Advertisement

ಉಡುಪಿ ಜಿಲ್ಲೆಯಲ್ಲಿ 13 ವರ್ಷಗಳ ಬಳಿಕ ತಾ.ಪಂ. ಜಮಾಬಂದಿ

11:25 PM Dec 12, 2019 | mahesh |

ಕುಂದಾಪುರ: ಪಂಚಾಯತ್‌ರಾಜ್‌ ಕಾಯ್ದೆ ಪ್ರಕಾರ ರಾಜ್ಯದ ಅಷ್ಟೂ ತಾಲೂಕು ಪಂಚಾಯತ್‌ಗಳಲ್ಲಿ 2006ರಿಂದ ವಾರ್ಷಿಕ ಜಮಾಬಂದಿ ನಡೆಯುತ್ತಿದ್ದರೂ ಉಡುಪಿ ಜಿಲ್ಲೆಯ ಮೂರು ತಾ.ಪಂ.ಗಳಲ್ಲಿ 13 ವರ್ಷ ಗಳಿಂದ ನಡೆದೇ ನಡೆದಿರಲಿಲ್ಲ. ಈ ವರ್ಷದಲ್ಲಿ ಕಳೆದ ತಿಂಗಳಿನಿಂದ ಆರಂಭಿಸಲಾಗಿದ್ದು, ಗುರುವಾರ ಕುಂದಾಪುರ ತಾ.ಪಂ.ನಲ್ಲಿ ನಡೆದಿದೆ. ಗ್ರಾ.ಪಂ.ಗಳ ಜಮಾಬಂದಿ ನಡೆಸಿಕೊಡುವ ಹೊಣೆ ತಾ.ಪಂ.ನದು. ಉಡುಪಿ ಜಿಲ್ಲೆಯ ಎಲ್ಲ ಗ್ರಾ.ಪಂಗಳಲ್ಲಿ ಜಮಾಬಂದಿ ನಡೆಯುತ್ತಿದ್ದರೂ ಉಡುಪಿ, ಕಾರ್ಕಳ, ಕುಂದಾಪುರ ತಾ.ಪಂ.ಗಳಲ್ಲಿ ಮಾತ್ರ ನಡೆಯದಿರುವುದೇ ವಿಶೇಷ.

Advertisement

ಬಯಲಿಗೆ ಬಂದದ್ದು ಹೇಗೆ?
ಬ್ರಹ್ಮಾವರದ ಶೇಖರ ಹಾವಂಜೆ ಅವರು ಉಡುಪಿ ಜಿಲ್ಲೆಯ ತಾ.ಪಂ.ಗಳಲ್ಲಿ ಜಮಾಬಂದಿ ನಡೆಯುತ್ತಿಲ್ಲ ಎನ್ನುವುದನ್ನು ಗಮನಿಸಿ ಮಾಹಿತಿ ಹಕ್ಕು ಮೂಲಕ ವಿವರ ಪಡೆದು, ಲೋಕಾಯುಕ್ತಕ್ಕೆ ಸೆ. 25ರಂದು ದೂರು ಅರ್ಜಿ ಸಲ್ಲಿಸಿದ್ದರು. ಜಿ.ಪಂ. ಸಿಇಒ, ಉಪಕಾರ್ಯದರ್ಶಿ, ಸ. ಕಾರ್ಯ ದರ್ಶಿ, ಮುಖ್ಯ ಯೋಜನಾಧಿಕಾರಿ ಮೊದಲಾದ ವರನ್ನು ಪ್ರತಿವಾದಿಗಳನ್ನಾಗಿಸಿದ್ದು, ತನಿಖೆಯ ಹಂತದಲ್ಲಿದೆ.

ಎಚ್ಚೆತ್ತ ಜಿ.ಪಂ.
ಲೋಕಾಯುಕ್ತದಲ್ಲಿ ದೂರು ದಾಖಲಾಗುತ್ತಿದ್ದಂತೆಯೇ ಎಚ್ಚೆತ್ತ ಉಡುಪಿ ಜಿ.ಪಂ. ಜಮಾಬಂದಿ ನಡೆಸಲು ಮುಂದಾಗಿದೆ. ಅದರನ್ವಯ ಕಾರ್ಕಳದಲ್ಲಿ ನ. 25, ಉಡುಪಿಯಲ್ಲಿ ನ. 29, ಕುಂದಾಪುರ ತಾ.ಪಂ.ನಲ್ಲಿ
ಡಿ. 12ರಂದು ನಡೆದಿದೆ.

ಜಮಾಬಂದಿ: ಹಾಗೆಂದರೇನು?
ಸಾಮಾನ್ಯ ಸಭೆ, ಬಜೆಟ್‌ ಮಂಡನೆಯಂತೆ ಜಮಾಬಂದಿ ಕಡ್ಡಾಯ. ಬಜೆಟ್‌ನಲ್ಲಿ ತೆಗೆದಿಟ್ಟ ತೆರಿಗೆ ಹಣ ಸದ್ವಿನಿಯೋಗವಾಗಿದೆ ಎಂದು ಸಾರ್ವಜನಿಕರ ಎದುರು ಸಾಬೀತುಪಡಿಸುವುದೇ ಜಮಾಬಂದಿ. 2005ರಲ್ಲಿ ರಾಜ್ಯ ಸರಕಾರವು ಪಂ. ಜಮಾಬಂದಿ ನಿರ್ವಹಣೆ ವ್ಯವಸ್ಥೆಯನ್ನು ಕರ್ನಾಟಕ ಪಂ.ರಾಜ್‌ ಜಮಾಬಂದಿ ನಿರ್ವಹಣೆ ನಿಯಮಗಳು 2004 ಹೆಸರಿನಲ್ಲಿ ಜಾರಿಗೆ ತಂದಿತು. ವಿವಿಧ ಯೋಜನೆಗಳ ಜಾರಿ, ಬಳಸಿದ ಹಣದ ದಾಖಲೀಕರಣ, ಕಾಮಗಾರಿಗಳ ಗುಣಮಟ್ಟ ಮತ್ತು ಖರ್ಚು ಮಾಡಿದ ಹಣ ತಾಳೆ- ಈ ಪ್ರಕ್ರಿಯೆಗಳನ್ನು ವರ್ಷಕ್ಕೊಮ್ಮೆ ಸಾರ್ವಜನಿಕರ ಸಮ್ಮುಖದಲ್ಲಿ ತನಿಖೆ ನಡೆಸಿ ತಪ್ಪು ಒಪ್ಪುಗಳನ್ನು ತಿಳಿಯುವ ಬಹಿರಂಗ ಪರಿಶೋ ಧನೆ, ತಪಾಸಣೆಯೇ ಜಮಾಬಂದಿ. ಕಾಮಗಾರಿಗಳ ಬಗ್ಗೆ ಸಂಶಯ ಬಂದರೆ, ಸಾರ್ವಜನಿಕರ ದೂರು ಬಂದರೆ ಸ್ಥಳ ಪರಿಶೀಲನೆ ಕೂಡ ಅದೇ ದಿನ ನಡೆಯುತ್ತದೆ. ಇದು ಪಂ.ರಾಜ್‌ ವ್ಯವಸ್ಥೆಯ ತ್ರಿಸ್ತರ ಆಡಳಿತ ಪದ್ಧತಿಯಲ್ಲಿ ನಡೆಯಬೇಕು.

ಯಾರು ಮಾಡಬೇಕು?
ಗ್ರಾ.ಪಂ. ಜಮಾಬಂದಿ ತಂಡವನ್ನು ತಾ. ಪಂ. ಇಒ ಮಾಡಬೇಕು. ಗ್ರಾ.ಪಂ. ಜಮಾಬಂದಿ ಪ್ರತಿ ವರ್ಷ ಆ.16ರಿಂದ ಸೆ. 15ರೊಳಗೆ ನಡೆಯಬೇಕು. ದಿನವನ್ನು ಪಂ.ಗಳಿಗೆ 30 ದಿನ ಮೊದಲು ತಿಳಿಸಿದ್ದು, ಗ್ರಾ.ಪಂ.ನ ಸದಸ್ಯರು, ನೌಕರರು ಹಾಜರಿರಬೇಕು. ಸಂಬಂಧಿಸಿದ ಕಿರಿಯ ಎಂಜಿನಿಯರ್‌ ಇರುವುದು ಕಡ್ಡಾಯ. ಇಒ ಅಥವಾ ಅವರು ನೇಮಿಸಿದ ನೋಡೆಲ್‌ ಅಧಿಕಾರಿ ಗಳು ಜಮಾಬಂದಿ ಮಾಡ ಬೇಕು. ಅಂತೆಯೇ ತಾ.ಪಂ.ಗಳಲ್ಲಿ ಜಿ.ಪಂ.ನಿಂದ ದಿನ ಮತ್ತು ಜನ ನಿಗದಿ ಪಡಿಸಬೇಕು. ನಿರ್ಧರಿತ ದಿನಕ್ಕಿಂತ ಮುಂಚೆಯೇ ತಂಡ ಆಗಮಿಸಿ ದಾಖಲೆಗಳ ಪರಿಶೀಲನೆ ನಡೆಸಬೇಕು.

Advertisement

ಈವರೆಗೆ ಯಾಕೆ ನಡೆದಿಲ್ಲ ಎಂದು ಗೊತ್ತಿಲ್ಲ. ಈ ವರ್ಷದಿಂದ ಆರಂಭಿಸಲಾಗಿದೆ. ಲೋಕಾಯುಕ್ತ ಪ್ರಕರಣ ವಿಚಾರಣೆ ಹಂತದಲ್ಲಿದೆ.
– ಕಿರಣ್‌ ಪೆಡ್ನೆಕರ್‌, ಉಪಕಾರ್ಯದರ್ಶಿ ಜಿ.ಪಂ. ಉಡುಪಿ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next