Advertisement

ಆಫ್ರಿಕ ದೇಶದ ಕತೆ: ಅನಾನ್ಸಿ ಮತ್ತು ಮಡಕೆ

06:00 AM May 13, 2018 | Team Udayavani |

ಒಂದು ಊರಿನಲ್ಲಿ ಅನಾನ್ಸಿ ಎಂಬ ವ್ಯಾಪಾರಿಯಿದ್ದ. ಅವನು ಬಡವರು ಸಹಾಯ ಕೇಳಿಕೊಂಡು ಬಂದರೆ ಅವರ ಬಳಿ ಏನಿದೆ ಎಂದು ಲೆಕ್ಕ ಹಾಕದೆ ಸಹಾಯ ಮಾಡುತ್ತಿರಲಿಲ್ಲ. ಆಮೇಲೆ ಅಸಲು, ಬಡ್ಡಿ ಎಂದು ಎಣಿಕೆ ಮಾಡಿ ಅವರಲ್ಲಿರುವುದನ್ನೆಲ್ಲ ಕಿತ್ತುಕೊಂಡು ನಿರ್ದಯವಾಗಿ ದೂರ ಓಡಿಸುತ್ತಿದ್ದ. ಅವನಿಗೊಬ್ಬ ಮಗನಿದ್ದ. ಅವನು ತಂದೆಯನ್ನು ಮೀರಿಸಿದ ಮೋಸಗಾರ. ಬೆಳೆಯುತ್ತಿದ್ದ ಒಬ್ಬ ಮೊಮ್ಮಗನಂತೂ ಅವರಿಬ್ಬರನ್ನೂ ದಾಟಿ ಲಾಭ ಹೇಗೆ ಮಾಡುವುದೆಂಬುದನ್ನು ಸದಾ ಯೋಚಿಸುತ್ತಿದ್ದ.

Advertisement

    ಒಂದು ಸಲ ಅನಾನ್ಸಿ ಕಾಡಿಗೆ ಹೋಗಿದ್ದ. ಅಲ್ಲಿ ಬಿದಿರು ಹಿಂಡಲಿನ ಬಳಿಯಲ್ಲಿ ತುಂಬ ಅಣಬೆಗಳು ಸಿಗುತ್ತಿದ್ದವು. ಇದನ್ನು ತಂದು ಹಸಿದ ಜನರಿಗೆ ದುಬಾರಿ ಬೆಲೆಗೆ ಮಾರಬಹುದೆಂಬುದು ಅವನ ಯೋಚನೆ. ಆದರೆ ಅಲ್ಲಿಗೆ ತಲುಪುವಾಗ ಕಂಡ ದೃಶ್ಯದಿಂದ ಭಯಗ್ರಸ್ಥನಾದ. ಒಂದು ದೈತ್ಯ ಹುಲಿಯ ಕೈ ಬಿದಿರುಗಳ ಎಡೆಯಲ್ಲಿ ಸಿಲುಕಿಕೊಂಡು ತೆಗೆಯಲಾಗದೆ ಒದ್ದಾಡುತ್ತಿತ್ತು. ಕೆಲವು ದಿನಗಳಿಂದ ನೀರು, ಆಹಾರಗಳಿಲ್ಲದೆ ಸೋತಿದ್ದ ಅದು ಅವನೊಂದಿಗೆ, “”ಅಯ್ನಾ ದಯಾಳುವೇ, ನಿನಗೆ ಪುಣ್ಯ ಬರುತ್ತದೆ. ದಯವಿಟ್ಟು ನನ್ನನ್ನು ಇಲ್ಲಿಂದ ಪಾರು ಮಾಡು. ಬದುಕಿರುವವರೆಗೂ ನಿನ್ನ ಸಹಾಯವನ್ನು ಮರೆಯದೆ ಬೇಕಾದಾಗ ಬಂದು ನನ್ನಿಂದಾಗುವ ನೆರವು ನೀಡುತ್ತೇನೆ” ಎಂದು ಬೇಡಿಕೊಂಡಿತು.

    ಅನಾನ್ಸಿಗೆ ಹುಲಿಯ ಮಾತು ಕೇಳಿ ಧೈರ್ಯ ಮೂಡಿತು. ನಿಂತಲ್ಲಿಯೇ ಹುಲಿಯನ್ನು ಪೂರ್ಣವಾಗಿ ಅಳತೆ ಮಾಡಿದ. ಅದರ ಕೈ, ಕಾಲುಗಳಲ್ಲಿ ದೊಡ್ಡ ಉಗುರುಗಳಿದ್ದವು. ಅದೆಲ್ಲವೂ ತನ್ನದಾದರೆ ಮಾರಾಟ ಮಾಡಿ ಎಷ್ಟು ಲಾಭ ಸಂಪಾದಿಸಬಹುದೆಂದು ಲೆಕ್ಕ ಹಾಕಿದ. “”ನಾನು ಯಾವ ಕೆಲಸ ಮಾಡುವುದಿದ್ದರೂ ಲಾಭ ಸಿಗದೆ ಇಳಿಯುವುದಿಲ್ಲ. ನಿನ್ನನ್ನು ಬಿಡಿಸಿದರೆ ಪ್ರಾಣದ ಬೆಲೆ ಚಿಕ್ಕದಲ್ಲ ನೋಡು. ನನ್ನ ಕೊಡುಗೆಗೆ ತಕ್ಕ ಪ್ರತಿಫ‌ಲ ಸಿಗಬೇಕು” ಎಂದು ಷರತ್ತು ವಿಧಿಸಿದ. ತನ್ನಲ್ಲಿರುವ ಕತ್ತಿಯಿಂದ ಬಿದಿರಿನ ಮೆಳೆಗಳನ್ನು ಬಿಡಿಸಿ ಹುಲಿಯನ್ನು ಅದರಿಂದ ಪಾರು ಮಾಡಿದ. ಆದರೆ ಹಿಡಿದುಕೊಂಡಿದ್ದ ಅದರ ಕೈಯನ್ನು ಬಿಡಲಿಲ್ಲ. “”ನಿನ್ನ ಉಪಕಾರಕ್ಕೆ ಧನ್ಯವಾದ. ನನ್ನನ್ನು ಹೋಗಲು ಬಿಡು” ಎಂದು ಹುಲಿ ಬೇಡಿತು.

    “”ಮೊದಲೇ ಹೇಳಿದ್ದೆನಲ್ಲ. ನನ್ನ ಉಪಕಾರಕ್ಕೆ ಯೋಗ್ಯ ಬೆಲೆ ಸಿಗಬೇಕು. ನಿನ್ನ ಕೈ ಕಾಲುಗಳ ಉಗುರುಗಳನ್ನು ಕತ್ತರಿಸಿಕೊಳ್ಳುತ್ತೇನೆ. ಅದರ ಮಾರಾಟದಿಂದ ಬರುವ ಲಾಭವೇ ನಿನಗೆ ಮಾಡಿದ ಉಪಕಾರದ ಪ್ರತಿಫ‌ಲ” ಎಂದು ಹೇಳಿದ ಅನಾನ್ಸಿ. ಹುಲಿ ಕಣ್ಣೀರುಗರೆಯಿತು. “”ಉಗುರುಗಳನ್ನು ಕಳೆದುಕೊಂಡರೆ ನನಗೆ ಬದುಕಾದರೂ ಎಲ್ಲಿದೆ? ಬೇಟೆಯಾಡುವ ಅಸ್ತ್ರಗಳಿಲ್ಲದೆ ಹೋದರೆ ಆಹಾರವಿಲ್ಲದೆ ಸಾಯುತ್ತೇನೆ. ಬೇರೆ ಏನಾದರೂ ಕೇಳು, ಕೊಡುತ್ತೇನೆ” ಎಂದು ಯಾಚಿಸಿತು. ಅನಾನ್ಸಿಗೆ ದಯೆ ಬರಲಿಲ್ಲ. ಅದರ ಉಗುರುಗಳನ್ನು ಕತ್ತರಿಸಿಕೊಳ್ಳಲು ಪ್ರಯತ್ನಿಸಿದ. ಆಗ ಆಕಾಶದಲ್ಲಿ ಒಂದು ಬೆಳಕು ಮೂಡಿತು. ಅಲ್ಲೊಂದು ಧ್ವನಿ ಕೇಳಿಸಿತು. “”ಅನಾನ್ಸಿ, ಹುಲಿಗೆ ಏನೂ ಹಾನಿಮಾಡದೆ ಬಿಟ್ಟುಬಿಡು. ನೀನು ಮಾಡಿದ ಸಹಾಯಕ್ಕೆ ಪ್ರತಿಫ‌ಲವೆಂದು ಒಂದು ಮಣ್ಣಿನ ಮಡಕೆಯನ್ನು ಭೂಮಿಗೆ ಇಳಿಸುತ್ತೇನೆ. ಅದರೊಳಗೆ ಕೈಯಿಳಿಸಿ ನಿನಗೆ ಏನು ಬೇಕೋ ಕೋರಿಕೋ. ಎಲ್ಲವೂ ಸಿದ್ಧಿಸುತ್ತದೆ” ಎಂದು ಅದು ಹೇಳಿತು. ಅವನು ಹುಲಿಯನ್ನು ಹೋಗಲು ಬಿಟ್ಟ. ಆತುರದಿಂದ ಆಕಾಶದೆಡೆಗೆ ಕೈ ಚಾಚಿದ. “”ಎಲ್ಲಿದೆ ಮಡಕೆ? ಕೊಡು ಕೊಡು” ಎಂದು ಕೇಳಿದ. ಮರುಕ್ಷಣವೇ ಒಂದು ಮಡಕೆ ಕೆಳಗಿಳಿದು ಬಂತು.

    ಅನಾನ್ಸಿ ಮಡಕೆಯನ್ನು ಎತ್ತಿಕೊಂಡು ಮನೆಗೆ ಬಂದ. ಮಗ ಮತ್ತು ಮೊಮ್ಮಗ ಬಳಿಗೆ ಓಡಿಬಂದರು. “”ಏನಿದು ಮಡಕೆ ತಂದಿದ್ದೀಯಾ! ಅಣಬೆ ತರುತ್ತಿದ್ದರೆ ಸ್ವಲ್ಪ$ಲಾಭವಾದರೂ ಬರುತ್ತಿತ್ತು. ಮಡಕೆಗೆ ಮೂರು ಕಾಸೂ ಹುಟ್ಟುವುದಿಲ್ಲ” ಎಂದು ಹೇಳಿದರು. “”ಸುಮ್ಮನಿರಿ. ನಿಮಗೆ ಇದರ ಗುಟ್ಟು ಗೊತ್ತಿಲ್ಲ. ಇದರಿಂದ ಏನು ಸಾಧಿಸಬಹುದು ಎಂದರೆ ಇಡೀ ಜಗತ್ತು ಈಗ ನಮ್ಮ ಕೈಯ ಒಳಗೆ ಇದೆ ಗೊತ್ತಾ? ಇದನ್ನು ಕೈಯಲ್ಲಿ ಹಿಡಿದು ಅರಮನೆ ಬೇಕೋ, ಬಂಗಾರದ ರಾಶಿ ಬೇಕೋ, ಬಗೆಬಗೆಯ ಪಕ್ವಾನ್ನಗಳು ಬೇಕೋ ಕೋರಿಕೊಂಡರೆ ಸಾಕು. ಮಡಕೆಯ ಮಹಿಮೆಯಿಂದ ತಕ್ಷಣ ಅದು ನಮಗೆ ಸಿಗುತ್ತದೆ” ಎಂದು ಅನಾನ್ಸಿ ಅದರ ಮಹಿಮೆಯನ್ನು ವರ್ಣಿಸಿದ.

Advertisement

    “”ಒಳ್ಳೆಯ ಮಡಕೆ. ಅಪ್ಪಾ$, ಈಗಲೇ ಅದನ್ನು ಕೈಯಲ್ಲಿ ಹಿಡಿದು ರಾಜ್ಯಾಧಿಕಾರ ನಮ್ಮದಾಗಬೇಕೆಂದು ಕೋರಿಕೊಳ್ಳಿ. ನಾವು ಅರಮನೆಗೆ ಹೋಗಿ ವೈಭವದಿಂದ ಕಾಲ ಕಳೆಯಬಹುದು” ಅನಾನ್ಸಿಯ ಮಗ ಹಿಗ್ಗಿನಿಂದ ಹೇಳಿದ. ಮೊಮ್ಮಗ ಅವನ ಮಾತನ್ನು ಒಪ್ಪಲಿಲ್ಲ. “”ತಾತಾ, ಅಪ್ಪನ ಮಾತು ಕೇಳಿ ಅವಸರಿಸಬೇಡ. ಮಡಕೆಯ ಶಕ್ತಿಯಿಂದ ಅರಮನೆಗೆ ಹೋಗುವುದು ಕಷ್ಟವಿಲ್ಲ ನಿಜ. ಆದರೆ ನಮಗೂ ಹಗೆಗಳಿರುವುದನ್ನು ಮರೆಯಬಾರದು. ಯಾರಾದರೂ ಒಬ್ಬ ಬುದ್ಧಿವಂತ ಈ ಮಡಕೆಯನ್ನು ಅಪಹರಿಸಿಬಿಟ್ಟರೆ ಏನಾಗುತ್ತದೆ ಗೊತ್ತಾ? ನಾವೆಲ್ಲರೂ ಬೀದಿಗೆ ಬಂದುಬಿಡುತ್ತೇವೆ” ಎಂದು ಭಯಪಡಿಸಿದ. ಅನಾನ್ಸಿಯ ಎದೆ ಢವಗುಟ್ಟಿತು. “”ನಿಜ ನಿನ್ನ ಮಾತು. ಮಡಕೆ ನಮ್ಮ ಬಳಿ ಶಾಶ್ವತವಾಗಿ ಉಳಿಯಬೇಕಿದ್ದರೆ ಏನು ಮಾಡಬೇಕು, ನೀನೇ ಹೇಳು” ಎಂದು ಕೇಳಿದ.

    “”ಮಡಕೆಯನ್ನು ಕೈಯಲ್ಲಿ ಹಿಡಿದು ಊರಿನ ಎಲ್ಲರ ಬುದ್ಧಿವಂತಿಕೆಯೂ ಇದರೊಳಗೆ ಸೇರಬೇಕು ಅಂತ ಕೇಳಿಕೋ. ಬಳಿಕ ಮಡಕೆಯನ್ನು ತೆಗೆದುಕೊಂಡು ಹೋಗಿ ಒಂದು ಬಹು ದೊಡ್ಡ ಮರದ ತುದಿಯ ಕೊಂಬೆಗೆ ಕಟ್ಟಿಬಿಡೋಣ. ನಮಗೇನಾದರೂ ಬೇಕಿದ್ದರೆ ಅಲ್ಲಿಗೆ ಹೋಗಿ ಕೇಳಿಕೊಳ್ಳುವುದರಿಂದ ಯಾರ ಕೈಗೂ ಸಿಗದಂತೆ ಅದನ್ನು ಕಾಪಾಡಬಹುದು” ಎಂದು ಮೊಮ್ಮಗ ಉಪಾಯವನ್ನು ಸೂಚಿಸಿದ. ಅನಾನ್ಸಿಗೆ ಸಮರ್ಪಕವಾದ ಯೋಚನೆ ಅನಿಸಿತು. ಮಡಕೆಯನ್ನು ಕೈಯಲ್ಲಿ ಹಿಡಿದು ಎಲ್ಲರ ಜಾಣತನವೂ ಅದರೊಳಗಿರಬೇಕೆಂದು ಕೋರಿದ. ಅದರಿಂದ ತುಂಬಿಕೊಂಡ ಮಡಕೆಯನ್ನು ಹೊತ್ತುಕೊಂಡು ಮಗ, ಮೊಮ್ಮಗನೊಂದಿಗೆ ದಟ್ಟ ಕಾಡಿಗೆ ಬಂದ. ಅವರು ಒಂದು ಬೃಹತ್‌ ಮರವನ್ನು ಕಂಡುಹಿಡಿದರು. ಮೂವರೂ ಮಡಕೆಯೊಂದಿಗೆ ಪ್ರಯಾಸದಿಂದ ಮರದ ತುತ್ತತುದಿಗೆ ತಲುಪಿದರು.

    ಮರದ ತುದಿಯಲ್ಲಿ ಒಂದು ದೊಡ್ಡ ಹೆಬ್ಟಾವು ಮಲಗಿಕೊಂಡಿತ್ತು. ಅದನ್ನು ಕಂಡು ಮೂವರಿಗೂ ಕೈಕಾಲು ನಡುಗಿತು. ಕೈಯಲ್ಲಿದ್ದ ಮಡಕೆ ಅನಾಮತ್ತಾಗಿ ಕೆಳಗೆ ಬಿದ್ದು ಒಡೆದು ಚೂರಾಯಿತು. ಬುದ್ಧಿಯನ್ನು ಕಳೆದುಕೊಂಡಿದ್ದ ಜನರು ಅನಾನ್ಸಿಯನ್ನು ಹಿಂಬಾಲಿಸಿ ಬಂದಿದ್ದರು. ಅವರು ಒಡೆದ ಮಡಕೆಯ ಚೂರುಗಳನ್ನು ನೆಕ್ಕಿ ಅದಕ್ಕೆ ಅಂಟಿಕೊಂಡಿದ್ದ ಬುದ್ಧಿಯನ್ನು ಮರಳಿ ಪಡೆದರು. ಅನಾನ್ಸಿಗೂ ಜೊತೆಗಿದ್ದವರಿಗೂ ಕೆಳಗಿಳಿಯಲು ಸಾಧ್ಯವಾಗಲಿಲ್ಲ. ತಮ್ಮನ್ನು ಕೆಳಗಿಳಿಸಲು ಜನರೊಂದಿಗೆ ಗೋಗರೆದರು. ಬುದ್ಧಿ ಕಲಿತುಕೊಂಡಿದ್ದ ಜನ, “”ಥೂ, ನಿಮ್ಮಂಥ ಮೋಸಗಾರರು ಊರಿಗೆ ಬರಬಾರದು. ಅಲ್ಲಿಯೇ ಇರಬೇಕು” ಎಂದು ತಿರಸ್ಕರಿಸಿ ಹಿಂತಿರುಗಿ ನೋಡದೆ ಮರಳಿ ಬಂದರು. ಮೇಲಿದ್ದವರು ಕೆಳಗಿಳಿಯಲಾಗದೆ ಹಸಿವು, ದಾಹಗಳಿಂದ ಬಳಲಿ ಅಲ್ಲಿಯೇ ಸತ್ತುಹೋದರು. ಜೇಡಗಳಾಗಿ ಹುಟ್ಟಿ ಬಲೆ ಹೆಣೆದು ಜೀವನ ನಡೆಸಿದರು. ಕೀಟಗಳನ್ನು ಉಪಾಯದಿಂದ ಬಳಿಗೆ ಕರೆದು ರಕ್ತ ಕುಡಿಯುತ್ತಿದ್ದ ಜೇಡಗಳಿಗೆ ಜನರು ಅನಾನ್ಸಿ ಎಂಬ ಹೆಸರಿಟ್ಟರು.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next