ ಅವಕಾಶ ಇಲ್ಲದ ರೀತಿಯಲ್ಲಿ ಸಭೆ ನಡೆಯಲಿದೆ. ಸಭೆಗೆ ಆಗಮಿಸುವವರಿಗೆ ಕೋವಿಡ್‌ ಎರಡು ಲಸಿಕೆ ಕಡ್ಡಾಯಗೊಳಿಸಲಾಗಿದೆ. ಸಭೆಗೆ ಕಾರ್ಯಕಾರಿ ಮಂಡಳಿ ಅಲ್ಲದ ಯಾರಿಗೂ ಅವಕಾಶ ಇರುವುದಿಲ್ಲ. ಬೇರೆ ಕಡೆಯಿಂದ ಬಂದ ಪ್ರತಿನಿಧಿಗಳ ಸಂಬಂಧಿಕರು, ಸ್ನೇಹಿತರು ಯಾರಾದರೂ ಸ್ಥಳೀಯವಾಗಿ ಇದ್ದರೆ ಅಂತಹವರು ಭೇಟಿಗೆ ಬಯಸಿದರೆ ಸಮಯ ನಿಗದಿ ಪಡಿಸಿ ಒಂದು ಕಡೆ ಸ್ಥಳ ನಿಗದಿ ಪಡಿಸಲಾಗುತ್ತಿದ್ದು, ಅಲ್ಲಿಯೇ ಭೇಟಿಯಾಗಬೇಕಾಗುತ್ತದೆ.

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next